ಶಾಲೆ ಆರಂಭ: ಸರಕಾರಕ್ಕೆ ಬೇಕಿದೆ ಬೆಂಬಲ

Update: 2021-06-30 05:21 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜುಲೈ 19, 22ಕ್ಕೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸುವುದಾಗಿ ರಾಜ್ಯ ಸರಕಾರ ಕೊನೆಗೂ ಘೋಷಣೆ ಮಾಡಿದೆ. ಕೊರೋನ ಪ್ರವಾಹದಲ್ಲಿ, ಪರೀಕ್ಷೆ ನಡೆಸಲು ಹೊರಟಿರುವುದು ಸರಕಾರದ ಪಾಲಿಗೂ ಒಂದು ಪರೀಕ್ಷೆಯೇ ಆಗಿದೆ. ಸರಿಯಾದ ಪಾಠ, ಪ್ರವಚನಗಳೇ ಇಲ್ಲದೆ ಮಕ್ಕಳು ಪರೀಕ್ಷೆಯನ್ನು ಎದುರಿಸಲು ಹೊರಟಿದ್ದಾರೆ. ಅವರ ಪಾಲಿಗೆ ಎರಡೆರಡು ಪ್ರಶ್ನೆ ಪತ್ರಿಕೆಗಳಿವೆ. ಒಂದೆಡೆ ಶಾಲಾ ಪಠ್ಯದ ಪ್ರಶ್ನೆ ಪತ್ರಿಕೆ, ಇನ್ನೊಂದೆಡೆ ಕೊರೋನ ಪ್ರಶ್ನೆ ಪತ್ರಿಕೆ. ಮೊದಲನೆಯದನ್ನು ಎದುರಿಸಬಲ್ಲರಾದರೂ, ಎರಡನೆಯ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವರೇ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಸರಕಾರವೂ ಈ ಮೂಲಕ ‘ಅಗ್ನಿ ಪರೀಕ್ಷೆ’ಗೆ ಹೊರಟಿದೆ. ಪರೀಕ್ಷೆ ಘೋಷಿಸುವುದೇನೋ ಸರಿ, ನಾಳೆ ಮಕ್ಕಳಿಗೆ ಕೊರೋನ ಸೋಂಕು ತಗಲಿದ್ದೇ ಆದರೆ, ಅದರ ಹೊಣೆಯನ್ನು ಸರಕಾರ ಹೊತ್ತುಕೊಳ್ಳಬೇಕಾಗುತ್ತದೆ. ವಿರೋಧ ಪಕ್ಷಗಳು ಒಂದಾಗಿ, ‘ಸರಕಾರವೇ ಮಕ್ಕಳನ್ನು ಕೊಂದಿತು’ ಎಂದು ಆರೋಪಿಸಬಹುದು. ಈಗಾಗಲೇ ವೈದ್ಯಕೀಯ ಮಾಫಿಯಾಗಳು, ‘ಮೂರನೇ ಅಲೆಯ ಹೆಸರಿನಲ್ಲಿ’ ಸೋಂಕಿತರನ್ನು ಬಲಿ ಹಾಕಲು ಮಚ್ಚು ಹಿಡಿದು ನಿಂತಿವೆ. ಅಷ್ಟೇ ಅಲ್ಲ, ಮೂರನೇ ಅಲೆಯ ಪರಿಣಾಮ ಮಕ್ಕಳ ಮೇಲಾಗುತ್ತದೆ ಎಂದು ಕೆಲವು ತಜ್ಞರು ಭವಿಷ್ಯವನ್ನೂ ನುಡಿದಿದ್ದಾರೆ. ಶಾಲೆ ಪುನಾರಂಭಗೊಂಡು ಮಕ್ಕಳು ಕೊರೋನ ಸೋಂಕಿತರಾದರೆ ‘ನಾವು ಮೊದಲೇ ಹೇಳಿದ್ದೆವು’ ಎಂದು ಸರಕಾರದ ಮೇಲೆ ಗೂಬೆ ಕೂರಿಸುವ ಸಾಧ್ಯತೆಗಳಿವೆ.

ಶಾಲೆ ಪುನಾರಂಭಕ್ಕೆ ಹಲವು ತಜ್ಞರು ಈಗಾಗಲೇ ಬೇಡಿಕೆ ಮುಂದಿಟ್ಟಿದ್ದಾರೆ. ಲಾಕ್‌ಡೌನ್ ಹೆಸರಿನಲ್ಲಿ ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಬೇಡಿ, ಮಕ್ಕಳು ಶಿಕ್ಷಣವಿಲ್ಲದೆ ಮನೆಯಲ್ಲೇ ಉಳಿದರೆ ಅದು ದೂರಗಾಮಿ ದುಷ್ಪರಿಣಾಮಗಳನ್ನು ಬೀರಬಹುದು ಎಂದು ಅವರು ಸರಕಾರವನ್ನು ಎಚ್ಚರಿಸಿದ್ದಾರೆ. ಆನ್‌ಲೈನ್ ಶಿಕ್ಷಣದ ಬಗ್ಗೆಯೂ ವ್ಯಾಪಕ ಟೀಕೆಗಳಿವೆ. ಸದ್ಯ ಖಾಸಗಿ ಶಾಲೆಗಳು ನೀಡುತ್ತಿರುವ ಆನ್‌ಲೈನ್ ಶಿಕ್ಷಣ ಕಾಟಾಚಾರದ್ದಾಗಿದೆ. ಕೇವಲ ಶುಲ್ಕಗಳನ್ನು ವಸೂಲಿ ಮಾಡುವುದಕ್ಕಾಗಿ ಶಾಲೆಗಳು ಆನ್‌ಲೈನ್ ಪಾಠ ಆರಂಭಿಸಿವೆ ಎಂಬ ಆರೋಪಗಳಿವೆ. ಹಾಗೆಯೇ ಶೇ. 60ಕ್ಕೂ ಅಧಿಕ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಂದ ಆನ್‌ಲೈನ್ ಶಿಕ್ಷಣದಿಂದಲೂ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಸರಕಾರ ಸಕಲ ಮುನ್ನೆಚ್ಚರಿಕೆಯೊಂದಿಗೆ ಶಾಲೆಯನ್ನು ಪುನಾರಂಭಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ.

ಸರಕಾರ ಶಾಲೆಯನ್ನು ಆರಂಭಿಸಲು ಬೇರೆ ಬೇರೆ ಪ್ರಯತ್ನಗಳನ್ನು ಈ ಹಿಂದೆ ಮಾಡಿತ್ತು ಎನ್ನುವುದನ್ನು ನಾವು ಈ ಸಂದರ್ಭದಲ್ಲಿ ಮರೆಯಬಾರದು. ಆದರೆ ಹಾಗೆ ಆರಂಭಿಸಿದ ಕೆಲವೇ ದಿನಗಳಲ್ಲಿ ಆರೋಪ, ಟೀಕೆಗಳಿಗೆ ಹೆದರಿ ಅದರಿಂದ ಹಿಂದೆ ಸರಿದಿತ್ತು. ಶಿಕ್ಷಕರಿಗೆ ಕೊರೋನ ಬಂದಾಗ, ಸರಕಾರವೇ ಆ ಸಾವಿಗೆ ಹೊಣೆ ಎಂದು ಮಾಧ್ಯಮಗಳು, ವಿರೋಧಪಕ್ಷಗಳು ಜೊತೆಗೂಡಿ ಸರಕಾರವನ್ನು ಟೀಕಿಸತೊಡಗಿದವು. ಕೊರೋನ ವೈಫಲ್ಯಕ್ಕೆ ಸಂಬಂಧಿಸಿ ಈಗಾಗಲೇ ಭಾರೀ ಆರೋಪಗಳನ್ನು ಎದುರಿಸುತ್ತಿರುವ ಸರಕಾರ, ಶಾಲೆಗಳನ್ನು ತೆರೆದು ಇನ್ನೊಂದು ಆರೋಪವನ್ನು ಮೈಮೇಲೆ ಎಳೆದುಕೊಳ್ಳುವುದು ಯಾಕೆ ಎಂದುಕೊಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.

ಈ ನಿಟ್ಟಿನಲ್ಲಿ ಶಾಲೆಗಳನ್ನು ತೆರೆಯುವ ಯೋಜನೆಯನ್ನು ಮುಂದೆ ಹಾಕುತ್ತಲೇ ಇದೆ. ಆದರೆ ಶಾಲೆಗಳನ್ನು ಹೀಗೆ ಮುಚ್ಚುವುದು, ನಮ್ಮ ನಾಡಿನ ಬೆಳಕಿನ ಹಾದಿಯನ್ನೇ ಮುಚ್ಚಿ ಹಾಕಿದಂತೆ. ಕೊರೋನಕ್ಕೆ ಹೆದರಿ ಶಾಲೆಗಳನ್ನು ಸರಕಾರ ಶಾಶ್ವತವಾಗಿ ಮುಚ್ಚಲಿದೆಯೆ ಎಂಬ ಪ್ರಶ್ನೆ ಜನರಲ್ಲಿ ಎದ್ದಿದೆ. ಯಾಕೆಂದರೆ, ಕೊರೋನ ನಮ್ಮ ನಡುವೆ ಶಾಶ್ವತವಾಗಿ ಉಳಿಯಲಿದೆ. ಲಸಿಕೆ ಕೂಡ ಕೊರೋನವನ್ನು ಸಂಪೂರ್ಣವಾಗಿ ನಿವಾರಿಸುವುದಿಲ್ಲ ಎನ್ನುವುದನ್ನು ತಜ್ಞರೇ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೊರೋನ ಅಲೆಗಳು ಬೇರೆ ಬೇರೆ ರೂಪಗಳಲ್ಲಿ ಕಂಡು ಬರುವ ಸಾಧ್ಯತೆಗಳಿವೆ. ಆದುದರಿಂದ ಶಾಲೆಗಳನ್ನು ಕೊರೋನ ಹೆಸರಿನಲ್ಲಿ ತೆರೆಯುವುದಿಲ್ಲ ಎಂದು ಸರಕಾರ ಹೇಳುವಂತಿಲ್ಲ. ಹಾಗೆಯೇ ಆನ್‌ಲೈನ್‌ನಲ್ಲಿ ಇಂದು ನಡೆಯುತ್ತಿರುವುದು ಶಿಕ್ಷಣವೇ ಅಲ್ಲ. ಅದು ಶಿಕ್ಷಣದ ಅಣಕ ಮಾತ್ರವಾಗಿದೆ. ಆದುದರಿಂದ ಶಾಲೆಗಳನ್ನು ತೆರೆಯಲು ಸರಕಾರ ಮುಂದಾಗಲೇ ಬೇಕು. ಹಾಗೆಯೇ, ಸುರಕ್ಷಿತ ಅಂತರಗಳನ್ನು ಕಾಪಾಡಲು ಬೇಕಾದ ಸರ್ವ ಕ್ರಮಗಳನ್ನು ತೆಗೆದುಕೊಂಡು ಧೈರ್ಯದಿಂದ ಹೆಜ್ಜೆ ಮುಂದಿಡಬೇಕಾಗಿದೆ.

ಸಾಧ್ಯವಾದರೆ ಶಾಲೆಗಿಬ್ಬರಂತೆ ಸಾರ್ವಜನಿ ವೈದ್ಯರನ್ನು ಮೀಸಲಿಡಬೇಕು. ಈ ವೈದ್ಯರು ವಾರಕ್ಕೆ ಎರಡು ಬಾರಿ ಶಾಲೆಗಳಿಗೆ ಭೇಟಿ ನೀಡುವುದು, ಆರೋಗ್ಯದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದನ್ನು ಮಾಡಬೇಕು. ಇದೇ ಸಂದರ್ಭದಲ್ಲಿ ಸರಕಾರದ ಸದ್ಯದ ಸಂದಿಗ್ಧತೆಯನ್ನು ಮಾಧ್ಯಮಗಳು ಮತ್ತು ವಿರೋಧಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬಳಸಬಾರದು. ಶಾಲೆ ತೆರೆದರೆ, ‘ಮಕ್ಕಳಿಗೆ ಕೊರೋನ ಅಂಟಿಸಿದ ಸರಕಾರ’ ಎಂದು ಟೀಕಿಸುವುದು, ಮುಚ್ಚಿದರೆ ‘ಮಕ್ಕಳಿಗೆ ಶಿಕ್ಷಣ ನೀಡದೆ ಸರಕಾರ’ ಎಂದು ಬೊಬ್ಬಿಡುವುದು ನಿಲ್ಲಬೇಕು. ನಮ್ಮ ಮಕ್ಕಳ ಭವಿಷ್ಯದ ಮೇಲೆ ಕಾಳಜಿಯಿಟ್ಟು ವಿರೋಧಪಕ್ಷಗಳು, ಮಾಧ್ಯಮಗಳು ಮತ್ತು ಪೋಷಕರು ಜೊತೆ ಸೇರಿ ಸರಕಾರದ ಶಾಲೆ ತೆರೆಯುವ ಕ್ರಮವನ್ನು ಬೆಂಬಲಿಸಬೇಕು. ಈ ನಿಟ್ಟಿನಲ್ಲಿ ಸರಕಾರ ತಕ್ಷಣ ಸರ್ವ ಪಕ್ಷ ಸಭೆಯನ್ನು ಕರೆಯಬೇಕು. ಸರ್ವ ಪಕ್ಷದ ನಾಯಕರ, ಸಲಹೆ ಸೂಚನೆ, ಬೆಂಬಲಗಳನ್ನು ಪಡೆದು ಶಾಲೆಗಳನ್ನು ತೆರೆಯಲು ಮುಂದಾಗಬೇಕು. ಈ ಸಂದರ್ಭದಲ್ಲಿ ಕೆಲವು ಮಕ್ಕಳು ಕೊರೋನ ಸೋಂಕಿತರಾಗಬಹುದಾದ ಸಾಧ್ಯತೆಗಳೂ ಇವೆ. ಆದುದರಿಂದ ಎಲ್ಲ ಆಸ್ಪತ್ರೆಗಳಲ್ಲಿ ಮಕ್ಕಳ ವಿಶೇಷ ವಿಭಾಗವನ್ನು ತೆರೆದು ಅವರಿಗೆ ವೈದ್ಯಕೀಯ ಸೌಕರ್ಯಗಳನ್ನು ಒದಗಿಸಬೇಕು.

ತರಗತಿಗಳೇ ಇಲ್ಲದೆ ಮಕ್ಕಳನ್ನು ಎಸೆಸೆಲ್ಸಿ ಪರೀಕ್ಷೆಗೆ ಕೂರಿಸುವುದು ಆಭಾಸ ಅನ್ನಿಸಿದರೂ, ಶಾಲೆ ತೆರೆಯುವುದಕ್ಕೆ ಈ ಪರೀಕ್ಷೆ ಒಂದು ಪ್ರಯೋಗವಾಗಲಿ. ಎಸೆಸೆಲ್ಸಿ ಪರೀಕ್ಷೆಯನ್ನು ತೀರಾ ಗಂಭೀರವಾಗಿ, ಮಕ್ಕಳಿಗೆ ಒತ್ತಡವಾಗುವಂತೆ ನಡೆಸಬಾರದು. ಪರೀಕ್ಷೆ ಸಾಂಕೇತಿಕವಾಗಿರಲಿ. ಕೊರೋನ ಬಗ್ಗೆ ಪೋಷಕರಲ್ಲೇ ಆತಂಕಗಳಿರುವಾಗ, ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಭಯ, ಆತಂಕ, ಒತ್ತಡಗಳಿರಬಹುದು. ಇವುಗಳ ಜೊತೆಗೆ ಅವರು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ ಎನ್ನುವ ಎಚ್ಚರಿಕೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಇರಬೇಕು. ಕೊರೋನದ ಕುರಿತಂತೆ ಅನಗತ್ಯ ಭಯವನ್ನು ಬಿತ್ತದೆ, ಅವರಲ್ಲಿ ಜಾಗೃತಿಯನ್ನು ಬಿತ್ತುವ ಕೆಲಸ ನಡೆಯಬೇಕಾಗಿದೆ. ಎಸೆಸೆಲ್ಸಿ ಪರೀಕ್ಷೆಯನ್ನು ಈ ದೃಷ್ಟಿಯಲ್ಲಿ ಸದ್ಬಳಕೆ ಮಾಡುವುದು ಶಿಕ್ಷಕರ ಹೊಣೆಗಾರಿಕೆಯಾಗಿದೆ. ಎಸೆಸೆಲ್ಸಿ ಪರೀಕ್ಷೆಯ ಬೆನ್ನಿಗೇ, ಎಲ್ಲ ತರಗತಿಗಳನ್ನು ತೆರೆಯುವುದಕ್ಕೆ ತಯಾರಿ ನಡೆಯಲಿ. ಶಿಕ್ಷಣ ಪುನರಾರಂಭಿಸುವ ಈ ಪರೀಕ್ಷೆಯಲ್ಲಿ ಸರಕಾರ ಗೆಲ್ಲಬೇಕಾಗಿದೆ. ವಿರೋಧ ಪಕ್ಷ, ಮಾಧ್ಯಮಗಳು ಮತ್ತು ಪೋಷಕರು ಜೊತೆ ನಿಲ್ಲದೇ ಈ ಗೆಲುವನ್ನು ಸರಕಾರ ತನ್ನದಾಗಿಸಲು ಸಾಧ್ಯವಿಲ್ಲ. ಶಾಲೆಗಳನ್ನು ತೆರೆಯುವಲ್ಲಿ ಸರಕಾರ ಗೆದ್ದರೆ, ಅದು ನಮ್ಮ ಮಕ್ಕಳ ಭವಿಷ್ಯದ ಗೆಲುವಾಗಿರುತ್ತದೆ. ನಮ್ಮ ಮಕ್ಕಳ ಭವಿಷ್ಯವೇ ನಮ್ಮ ನಾಡಿನ ಭವಿಷ್ಯ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News