ಏಳನೇ ವೇತನ ಆಯೋಗ: ಡಿಎ ಮತ್ತು ಡಿಆರ್‌ ಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ಕೇಂದ್ರ ಸರಕಾರಿ ನೌಕರರು

Update: 2021-07-01 17:03 GMT

ಹೊಸದಿಲ್ಲಿ, ಜು.1: ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ತಡೆಹಿಡಿಯಲ್ಪಟ್ಟಿದ್ದ ತಮ್ಮ ತುಟ್ಟಿಭತ್ತೆ (ಡಿಎ) ಮತ್ತು ತುಟ್ಟಿ ಪರಿಹಾರ (ಡಿಆರ್)ಕ್ಕೆ ಸಂಬಂಧಿಸಿದಂತೆ ಪ್ರಕಟಣೆಗಾಗಿ ಕೇಂದ್ರ ಸರಕಾರದ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.

ಏಳನೇ ವೇತನ ಆಯೋಗದಡಿ ಡಿಎ ಮತ್ತು ಡಿಆರ್ ಸೌಲಭ್ಯಗಳನ್ನು 2021 ಜುಲೈನಲ್ಲಿ ಪುನರಾರಂಭಿಸಲಾಗುವುದು ಎಂದು ವೈರಲ್ ಆಗಿದ್ದ ಆದೇಶವೊಂದನ್ನು ಉಲ್ಲೇಖಿಸಿ ಕೆಲವು ವರದಿಗಳು ತಿಳಿಸಿದ್ದವು. ಆದರೆ ಈ ಆದೇಶ ನಕಲಿಯಾಗಿದೆ ಎಂದು ಸರಕಾರವು ಬಳಿಕ ಸ್ಪಷ್ಟಪಡಿಸಿತ್ತು. ಡಿಎ ಮತ್ತು ಡಿಆರ್ ಪಾವತಿ ಪ್ರಕ್ರಿಯೆಯನ್ನು ಸೆಪ್ಟೆಂಬರ್ನಿಂದ ಪುನರಾರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಜಾಯಿಂಟ್ ಕನ್ಸಲ್ಟೇಟಿವ್ ಮಷಿನರಿಯ ರಾಷ್ಟ್ರೀಯ ಮಂಡಳಿ (ಎನ್ಸಿಜೆಸಿಎಂ)ಯು ಕೇಂದ್ರ ಸರಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರು ಏರಿಕೆ ಮಾಡಲಾಗಿರುವ ಡಿಎ ಮತ್ತು ಡಿಆರ್ಗಳನ್ನು ಪಡೆಯಲು ಕೆಲವು ಸಮಯ ಹಿಡಿಯಬಹುದು ಎಂದು ಸುಳಿವು ನೀಡಿತ್ತು. ಅದು ವಿತ್ತ ಸಚಿವಾಲಯ ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯೊಂದಿಗೆ ಇತ್ತೀಚಿಗೆ ನಡೆಸಿದ ಸಭೆಯಲ್ಲಿ 2021 ಸೆಪ್ಟೆಂಬರ್ನಲ್ಲಿ ಈ ಭತ್ತೆಗಳ ಪಾವತಿಯನ್ನು ಪುರಾರಂಭಿಸಲು ನಿರ್ಧರಿಸಲಾಗಿದೆ. ಎನ್ಸಿಜೆಸಿಎಮ್ನಲ್ಲಿ ಉದ್ಯೋಗಿಗಳ ಪರ ಕಾರ್ಯದರ್ಶಿಯಾಗಿರುವ ಶಿವಗೋಪಾಲ ಮಿಶ್ರಾ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಆದರೆ ಡಿಎ ಮತ್ತು ಡಿಆರ್ ಪುನರಾರಂಭಕ್ಕೆ ಹಲವಾರು ಸ್ತರಗಳಲ್ಲಿ ಅನುಮತಿ ಅಗತ್ಯವಾಗಿರುವುದರಿಂದ ಕಾಯುವಿಕೆ ಇನ್ನಷ್ಟು ದೀರ್ಘವಾಗಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ. ಸದ್ಯಕ್ಕೆ ಸರಕಾರದಿಂದ ಮೂರು ಡಿಎ ಮತ್ತು ಡಿಆರ್ ಕಂತುಗಳ ಪಾವತಿ ಬಾಕಿಯಿದ್ದು,ಸರಕಾರದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿದರೆ ಅದು ಎಲ್ಲ ಕಂತುಗಳ ಪಾವತಿಯನ್ನು ಸೆಪ್ಟೆಂಬರ್ನಲ್ಲಿ ಪ್ರಕಟಿಸುತ್ತದೆಯೇ ಎನ್ನುವುದು ಖಚಿತವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News