ಸಾಮೂಹಿಕ ಮತಾಂತರ ಆರೋಪ: ಉ.ಪ್ರದೇಶ, ದಿಲ್ಲಿಗಳಲ್ಲಿ ಈ.ಡಿ.ದಾಳಿ
ಹೊಸದಿಲ್ಲಿ,ಜು.3: ಬಲವಂತದ ಧಾರ್ಮಿಕ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈ.ಡಿ.)ವು ಶನಿವಾರ ದಿಲ್ಲಿ ಮತ್ತು ಉತ್ತರ ಪ್ರದೇಶಗಳ ಆರು ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿದೆ.
ಆರೋಪಿಗಳು ಕಾನೂನುಬಾಹಿರ ಮತಾಂತರಗಳನ್ನು ನಡೆಸಲು ವಿದೇಶಗಳಿಂದ ಕೋಟ್ಯಂತರ ರೂ.ಗಳನ್ನು ಸ್ವೀಕರಿಸಿದ್ದರು ಎಂದು ದಿಲ್ಲಿಯ ಮೂರು ಸ್ಥಳಗಳು ಮತ್ತು ಉ.ಪ್ರದೇಶದ ಮೂರು ಕಡೆಗಳಲ್ಲಿ ದಾಳಿ ವೇಳೆ ವಶಪಡಿಸಿಕೊಳ್ಳಲಾದ ದಾಖಲೆಗಳನ್ನು ಉಲ್ಲೇಖಿಸಿ ಈ.ಡಿ.ತಿಳಿಸಿದೆ. ಆರೋಪಿಗಳು ಪಾಕಿಸ್ತಾನದ ಐಎಸ್ಐನಿಂದಲೂ ಹಣವನ್ನು ಪಡೆದುಕೊಂಡಿದ್ದರು ಎಂದು ಅದು ಹೇಳಿದೆ.
ಶೋಧ ಕಾರ್ಯಾಚರಣೆಗಳಲ್ಲಿ ಹಲವಾರು ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು,ಆರೋಪಿ ಮುಹಮ್ಮದ್ ಉಮರ್ ಗೌತಮ್ ಮತ್ತು ಆತನ ಸಂಸ್ಥೆಗಳು ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಮತಾಂತರಗಳನ್ನು ನಡೆಸಿರುವುದನ್ನು ಈ ದಾಖಲೆಗಳು ಬಹಿರಂಗಗೊಳಿಸಿವೆ ಎಂದು ಹೇಳಿಕೆಯು ತಿಳಿಸಿದೆ.
ದಿಲ್ಲಿಯ ಜಾಮಿಯಾ ನಗರದಲ್ಲಿರುವ ಇಸ್ಲಾಮಿಕ್ ದಾವಾ ಸೆಂಟರ್ ಕಚೇರಿ,ಮುಖ್ಯ ಆರೋಪಿ ಗೌತಮ್ ಮತ್ತು ಆತನ ಸಹಚರ ಮುಫ್ತಿ ಖಾಜಿ ಜಹಾಂಗೀರ್ ಖಾಸ್ಮಿ ಅವರ ನಿವಾಸಗಳು ಈ.ಡಿ.ದಾಳಿಗೊಳಗಾದ ಸ್ಥಳಗಳಲ್ಲಿ ಸೇರಿವೆ. ಉ.ಪ್ರದೇಶದ ಲಕ್ನೋದಲ್ಲಿ ಅಲ್ ಹಸನ್ ಎಜ್ಯುಕೇಷನ್ ಆ್ಯಂಡ್ ವೆಲ್ಫೇರ್ ಫೌಂಡೇಷನ್,ಗೈಡನ್ಸ್ ಎಜ್ಯುಕೇಷನ್ ಮತ್ತು ವೆಲ್ಫೇರ್ ಸೊಸೈಟಿ ಮೇಲೆ ದಾಳಿಗಳನ್ನು ನಡೆಸಲಾಗಿದ್ದು,ಗೌತಮ್ ನಡೆಸುತ್ತಿರುವ ಈ ಸಂಸ್ಥೆಗಳು ಕಾನೂನು ಬಾಹಿರ ಮತಾಂತರಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದವು ಎಂದು ಈ.ಡಿ.ತಿಳಿಸಿದೆ.
ಇಸ್ಲಾಮಿಕ್ ದಾವಾ ಸಂಸ್ಥೆಯನ್ನು ನಡೆಸುತ್ತಿದ್ದಕ್ಕಾಗಿ ಗೌತಮ್ ಮತ್ತು ಖಾಸ್ಮಿ ಅವರನ್ನು ಉ.ಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಕಳೆದ ತಿಂಗಳು ಬಂಧಿಸಿತ್ತು. ಇಸ್ಲಾಮಿಕ್ ದಾವಾ ಸೆಂಟರ್ ಮೂಲಕ ಪಾಕಿಸ್ತಾನದ ಐಎಸ್ಐ ಮತ್ತು ಇತರ ವಿದೇಶಿ ಸಂಸ್ಥೆಗಳಿಂದ ಹಣವನ್ನು ಸ್ವೀಕರಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಎಟಿಎಸ್ ತನಿಖೆಯನ್ನು ಅನುಸರಿಸಿ ಈ.ಡಿ.ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿತ್ತು.