ಜುಲೈ ಅಂತ್ಯದೊಳಗೆ ಫ್ರಾನ್ಸ್ ನಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣ ಸಾಧ್ಯತೆ

Update: 2021-07-05 16:39 GMT

 ಪ್ಯಾರಿಸ್, ಜು.5: ಅತ್ಯಂತ ಅಪಾಯಕಾರಿಯಾದ ಡೆಲ್ಟಾ ವೈರಸ್ ಪ್ರಕರಣ ಹರಡಿರುವುದರಿಂದ ಫ್ರಾನ್ಸ್ ನಲ್ಲಿ ಜುಲೈ ಅಂತ್ಯದೊಳಗೆ ಕೋವಿಡ್ ಪ್ರಕರಣ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಸರಕಾರದ ವಕ್ತಾರರು ಸೋಮವಾರ ಹೇಳಿದ್ದಾರೆ. 

ದೇಶದಲ್ಲಿ ಕಳೆದ ಕೆಲ ವಾರಗಳಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಹೊಸ ಪ್ರಕರಣಗಳಲ್ಲಿ 30%ಕ್ಕೂ ಹೆಚ್ಚು ಪ್ರಕರಣಗಳಿಗೆ ಡೆಲ್ಟಾ ವೈರಸ್ ಕಾರಣ ಎಂದು ತಿಳಿದುಬಂದಿದೆ. ಈ ತಿಂಗಳಾಂತ್ಯದಲ್ಲಿ ನಾಲ್ಕನೇ ಅಲೆಯ ಸಾಧ್ಯತೆಯಿದೆ ಎಂದು ಸರಕಾರದ ವಕ್ತಾರ ಗ್ಯಾಬ್ರಿಯೆಲ್ ಅಟ್ಟಲ್ ಫ್ರಾನ್ಸ್ ರೇಡಿಯೊಗೆ ತಿಳಿಸಿದ್ದಾರೆ. ಲಸಿಕೆ ಸಾಕಷ್ಟು ಪ್ರಮಾಣದಲ್ಲಿದ್ದರೂ ಜನತೆ ಲಸಿಕೆ ಪಡೆಯಲು ಆಸಕ್ತಿ ತೋರದಿರುವುದು ಸೋಂಕು ಪ್ರಕರಣ ಹೆಚ್ಚಲು ಪ್ರಮುಖ ಕಾರಣವಾಗಿದೆ. 

ಬ್ರಿಟನ್ನಲ್ಲಿ ಸೋಂಕಿನ ಪ್ರಕರಣ ತೀವ್ರ ಉಲ್ಬಣಗೊಂಡಿತ್ತು, ಇದೇ ಸಂಕೇತ ಈಗ ನಮ್ಮ ದೇಶದಲ್ಲೂ ಗೋಚರಿಸುತ್ತಿದೆ. ಬ್ರಿಟನ್ ದೇಶವನ್ನು ಉದಾಹರಣೆಗೆ ತೆಗೆದುಕೊಂಡರೆ ನಮ್ಮಲ್ಲಿ ಜುಲೈ ಅಂತ್ಯಕ್ಕೆ 4ನೇ ಅಲೆ ಸಂಭವಿಸಬಹುದು. ಲಸಿಕೆ, ಪರೀಕ್ಷೆ, ಸುರಕ್ಷಿತ ಅಂತರ ಪಾಲನೆಯಿಂದ ಸೋಂಕಿನ ಪರಿಣಾಮವನ್ನು ನಿಯಂತ್ರಿಸಬಹುದು ಎಂದವರು ಹೇಳಿದ್ದಾರೆ.

ಫ್ರಾನ್ಸ್ನಲ್ಲಿ ರವಿವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯ ಅವಧಿಯಲ್ಲಿ 2,600 ಹೊಸ ಪ್ರಕರಣ ದಾಖಲಾಗಿದೆ. ದೇಶದ ಜನಸಂಖ್ಯೆಯ ಕೇವಲ 36% ಜನತೆ ಮಾತ್ರ ಲಸಿಕೆಯ 2 ಡೋಸ್ ಪಡೆದಿದ್ದಾರೆ. ಫ್ರಾನ್ಸ್ ನಲ್ಲಿ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸುವುದಿಲ್ಲ ಎಂದು ಸರಕಾರ ಹೇಳಿದೆ. ಈ ಮಧ್ಯೆ, ಆರೋಗ್ಯ ಕ್ಷೇತ್ರದ ಸಿಬಂ ದಿಗಳಿಗೆ ಹಾಗೂ ನಿವೃತ್ತ ಸಿಬಂದಿಗಳಿಗೆ ಅಗತ್ಯವಿರುವ ಲಸಿಕೆಯ ಪ್ರಮಾಣದ ಬಗ್ಗೆ ಚರ್ಚಿಸಲು ಪ್ರಧಾನಿ ಜೀನ್ ಕಾಸ್ಟೆಕ್ಸ್ ಈ ವಾರ ಸ್ಥಳೀಯ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರ ಸಭೆ ನಡೆಸಲಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News