ಫ್ಯಾಕ್ಟ್‌ ಚೆಕ್:‌ ಸ್ಟ್ಯಾನ್‌ ಸ್ವಾಮಿಯವರದ್ದೆಂದು ವೈರಲ್‌ ಆಗುತ್ತಿರುವ ಫೋಟೊ ಅವರದ್ದಲ್ಲ

Update: 2021-07-05 13:57 GMT
photo: ndtv

ಹೊಸದಿಲ್ಲಿ: ಬುಡಕಟ್ಟು ಜನಾಂಗದವರ ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದ ಫಾದರ್‌ ಸ್ಟ್ಯಾನ್‌ ಸ್ವಾಮಿ ಜೈಲಿನಲ್ಲಿಯೇ ನಿಧನರಾಗಿದ್ದಾರೆ. ಈ ಕುರಿತು ಸಾಮಾಜಿಕ ತಾಣದಾದ್ಯಂತ ಹಲವಾರು ಗಣ್ಯರ ಸಹಿತ ಸಾವಿರಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ನಡುವೆ ಆಸ್ಪತ್ರೆಯ ಮಂಚದ ಮೇಲೆ ಕಾಲಿಗೆ ಕೋಳ ತೊಡಿಸಿರುವ ವೃದ್ಧರೋರ್ವರ ಚಿತ್ರ ಸ್ಟ್ಯಾನ್‌ ಸ್ವಾಮಿ ಹೆಸರಿನಲ್ಲಿ ವೈರಲ್‌ ಆಗಿದೆ. ಆದರೆ ಈ ಚಿತ್ರ ಸ್ಟ್ಯಾನ್‌ ಸ್ವಾಮಿಯವರದ್ದಲ್ಲ ಎಂದು ತಿಳಿದು ಬಂದಿದೆ.

ಚಿತ್ರದಲ್ಲಿರುವ ವ್ಯಕ್ತಿಯ ಹೆಸರು ಬಾಬುರಾಮ್‌ ಬಲ್ವಾನ್‌ ಸಿಂಗ್‌ ಎಂಬ 92ರ ಹರೆಯದ ವೃದ್ಧರೋರ್ವರದ್ದಾಗಿದೆ. ಅವರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಇಟಾ ಜಿಲ್ಲೆಯ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದರು. ಆದರೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮೇ 13, 2021 ರಂದು NDTV.COM ವರದಿ ಮಾಡಿತ್ತು. ವರದಿಯ ಲಿಂಕ್‌ ಇಲ್ಲಿದೆ.

ಬಾಬುರಾಮ್‌ ರ ಚಿತ್ರವು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಆಸ್ಪತ್ರೆಯಲ್ಲಿ ಅವರ ಕಾಲಿಗೆ ಕೋಳ ತೊಡಿಸಲಾಗಿತ್ತು. ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡ ಉತ್ತರಪ್ರದೇಶ ಜೈಲಿನ ಹೆಚ್ಚುವರಿ ಮಹಾನಿರ್ದೇಶಕ ಆನಂದ್‌ ಕುಮಾರ್‌ ವಾರ್ಡರ್‌ ಅಶೋಕ್‌ ಯಾದವ್‌ ರನ್ನು ಅಮಾನತು ಮಾಡುವಂತೆ ಆದೇಶಿಸಿದ್ದು ಮಾತ್ರವಲ್ಲದೇ ಈ ಕುರಿತು ವಿವರಣೆ ನೀಡುವಂತೆ ಮೇಲಧಿಕಾರಿಗಳಿಗೆ ನೋಟಿಸ್‌ ಹೊರಡಿಸಲಾಗಿತ್ತು ಹಾಗೂ ಮಾನವ ಹಕ್ಕು ಆಯೋಗವು ಉತ್ತರಪ್ರದೇಶ ಸರಕಾರಕ್ಕೂ ನೋಟಿಸ್‌ ನೀಡಿತ್ತು ಎಂದು Indiatoday.in ಹಾಗೂ ndtv.com ವರದಿ ಮಾಡಿತ್ತು. 

ಸದ್ಯ ಈ ಚಿತ್ರವು ಇಂದು ಜೈಲಿನಲ್ಲಿ ಮೃತಪಟ್ಟ ಸ್ಟ್ಯಾನ್‌ ಸ್ವಾಮಿಯವರದ್ದೆಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. ಆದರೆ ಈ ಚಿತ್ರಕ್ಕೂ ಸ್ಟ್ಯಾನ್‌ ಸ್ವಾಮಿಗೂ ಯಾವುದೇ ಸಂಬಂಧವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News