×
Ad

ಗ್ರೀನ್ ಪಾಸ್‌ ಗೆ ಕೋವಿಶೀಲ್ಡ್ ಲಸಿಕೆ ಅನುಮೋದಿಸಲು ಕೋರಿಕೆ ಬಂದಿಲ್ಲ; ಯುರೋಪಿಯನ್ ಯೂನಿಯನ್

Update: 2021-06-29 22:38 IST

ಬ್ರಸೆಲ್ಸ್, ಜೂ.29: ಕೋವಿಶೀಲ್ಡ್ ಲಸಿಕೆಯನ್ನು ಯುರೋಪಿಯನ್ ಯೂನಿಯನ್ನ ಪ್ರವಾಸ ಪಾಸ್‌ಪೋರ್ಟ್‌ಗೆ ಅನುಮೋದಿಸುವಂತೆ ಯಾವುದೇ ಕೋರಿಕೆ ಬಂದಿಲ್ಲ ಎಂದು ಯುರೋಪಿಯನ್ ಯೂನಿಯನ್ ಹೇಳಿರುವುದಾಗಿ ವರದಿಯಾಗಿದೆ. ಯುರೋಪ್ಗೆ ಬರಲು ಅಥವಾ ಯುರೋಪ್‌ನಿಂದ ವಿದೇಶಕ್ಕೆ ತೆರಳಲು ಇಚ್ಛಿಸುವ ಪ್ರವಾಸಿಗರು ಯುರೋಪಿಯನ್ ಯೂನಿಯನ್ ಅನುಮೋದಿಸಿದ ಲಸಿಕೆಯನ್ನು ಪಡೆದಿರಬೇಕು ಎಂಬ ನಿಯಮವಿದೆ. 

ಈ ಪಟ್ಟಿಯಲ್ಲಿ ಅಸ್ಟ್ರಝೆನೆಕ ಲಸಿಕೆಯಿದೆ, ಆದರೆ ಭಾರತದಲ್ಲಿ ಸೆರಂ ಸಂಸ್ಥೆ ಉತ್ಪಾದಿಸುವ ಕೋವಿಶೀಲ್ಡ್ ಲಸಿಕೆ ಸೇರಿಲ್ಲ. ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಚರ್ಚಿಸಲಾಗುವುದು ಮತ್ತು ಗೊಂದಲ ಶೀಘ್ರ ಬಗೆಹರಿಯುವ ವಿಶ್ವಾಸವಿದೆ ಎಂದು ಸೆರಂ ಸಂಸ್ಥೆಯ ಸಿಇಒ ಆದರ್ ಪೂನಾವಾಲಾ ಈ ಹಿಂದೆ ಹೇಳಿಕೆ ನೀಡಿದ್ದರು. ಪ್ರವಾಸ ಪಾಸ್‌ಪೋರ್ಟ್‌ಗೆ  ಕೋವಿಶೀಲ್ಡ್ ಲಸಿಕೆ ಅನುಮೋದಿಸುವಂತೆ ಕೋರಿ ಸೋಮವಾರದವರೆಗೆ ಯಾವುದೇ ಕೋರಿಕೆ ಬಂದಿಲ್ಲ. ಕೋರಿಕೆ ಬಂದರೆ ಸೂಕ್ತ ಪ್ರಕ್ರಿಯೆಗಳ ಅನುಸಾರ ಕ್ರಮ ಕೈಗೊಳ್ಳಲಾಗುವುದು. ಹೊಸ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪರಿಗಣಿಸುವಂತೆ ಕೋರಿದರೆ ಮಾತ್ರ ಈ ಬಗ್ಗೆ ಗಮನಿಸಲಾಗುವುದು ಎಂದು ಯುರೋಪಿಯನ್ ಯೂನಿಯನ್ ಹೇಳಿಕೆ ನೀಡಿದೆ. 

ವ್ಯಾಕ್ಸ್‌ಝೆವ್ರಿಯಾ ಮತ್ತು ಕೋವಿಶೀಲ್ಡ್ ಲಸಿಕೆಗೆ ಏಕರೂಪದ ತಂತ್ರಜ್ಞಾನ ಬಳಕೆಯಾದರೂ, ಕೋವಿಶೀಲ್ಡ್ ಲಸಿಕೆಗೆ ಅನುಮೋದನೆ ನೀಡುವ ಮುನ್ನ ಸೆರಂ ಸಂಸ್ಥೆಯ ಲಸಿಕೆ ಉತ್ಪಾದನಾ ಪ್ರಕ್ರಿಯೆಯ ಮೌಲ್ಯಾಂಕನ ನಡೆಸಲಾಗುವುದು. ಕೋವಿಶೀಲ್ಡ್ ಲಸಿಕೆ ಬಳಕೆಗೆ ಪ್ರತ್ಯೇಕ ಅನುಮೋದನೆ ಅಗತ್ಯವಿದೆ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ. ವ್ಯಾಕ್ಸ್ಝೆವ್ರಿಯಾ ಲಸಿಕೆಯು ಆಸ್ಟ್ರಝೆನಿಕದ ಮತ್ತೊಂದು ಆವೃತ್ತಿಯಾಗಿದ್ದು ಯುರೋಪ್ನಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

ಯುರೋಪಿಯನ್ ಯೂನಿಯನ್ನ ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಿಸುವವರಿಗೆ ನೆರವಾಗಲು ಗ್ರೀನ್ ಪಾಸ್ ಎಂಬ ಸರಳ ವ್ಯವಸ್ಥೆ ಮಾಡಲಾಗಿದೆ. ಈ ಪಾಸ್ ಪಡೆಯಲು ಕೊರೋನ ವಿರುದ್ಧದ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದ್ದು ಇದುವರೆಗೆ ಬಯೋಟೆಕ್ನ ಪೈಝರ್, ಮೊಡೆರ್ನ, ಆಕ್ಸ್ ಫರ್ಡ್ನ ಅಸ್ಟ್ರಾಝೆನೆಕ ಮತ್ತು ಜಾನ್ಸೆನ್ ಫಾರ್ಮಾಸ್ಯುಟಿಕಾ ಎನ್ವಿ ಲಸಿಕೆಗೆ ಯುರೋಪಿಯನ್ ಒಕ್ಕೂಟದ ಮಾನ್ಯತೆ ಲಭಿಸಿದೆ. ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಡೆಲ್ಟಾ ರೂಪಾಂತರಿ ವೈರಸ್ ಸೋಂಕಿನ ವಿರುದ್ಧ 61% ಪರಿಣಾಮಕಾರಿ, 2 ಡೋಸ್ ಪಡೆದರೆ 65% ಪರಿಣಾಮಕಾರಿಯಾಗಿದೆ ಎಂದು ಜೂನ್ನಲ್ಲಿ ಭಾರತದ ಲಸಿಕೀಕರಣದ ರಾಷ್ಟ್ರೀಯ ತಾಂತ್ರಿಕ ಸಲಹೆಗಾರರ ತಂಡ ಹೇಳಿದೆ. ಡೆಲ್ಟಾ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಹಲವು ದೇಶಗಳು ಮತ್ತೆ ನಿಬರ್ಂಧ ಜಾರಿಗೊಳಿಸಲು ನಿರ್ಧರಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News