ಅಂತರ್‌ರಾಷ್ಟ್ರೀಯ ವಿಮಾನಯಾನ ನಿರ್ಬಂಧ ಜುಲೈ 31ರ ವರೆಗೆ ವಿಸ್ತರಣೆ

Update: 2021-06-30 18:10 GMT

ಅಹ್ಮದಾಬಾದ್, ಜೂ. 30: ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂತರ್ ರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ಹೇಳಿದೆ.

ಆದರೆ, ನಿರ್ದಿಷ್ಟ ಪ್ರಕರಣದಲ್ಲಿ ಆಯ್ದ ಮಾರ್ಗಗಳಲ್ಲಿ ನಿಗದಿತ ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಅನುಮತಿ ನೀಡಲಾಗುವುದು ಎಂದು ಜಿಡಿಸಿಎ ತಿಳಿಸಿದೆ.

ಹಾರಾಟ ನಿಷೇಧ ಅನುಮತಿ ಪಡೆದ ಸರಕು ಸಾಗಾಟ ವಿಮಾನಗಳಿಗೆ ಅನ್ವಯವಾಗುವುದಿಲ್ಲ ಎಂದು ಅದು ಹೇಳಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತದಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಸೇವೆಯ ಮೇಲೆ 2020 ಮಾರ್ಚ್ 23ರಂದು ನಿರ್ಬಂಧ ವಿಧಿಸಲಾಗಿತ್ತು.

ಆದರೆ, ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ 2020 ಮೇಯಿಂದ ಹಾಗೂ ‘ಏರ್ ಬಬಲ್’ ವ್ಯವಸ್ಥೆ ಅಡಿಯಲ್ಲಿ ನಿಗದಿತ ರಾಷ್ಟ್ರಗಳಿಂದ 2020 ಜುಲೈಯಿಂದ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳ ಸೇವೆ ಆರಂಭಿಸಲಾಗಿತ್ತು. ಅಮೆರಿಕ, ಬ್ರಿಟನ್, ಯುಎಇ, ಕೆನ್ಯಾ, ಭೂತಾನ್ ಹಾಗೂ ಫ್ರಾನ್ಸ್ ಸೇರಿದಂತೆ ಸುಮಾರು 24 ದೇಶಗಳೊಂದಿಗೆ ಭಾರತ ‘ಏರ್ ಬಬಲ್’ ಒಪ್ಪಂದ ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News