ಇಂಡೋನೇಶ್ಯ: ದೋಣಿ ಮುಳುಗಿ ಕನಿಷ್ಟ 7 ಸಾವು ಹಲವರು ನಾಪತ್ತೆ

Update: 2021-06-30 16:48 GMT

  ಜಕಾರ್ತ, ಜೂ.30: ಇಂಡೋನೇಶ್ಯಾದ ಬಾಲಿ ತೀರದ ಬಳಿಯ ಸಮುದ್ರದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿದ ಪರಿಣಾಮ ಕನಿಷ್ಟ 7 ಮಂದಿ ಸಾವನ್ನಪ್ಪಿದ್ದು ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

57 ಪ್ರಯಾಣಿಕರು ಹಾಗೂ ಸಿಬಂದಿಗಳು ಪ್ರಯಾಣಿಸುತ್ತಿದ್ದ ಕೆಎಂಪಿ ಯುನೀಸಿ ಎಂಬ ದೋಣಿ ಮಂಗಳವಾರ ಪಶ್ಚಿಮ ಇಂಡೋನೇಶ್ಯಾದ ಗಿಲಿಮನೂಕ್ ಬಂದರಿನ ಬಳಿಯ ಸಮುದ್ರದಲ್ಲಿ ಮುಳುಗಿದೆ. ತಕ್ಷಣ ರಕ್ಷಣೆ ಮತ್ತು ಪರಿಹಾರ ತಂಡ ಸ್ಥಳಕ್ಕೆ ಧಾವಿಸಿದ್ದು ಹಲವರನ್ನು ರಕ್ಷಿಸಿ ನೀರಿನಿಂದ ಮೇಲೆತ್ತಿದೆ. ಆದರೆ 7 ಮಂದಿ ಸಾವನ್ನಪ್ಪಿದ್ದು 11 ಮಂದಿ ನಾಪತ್ತೆಯಾಗಿದ್ದಾರೆ. ಮಂಗಳವಾರ ರಾತ್ರಿ ಬೆಳಕಿನ ಸಮಸ್ಯೆಯಿಂದ ರಕ್ಷಣಾ ಕಾರ್ಯ ಸ್ಥಗಿತಗೊಳಿಸಿದ್ದು ಬುಧವಾರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಬಾಲಿ ಶೋಧನೆ ಮತ್ತು ರಕ್ಷಣೆ ಪಡೆಯ ಮುಖ್ಯಸ್ಥ ಗೆಡೆ ದರ್ಮಡ ಹೇಳಿದ್ದಾರೆ. ದೋಣಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ಮೂಲಗಳು ಹೇಳಿವೆ. ಸುಮಾರು 17,000 ದ್ವೀಪಗಳನ್ನು ಹೊಂದಿರುವ ಇಂಡೋನೇಶ್ಯಾದಲ್ಲಿ ಜನರು ಸಂಚಾರಕ್ಕೆ ಹೆಚ್ಚಾಗಿ ದೋಣಿಗಳನ್ನೇ ಬಳಸುತ್ತಾರೆ. ಇಲ್ಲಿ ಸಮುದ್ರದಲ್ಲಿ ದೋಣಿ ಮುಳುಗುವ ಪ್ರಕರಣವೂ ಅಧಿಕ.

2018ರಲ್ಲಿ ಸುಮತ್ರಾ ದ್ವೀಪದಲ್ಲಿ ದೋಣಿ ಮುಳುಗಿ ಸುಮಾರು 160 ಮಂದಿ ಮೃತರಾಗಿದ್ದರು. 2009ರಲ್ಲಿ ಸುಲವೆಸಿ ಬಂದರಿನ ಬಳಿ ಸಮುದ್ರದಲ್ಲಿ ದೋಣಿ ಮುಳುಗಿ 300ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News