ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ಸೋಂಕು ಪ್ರಕರಣ ತೀವ್ರ ಉಲ್ಬಣ: ನಿರ್ಬಂಧ ಇನ್ನಷ್ಟು ಬಿಗಿಗೊಳಿಸಿದ ಸರಕಾರ
ಜೊಹಾನ್ಸ್ ಬರ್ಗ್, ಜೂ.28: ಕೊರೋನ ವೈರಸ್ ಸೋಂಕಿನ ಜತೆಗೆ, ರೂಪಾಂತರಿತ ವೈರಸ್ ಡೆಲ್ಟಾ ಸೋಂಕು ಪ್ರಕರಣ ಉಲ್ಬಣಗೊಂಡಿರುವುದರಿಂದ ದಕ್ಷಿಣ ಆಫ್ರಿಕಾ ಸರಕಾರ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. 4ನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದು , ಕರ್ಫ್ಯೂ ಜಾರಿಗೊಳಿಸಲಾಗಿದೆ. ಎಲ್ಲಾ ರೀತಿಯ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ಸರಕಾರ ಘೋಷಿಸಿದೆ.
ಹೊಸ ನಿರ್ಬಂಧಗಳು ಮೇ 27ರ ಮಧ್ಯರಾತ್ರಿಯಿಂದ ಮುಂದಿನ 15 ದಿನ ಚಾಲ್ತಿಯಲ್ಲಿರುತ್ತವೆ. ಆ ಬಳಿಕ ಪರಿಸ್ಥಿತಿ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ರವಿವಾರ ಬಾನುಲಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಸಿರಿಲ್ ರಮಾಫೋಸ ಘೋಷಿಸಿದ್ದಾರೆ. ಅಧ್ಯಕ್ಷರ ಭಾಷಣಕ್ಕೂ ಮುನ್ನ ಹೇಳಿಕೆ ನೀಡಿದ್ದ ಗೃಹ ಇಲಾಖೆ, ರವಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿದ ರೋಗದ 15,036 ಹೊಸ ಪ್ರಕರಣ ಹಾಗೂ 122 ಸಾವಿನ ಪ್ರಕರಣ ದಾಖಲಾಗಿದೆ ಎಂದು ಹೇಳಿತ್ತು.
ಸೋಂಕಿನ ಪ್ರಕರಣಗಳ 60%ಕ್ಕೂ ಅಧಿಕ ಪ್ರಕರಣ ಆರ್ಥಿಕ ಚಟುವಟಿಕೆಯ ಕೇಂದ್ರ ಎನಿಸಿರುವ ಗೌಟೆಂಗ್ ಪ್ರಾಂತ್ಯದಲ್ಲೇ ದಾಖಲಾಗಿರುವುದರಿಂದ ಇಲ್ಲಿ ಹೆಚ್ಚುವರಿ ನಿರ್ಬಂಧ ಜಾರಿಯಾಗಿದೆ. ವ್ಯಾಪಾರದ ಉದ್ದೇಶ, ಅಥವಾ ಹುಟ್ಟೂರಿಗೆ ವಾಪಸಾಗುವವರನ್ನು ಹೊರತುಪಡಿಸಿ, ಈ ನಗರಕ್ಕೆ ಬರುವ ಅಥವಾ ನಗರದಿಂದ ಹೊರಗೆ ಹೋಗುವುದನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ಮೊದಲು ಪತ್ತೆಯಾದ, ಈಗ ಕನಿಷ್ಟ 85 ನಗರಗಳಲ್ಲಿ ಕಂಡುಬಂದಿರುವ ಡೆಲ್ಟಾ ಸೋಂಕು, ಗೌಟೆನ್ ನಲ್ಲಿ ಸೋಂಕಿನ ಪ್ರಕರಣ ತೀವ್ರಗತಿಯಲ್ಲಿ ಉಲ್ಬಣಗೊಳ್ಳಲು ಮೂಲಕಾರಣವಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಎಲ್ಲಾ ರೀತಿಯ ಸಭೆ, ಸಮಾರಂಭಕ್ಕೆ ನಿಷೇಧ ಜಾರಿಯಾಗಿದೆ. ಮಾಸ್ಕ್, ಸುರಕ್ಷಿತ ಅಂತರ ಪಾಲನೆ ಮತ್ತಿತರ ನಿಯಮ ಪಾಲಿಸಿ, 50 ಜನರ ಸೀಮಿತ ಪಾಲ್ಗೊಳ್ಳುವಿಕೆಯಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ರೆಸ್ಟಾರೆಂಟ್ ಗಳಲ್ಲಿ ಪಾರ್ಸೆಲ್ ಒಯ್ಯಲು ಮಾತ್ರ ಅವಕಾಶವಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು. 14 ದಿನದ ಬಳಿಕ ಪರಿಸ್ಥಿತಿಯನ್ನು ಗಮನಿಸಿ ನಿರ್ಬಂಧ ಮುಂದುವರಿಸಬೇಕೇ ಎಂದು ನಿರ್ಧರಿಸಲಾಗುವುದು. ಆರ್ಥಿಕ ಚಟುವಟಿಕೆಗೆ ಅಡ್ಡಿಯಾಗದ ರೀತಿಯಲ್ಲಿ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಅಧ್ಯಕ್ಷ ರಮಾಫೋಸ್ ಹೇಳಿದ್ದಾರೆ