ಕುಸ್ತಿ ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ತಿಹಾರ್ ಜೈಲಿನಲ್ಲಿ ಟಿವಿ ಬೇಡಿಕೆ ಇಟ್ಟ ಸುಶೀಲ್ ಕುಮಾರ್

Update: 2021-07-04 13:52 GMT

ಹೊಸದಿಲ್ಲಿ: ಕುಸ್ತಿಪಟು ಸಾಗರ್ ಧಂಕರ್ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಪ್ರಸ್ತುತ ತಿಹಾರ್  ಜೈಲಿನಲ್ಲಿರುವ  ಒಲಿಂಪಿಯನ್  ಸುಶೀಲ್ ಕುಮಾರ್ ಕುಸ್ತಿ ಜಗತ್ತಿನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ತನಗೆ ಟಿವಿಯನ್ನು ಒದಗಿಸುವಂತೆ ಜೈಲು ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ.

ಜೈಲಿನಲ್ಲಿ ವಿಶೇಷ ಆಹಾರವನ್ನು ಕೋರಿ ಕುಮಾರ್ ಸಲ್ಲಿಸಿದ್ದ ಮನವಿಯನ್ನು ದಿಲ್ಲಿ ನ್ಯಾಯಾಲಯ ವಜಾಗೊಳಿಸಿದ ನಂತರ ಕುಮಾರ್ ಹೊಸ ಬೇಡಿಕೆ ಇಟ್ಟಿದ್ದಾರೆ.

 “ಸುಶೀಲ್ ಕುಮಾರ್ ಅವರು ತಮ್ಮ ವಕೀಲರ ಮೂಲಕ ವಿನಂತಿಯನ್ನು ಸಲ್ಲಿಸಿದ್ದಾರೆ ಹಾಗೂ  ಶುಕ್ರವಾರ ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ. ಜೈಲಿನ ಹೊರಗೆ ನಡೆಯುತ್ತಿರುವ ಸಂಗತಿಗಳೊಂದಿಗೆ ಸಂಪರ್ಕದಲ್ಲಿರಲು ಹಾಗೂ  ಕುಸ್ತಿಯ ಬಗ್ಗೆ ತಿಳಿದುಕೊಳ್ಳಲು  ಅವರು ಟಿವಿ ಸೆಟ್ ಅನ್ನು ಕೋರಿದ್ದಾರೆ ”ಎಂದು ಡಿಜಿ (ತಿಹಾರ್) ಸಂದೀಪ್ ಗೋಯೆಲ್ ಹೇಳಿದ್ದಾರೆ.

ಸುಶೀಲ್ ಅವರನ್ನು ಮಂಡೋಲಿ ಜೈಲಿನಿಂದ ತಿಹಾರ್ ಜೈಲು ಸಂಖ್ಯೆ 2 ಕ್ಕೆ ಸ್ಥಳಾಂತರಿಸಲಾಗಿದ್ದು, ಸದ್ಯ ಭದ್ರತಾ ಬೆದರಿಕೆಯಿಂದಾಗಿ ಪ್ರತ್ಯೇಕ ಸೆಲ್ ನಲ್ಲಿ ತಂಗಿದ್ದಾರೆ. ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಕುಮಾರ್ ಬ್ಯಾರಕ್ ಬಳಿ ಎಲ್ಲ ಸಮಯದಲ್ಲೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

97 ಕೆಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಸಾಗರ್ ಧಂಕರ್ ಅವರನ್ನು ಮೇ 4 ರಂದು ಥಳಿಸಿ ಹತ್ಯೆಗೈಯ್ಯಲಾಗಿತ್ತು. ಮೇ 4 ಹಾಗೂ  5 ರ ಮಧ್ಯರಾತ್ರಿ ಛತ್ರಾಸಲ್ ಕ್ರೀಡಾಂಗಣದಲ್ಲಿ ಆಸ್ತಿ ವಿವಾದದ ಬಗ್ಗೆ ಸುಶೀಲ್ ಕುಮಾರ್ ಹಾಗೂ  ಅವರ  ಇಬ್ಬರು ಸ್ನೇಹಿತರಾದ ಸೋನು ಮಹಲ್ ಮತ್ತು ಅಮಿತ್ ಕುಮಾರ್ ಅವರು ಥಂಕರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News