ಕರಿಯ ವರ್ಣೀಯರ ವಿರುದ್ಧದ ತಾರತಮ್ಯಕ್ಕೆ ಕೊನೆ: ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಕರೆ
ಜಿನೀವ (ಸ್ವಿಟ್ಸರ್ಲ್ಯಂಡ್), ಜೂ. 28: ಜಗತ್ತಿನಾದ್ಯಂತ ಕರಿಯ ವರ್ಣೀಯರ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಜನಾಂಗೀಯ ತಾರತಮ್ಯವನ್ನು ತಕ್ಷಣ ಕೊನೆಗೊಳಿಸಬೇಕಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಮಿಶೆಲ್ ಬ್ಯಾಚಲೆಟ್ ಸೋಮವಾರ ಕರೆ ನೀಡಿದ್ದಾರೆ. ಈ ಮೂಲಕ ಜಾರ್ಜ್ ಫ್ಲಾಯ್ಡ್ ಹತ್ಯೆಯಂಥ ಘಟನೆಗಳು ಪುನರಾವರ್ತಿಸುವುದನ್ನು ತಪ್ಪಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದಾರೆ.
ಆಫ್ರಿಕ ಮೂಲದ ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದ್ದು, ಇಂಥ ಜನಾಂಗೀಯ ತಾರತಮ್ಯ ಮತ್ತು ಹಿಂಸೆಗೆ ಜನರು ಸಹಿಷ್ಣುತೆ ಬೆಳೆಸಿಕೊಂಡಿದ್ದಾರೆ ಎಂದು ಅವರು ವರದಿಯೊಂದರಲ್ಲಿ ಹೇಳಿದ್ದಾರೆ.
ಜನಾಂಗೀಯ ತಾರತಮ್ಯವನ್ನು ಕೊನೆಗೊಳಿಸಲು ಮತ್ತು ಸಮಾನತೆಯನ್ನು ತರಲು ಅವರು ನಾಲ್ಕು ಅಂಶಗಳ ಕಾರ್ಯಸೂಚಿಯೊಂದನ್ನು ಮುಂದಿಟ್ಟಿದ್ದಾರೆ ಹಾಗೂ ಅವುಗಳನ್ನು ಜಆರಿಗೊಳಿಸುವಂತೆ ದೇಶಗಳನ್ನು ಒತ್ತಾಯಿಸಿದ್ದಾರೆ. ಐತಿಹಾಸಿಕ ಜನಾಂಗೀಯ ತಾರತಮ್ಯವನ್ನು ಕೊನೆಗೊಳಿಸುವುದ ಮತ್ತು ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಮುಂತಾದ ಗುಂಪುಗಳಿಗೆ ಹಣಕಾಸು ನೆರವು ನೀಡುವುದು- ಮಾನವಹಕ್ಕುಗಳ ಹೈಕಮಿಶನರ್ ಮುಂದಿಟ್ಟಿರುವ ಕಾರ್ಯಸೂಚಿಯ ಭಾಗವಾಗಿದೆ.