ಆನ್‌ಲೈನ್ ಶಿಕ್ಷಣ ಯಾರಿಗೆ?

Update: 2021-07-06 12:16 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋವಿಡ್-19 ಸಾಂಕ್ರಾಮಿಕ ವ್ಯಾಪಿಸಿದ ಆನಂತರ ಅಂದರೆ ಕಳೆದ ಒಂದೂವರೆ ವರ್ಷದಿಂದ ಶಾಲೆ, ಕಾಲೇಜುಗಳು ಮುಚ್ಚಿ ಹೋಗಿವೆ. ಭವಿಷ್ಯದ ಭಾರತದ ಭರವಸೆಯಾಗಬೇಕಾದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ಕವಿದಿದೆ. ಇಂತಹ ಸಂಕಟದ ಸನ್ನಿವೇಶದಲ್ಲಿ ಶಾಲಾ ಶಿಕ್ಷಣಕ್ಕೆ ಪರ್ಯಾಯವಾಗಿ ಆನ್‌ಲೈನ್ ಶಿಕ್ಷಣದ ಮೊರೆ ಹೋಗಲಾಗಿದೆ. ಆದರೆ ಈ ಆನ್‌ಲೈನ್ ಶಿಕ್ಷಣದಿಂದ ಎಷ್ಟು ಮಂದಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ಈ ಇಂಟರ್‌ನೆಟ್ ಶಿಕ್ಷಣದ ಕಂದಕ ಗೋಚರಿಸುತ್ತಿದೆ. ಡಿಜಿಟಲ್ ಮಾಧ್ಯಮದ ಸೌಕರ್ಯ ಇರುವವರು ಮತ್ತು ಇಲ್ಲದವರ ನಡುವಿನ ಭಾರೀ ಅಂತರ ಸ್ಪಷ್ಟವಾಗಿ ಕಾಣುತ್ತಿದೆ.

ಕರ್ನಾಟಕವನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡಿರುವ 92 ಲಕ್ಷ ವಿದ್ಯಾರ್ಥಿಗಳಲ್ಲಿ 32 ಲಕ್ಷ ಮಕ್ಕಳ ಬಳಿ ಮೊಬೈಲ್ ಫೋನ್‌ಇಲ್ಲ. ರಾಜಧಾನಿ ಬೆಂಗಳೂರಿನ 2,44,145 ಮಕ್ಕಳ ಬಳಿ ಸ್ಮಾರ್ಟ್ ಫೋನ್ ಇಲ್ಲ. ಇನ್ನು ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳದಂತಹ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬಹುತೇಕ ಮಕ್ಕಳಿಗೆ ಮೊಬೈಲ್ ಖರೀದಿಸಲು ಸಾಧ್ಯವಾಗಿಲ್ಲ. ನಿರಂತರ ಹಿಂದುಳಿದಿರುವಿಕೆ, ಕಡು ಬಡತನವೇ ಇದಕ್ಕೆ ಕಾರಣವಲ್ಲದೇ ಬೇರೇನೂ ಅಲ್ಲ. ಆನ್‌ಲೈನ್ ಶಿಕ್ಷಣದಲ್ಲಿ ಹಣವಿದ್ದ ಸಿರಿವಂತರ ಮಕ್ಕಳು ಮಾತ್ರ ವ್ಯಾಸಂಗ ಮಾಡಲು ಅವಕಾಶವಿದೆ.ಬಡವರ ಮಕ್ಕಳಿಗೆ ಅನ್ನದಂತಹ ಅಕ್ಷರವೂ ಅಲಭ್ಯ.

ವಿದ್ಯಾರ್ಥಿಗಳು ಮಾತ್ರವಲ್ಲ ಇಡೀ ದೇಶದಲ್ಲಿ ಶೇಕಡಾ 22ರಷ್ಟು ಶಾಲೆಗಳಲ್ಲಿ ಮಾತ್ರ ಇಂಟರ್‌ನೆಟ್ ಸೌಲಭ್ಯವಿರುವುದನ್ನು ಪ್ರಸಕ್ತ ಶೈಕ್ಷಣಿಕ ವರ್ಷದ ಅಂಕಿ ಅಂಶಗಳನ್ನು ಆಧರಿಸಿ ಒಕ್ಕೂಟ ಸರಕಾರದ ಶಿಕ್ಷಣ ಸಚಿವಾಲಯದ ಮೂಲಗಳು ದೃಢ ಪಡಿಸಿವೆ. ಸರಕಾರಿ ಶಾಲೆಗಳಲ್ಲಿ ಇದರ ಪ್ರಮಾಣ ಇನ್ನೂ ಕಡಿಮೆ. ಇನ್ನು ಯಾವ ಮಕ್ಕಳಿಗೆ ಮನೆಗಳಲ್ಲಿ ಈ ಸೌಕರ್ಯ ಇದೆ ಎಂಬುದನ್ನು ಶೋಧಿಸಲು ಹೊರಟರೆ ಇನ್ನೂ ಆತಂಕದ ಚಿತ್ರ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಟಿವಿಯಲ್ಲಿ ಪಾಠಗಳು ಪ್ರಸಾರವಾಗುತ್ತಿರುವುದೇನೋ ನಿಜ. ಆದರೆ ಎಷ್ಟು ಮಂದಿ ವಿದ್ಯಾರ್ಥಿಗಳ ಮನೆಯಲ್ಲಿ ಟಿವಿ ಇದೆ? ಕರ್ನಾಟಕದ ಶಿಕ್ಷಣ ಇಲಾಖೆ ನಡೆಸಿರುವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಹತ್ತು ಲಕ್ಷ ಮಕ್ಕಳ ಮನೆಯಲ್ಲಿ ಟಿವಿ ಇಲ್ಲ. ಕಲ್ಯಾಣ ಕರ್ನಾಟಕದ ಕಲಬುರಗಿ ಕಂದಾಯ ವಿಭಾಗದಲ್ಲಿ 18.97 ಲಕ್ಷ ಮಕ್ಕಳು ನೋಂದಣಿ ಮಾಡಿಸಿಕೊಂಡಿದ್ದರೂ 3.43 ಲಕ್ಷ ಮಕ್ಕಳ ಮನೆಯಲ್ಲಿ ಟಿವಿ ಇಲ್ಲ. ಇನ್ನು ಇಂಟರ್‌ನೆಟ್ ಸೌಕರ್ಯ ಲಭ್ಯವಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಟಿವಿಯ ತರಗತಿಯಿಂದ ಬಡ ಹಿಂದುಳಿದ ಸಮುದಾಯಗಳ ಮಕ್ಕಳು ವಂಚಿತರಾಗುವುದಿಲ್ಲವೇ?

 ಕಲ್ಯಾಣ ಕರ್ನಾಟಕ ಮಾತ್ರವಲ್ಲ ರಾಜ್ಯದ ಬಹುತೇಕ ಭಾಗಗಳಲ್ಲಿ ಬಡ ಕುಟುಂಬಗಳ ಮಕ್ಕಳಿಗೆ ಕಂಪ್ಯೂಟರ್, ಮೊಬೈಲ್ ಮತ್ತು ಟಿವಿಯಿಲ್ಲದೆ ಆನ್‌ಲೈನ್ ಶಿಕ್ಷಣ ಗಗನ ಕುಸುಮವಾಗಿದೆ. ಮನೆಯಲ್ಲಿ ಟಿವಿಯಿಲ್ಲದಿದ್ದರೆ ಟಿವಿ ಇರುವ ಪಕ್ಕದ ಮನೆಗೆ ಹೋಗಿ ಪಾಠ ಕೇಳುವಂತೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಅಂತಹ ಮನೆಯವರ ಮನವೊಲಿಸಬೇಕೆಂದು ಸೂಚಿಸಿದೆ. ಆದರೆ ಇದು ಸೂಚನೆ ನೀಡಿದಷ್ಟು ಸುಲಭವಲ್ಲ, ಪ್ರಾಯೋಗಿಕವೂ ಅಲ್ಲ.

ಸಂವಿಧಾನದ ಪ್ರಕಾರ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಯಾವುದೇ ತಾರತಮ್ಯ ಇರಬಾರದು. ಆದರೆ ವಾಸ್ತವ ಸಂಗತಿ ಬೇರೆಯಾಗಿದೆ. ಶೈಕ್ಷಣಿಕ ರಂಗದಲ್ಲಿ ಇದ್ದವರು ಮತ್ತು ಇಲ್ಲದವರ ನಡುವಿನ ಅಂತರ ಮೊದಲಿನಿಂದಲೂ ಇದೆ. ದೇಶದಲ್ಲಿ ಜಾಗತೀಕರಣ ಮತ್ತು ನವ ಉದಾರೀಕರಣದ ಶಕೆ ಆರಂಭವಾದ ನಂತರ ಈ ಕಂದಕ ಇನ್ನೂ ಜಾಸ್ತಿಯಾಗಿದೆ. ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಆಂಗ್ಲ ಮಾಧ್ಯಮದ ಖಾಸಗಿ ಡೊನೇಶನ್ ಶಾಲೆಗಳು ಆರಂಭವಾಗಿ ಎರಡೂವರೆ ದಶಕಗಳೇ ಗತಿಸಿದವು. ಈ ಶಾಲೆಗಳಿಗೆ ಉಳ್ಳವರ ಮಕ್ಕಳು ಹೋಗುತ್ತಾರೆ. ಬಡವರ ಮಕ್ಕಳು ಹೋಗುವುದು ಸರಕಾರಿ ಶಾಲೆಗಳಿಗೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.ಕೋವಿಡ್ ಮೊದಲ ಅಲೆ ಅಪ್ಪಳಿಸಿದ ಪರಿಣಾಮವಾಗಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸರಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿ ಪರಿಸ್ಥಿತಿ ಸುಧಾರಿಸಿತೆನ್ನುವಾಗಲೇ ಎರಡನೇ ಅಲೆ ಬಂದುದರಿಂದಾಗಿ ಆನ್‌ಲೈನ್ ಶಿಕ್ಷಣ ಅನಿವಾರ್ಯ ಎನ್ನುವಂತಾಗಿದೆ.
ಆದರೆ ಆನ್‌ಲೈನ್ ಶಿಕ್ಷಣ ಅನುಕೂಲಗಳನ್ನು ಹೊಂದಿದವರಿಗೆ ಮಾತ್ರ. ಹಾಗಾಗಿ ಆನ್‌ಲೈನ್ ಶಿಕ್ಷಣದ ಬದಲಿಗೆ ಹಿಂದಿನಂತೆ ವಿದ್ಯಾಗಮ ಅಥವಾ ವಠಾರ ಶಾಲೆಗೆ ಅವಕಾಶ ನೀಡಬೇಕೆಂಬ ಬೇಡಿಕೆಯೂ ಬಂದಿದೆ. ಈ ಕುರಿತು ಕಲಬುರಗಿ ಸೇರಿ ಕೆಲವು ಜಿಲ್ಲೆಗಳ ಅಪರ ಶಿಕ್ಷಣ ಆಯುಕ್ತರು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಸರಕಾರ ತಕ್ಷಣ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕಾಗಿದೆ.

ಕೋವಿಡ್ ಆತಂಕ ಇನ್ನೂ ಖಚಿತವಾಗಿ ಕೊನೆಗೊಂಡಿಲ್ಲ. ಹೆಚ್ಚು ವೇಗವಾಗಿ ಹಬ್ಬುವ ಡೆಲ್ಟಾ ರೂಪಾಂತರ ತಳಿ ವ್ಯಾಪಕವಾಗಿ ಹಬ್ಬುತ್ತಿದೆ ಎಂದು ವರದಿಗಳು ತಿಳಿಸಿವೆ. ಮೂರನೇ ಮತ್ತು ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿಸುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಕೋವಿಡ್‌ಗೆ ಲಾಕ್‌ಡೌನ್ ಒಂದೇ ಪರಿಹಾರವಲ್ಲ. ಶಾಲೆ, ಕಾಲೇಜುಗಳನ್ನು ಮುಚ್ಚಿ ಡಿಜಿಟಲ್ ಶಿಕ್ಷಣ ನೀಡುವುದರಿಂದ ತಾತ್ಕಾಲಿಕ ಪರಿಹಾರ ಸಿಗಬಹುದು. ಆದರೆ ಇದು ಶಾಶ್ವತ ಪರಿಹಾರವಲ್ಲ. ಕೋವಿಡ್‌ಗೆ ಸಮರ್ಪಕವಾದ ಚಿಕಿತ್ಸಾ ಕ್ರಮವನ್ನು ಅನುಸರಿಸದೆ ಅವಸರದ ಯಾವುದೇ ಕ್ರಮಗಳನ್ನು ಕೈಗೊಂಡರೂ ಉಪಯೋಗವಿಲ್ಲ.

ಈ ಎಲ್ಲ ಅಂಶಗಳನ್ನು ಪರಾಮರ್ಶಿಸಿ ಶಾಲೆಗಳ ಆರಂಭದ ಬಗ್ಗೆ ಸರಕಾರ ತೀರ್ಮಾನಿಸಬೇಕಾಗಿದೆ. ಎಲ್ಲದಕ್ಕೂ ಆನ್‌ಲೈನ್ ಶಿಕ್ಷಣವೊಂದೇ ಪರಿಹಾರವಲ್ಲ. ಶಾಲೆ ಅಂದರೆ ಪಾಠ ಮಾತ್ರವಲ್ಲ. ಅದು ಬದುಕಿನ ಅನೇಕ ಅನುಭವಗಳನ್ನು ಬಾಲ್ಯದಲ್ಲೇ ಮಕ್ಕಳಿಗೆ ನೀಡುತ್ತದೆ. ಪ್ರಾಥಮಿಕ ಶಾಲೆಗಳಿಗೆ ಹೋಗುವ ಮಕ್ಕಳು ಸಹಜ ಶಾಲಾ ವಾತಾವರಣದಿಂದ ವಂಚಿತರಾಗಬಾರದು. ಸರಕಾರ ಹಲವಾರು ಅಂಶಗಳನ್ನು ಪರಾಮರ್ಶಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಪೂರಕವಾದ ತೀರ್ಮಾನವನ್ನು ಕೈಗೊಳ್ಳಲಿ.

ಶಿಕ್ಷಣದ ಮೂಲ ಆಶಯವೇ ಸಾಮಾಜೀಕರಣ. ವಿಭಿನ್ನ ಹಿನ್ನೆಲೆಯ ಮಕ್ಕಳು ಪರಸ್ಪರ ಬೆರೆಯಬೇಕು. ಮಾತಾಡಬೇಕು, ಉಣ್ಣಬೇಕು, ಕಲಿಯಬೇಕು. ಆಟ ಪಾಠಗಳಲ್ಲಿ ತೊಡಗಿಸಿ ಕೊಳ್ಳಬೇಕು. ಶಾಲಾ ಶಿಕ್ಷಣದಿಂದ ಅಂದರೆ ತರಗತಿಯ ಪಾಠದಿಂದ ಮಾತ್ರ ಇದು ಸಾಧ್ಯ. ಆನ್‌ಲೈನ್ ಶಿಕ್ಷಣ ತರಗತಿಯ ಶಿಕ್ಷಣಕ್ಕೆ ಎಂದೂ ಬದಲಿಯಾಗಲು ಸಾಧ್ಯವಿಲ್ಲ. ಬಹುತೇಕ ವಿದ್ಯಾರ್ಥಿಗಳಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಯಾವುದೇ ಸೌಲಭ್ಯ ಇಲ್ಲದಿರುವಾಗ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಈ ಎಲ್ಲ ಅಂಶಗಳನ್ನು ಗಮನಿಸಿ ಸರಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಾದ ತೀರ್ಮಾನ ಕೈಗೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News