ಅಫ್ಘಾನ್: ಅಮೆರಿಕ ವಾಪಸಾತಿಯ ಬಳಿಕ ಅರಾಜಕತೆ ನೆಲೆಸಬಹುದು; ಪಾಕಿಸ್ತಾನದ ವಿದೇಶ ಸಚಿವ ಭವಿಷ್ಯ
ಮುಲ್ತಾನ್ (ಪಾಕಿಸ್ತಾನ), ಜೂ. 28: ಅಫ್ಘಾನಿಕಸ್ತಾನದಿಂದ ಅಮೆರಿಕ ವಾಪಸಾದ ಬಳಿಕ ಆ ದೇಶದಲ್ಲಿ ಹಿಂಸೆ ಮತ್ತು ಅರಾಜಕತೆ ತಾಂಡವವಾಡಬಹುದು ಎಂದು ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ರವಿವಾರ ಹೇಳಿದ್ದಾರೆ. ಅಫ್ಘಾನಿಸ್ತಾನದ ನಿಯಂತ್ರಣವನ್ನು ತಾಲಿಬಾನ್ ತೆಗೆದುಕೊಂಡರೆ ಅದರೊಂದಿಗಿನ ಗಡಿಯನ್ನು ಪಾಕಿಸ್ತಾನ ಮುಚ್ಚುವುದು ಎಂದು ಅವರು ಹೇಳಿದರು.
ಹಲವು ವರ್ಷಗಳ ಅವಧಿಯಲ್ಲಿ 35 ಲಕ್ಷಕ್ಕೂ ಹೆಚ್ಚು ಅಫ್ಘಾನ್ ನಿರಾಶ್ರಿತರನ್ನು ಪಾಕಿಸ್ತಾನ ಸ್ವೀಕರಿಸಿದೆ ಎಂದು ಹೇಳಿದ ಅವರು, ಆದರೆ ಇನ್ನು ಯಾರನ್ನು ಸ್ವೀಕರಿಸುವುದಿಲ್ಲ ಎಂದರು. ಅವರು ಮುಲ್ತಾನ್ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಇನ್ನೂ ಹೆಚ್ಚಿನ ನಿರಾಶ್ರಿತರನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಿಲ್ಲ. ನಾವು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕು ಎಂದರು. ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪಾಕಿಸ್ತಾನವು ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸುವುದು ಎಂದು ಅವರು ಹೇಳಿದರು.