ಮೊದಲ ಬಾರಿಗೆ ಐವರು ಕೋವಿಡ್ ರೋಗಿಗಳಲ್ಲಿ ಗುದನಾಳದ ರಕ್ತಸ್ರಾವ ಪ್ರಕರಣ ಪತ್ತೆ, ಓರ್ವ ಸಾವು
ಹೊಸದಿಲ್ಲಿ, ಜೂ. 30: ಸಾಂಕ್ರಾಮಿಕ ರೋಗದ ಎರಡನೇ ಅಲೆ ಸಂದರ್ಭ ದಿಲ್ಲಿಯ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಐವರು ಕೋವಿಡ್ ರೋಗಿಗಳು ಸಿಟೊಮೆಗಲೋವೈರಸ್ ಸಂಬಂಧಿತ ಗುದನಾಳದ ರಕ್ತಸ್ರಾವಕ್ಕೆ ಒಳಗಾಗಿದ್ದಾರೆ.
ಇದರಿಂದ ಓರ್ವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಮಂಗಳವಾರ ತಿಳಿಸಿದೆ. ಭಾರತದಲ್ಲಿ ಸಾಮಾನ್ಯ ರೋಗ ನಿರೋಧಕ ಶಕ್ತಿ ಇರುವ ವ್ಯಕ್ತಿಗಳಲ್ಲಿ ಇದು ಮೊದಲ ಬಾರಿಗೆ ವರದಿಯಾಗಿದೆ ಎಂದು ಅದು ತಿಳಿಸಿದೆ. ಈ ರೋಗಿಗಳು ಕೋವಿಡ್ ಸೋಂಕು ದೃಢಪಟ್ಟ ಬಳಿಕ 20ರಿಂದ 30 ದಿನಗಳ ಕಾಲ ಈ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಇದುವರೆಗೆ ಅಂಗಾಂಗ ಕಸಿ ಮಾಡಿಸಿಕೊಂಡ, ಕ್ಯಾನ್ಸರ್ ಅಥವಾ ಏಡ್ಸ್ ರೋಗವಿರುವ ಸಾಮಾನ್ಯ ರೋಗ ನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳ ಮೇಲೆ ಮಾತ್ರ ಇದು ಪರಿಣಾಮ ಉಂಟು ಮಾಡುತ್ತಿತ್ತು. ಆದರೆ, ಈಗ ಭಾರತದಲ್ಲಿ ಮೊದಲ ಬಾರಿಗೆ ಸಾಮಾನ್ಯ ರೋಗ ನಿರೋಧಕ ಶಕ್ತಿ ಇರುವ ವ್ಯಕ್ತಿಗಳಲ್ಲಿ ಸಿಟೋಮೆಗಲೂವೈರಸ್ ಸಂಬಂಧಿತ ಗುದನಾಳದ ರಕ್ತಸ್ರಾವ ವರದಿಯಾಗಿದೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಕೋವಿಡ್ ಸೋಂಕಿನ ಎರಡನೇ ಅಲೆಯಾದ ಎಪ್ರಿಲ್-ಮೇಯಲ್ಲಿ ನಾವು 5 ಸಿಟೊಮೆಗಲೋವೈರಸ್ ಸಂಬಂಧಿತ ಗುದನಾಳದ ರಕ್ತಸ್ರಾವದ ಪ್ರಕರಣಗಳನ್ನು ಗಮನಿಸಿದ್ದೇವೆ ಎಂದು ಆಸ್ಪತ್ರೆಯ ಲಿವರ್ ಗ್ಯಾಸ್ಟೋಎಂಟರಾಲಜಿ ಆ್ಯಂಡ್ ಪೇಂಕ್ರಿಯಾಟಿಕೋಬಿಲರಿ ಸಯನ್ಸಸ್ ಸಂಸ್ಥೆಯ ಮುಖ್ಯಸ್ಥ ಪ್ರೊ. ಅನಿಲ್ ಅರೋರಾ ಹೇಳಿದ್ದಾರೆ.