ದೇಶದಲ್ಲಿ ಕಾನೂನು ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ: ಸ್ಟ್ಯಾನ್ ಸ್ವಾಮಿ ಸಾವಿಗೆ ಕೇಂದ್ರ ಪ್ರತಿಕ್ರಿಯೆ

Update: 2021-07-06 16:47 GMT
photo: twitter

ಹೊಸದಿಲ್ಲಿ: ಭಾರತದಲ್ಲಿ ಕಾನೂನು ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಹೊರತು ಕಾನೂನುಬದ್ಧ ಹಕ್ಕುಗಳ ವಿರುದ್ಧವಲ್ಲ  ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿದೆ. ಈ ಮೂಲಕ 84 ವರ್ಷದ ಸ್ಟ್ಯಾನ್ ಸ್ವಾಮಿ ಸಾವಿನ ಬಗ್ಗೆ ಸರಕಾರ ಮೊದಲ ಪ್ರತಿಕ್ರಿಯೆ ನೀಡಿದೆ.

ಕಳೆದ ವರ್ಷ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಲ್ಪಟ್ಟ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರನ ಸಾವಿಗೆ  ವಿಶ್ವಸಂಸ್ಥೆ ಹಾಗೂ ಐರೋಪ್ಯ ಮಾನವ ಹಕ್ಕುಗಳ  ಸಂಘಟನೆ ಸೇರಿದಂತೆ ರಾಷ್ಟ್ರೀಯ ಹಾಗೂ  ಅಂತರರಾಷ್ಟ್ರೀಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.

"ಫಾದರ್ ಸ್ಟ್ಯಾನ್ ಸ್ವಾಮಿಯವರನ್ನು ಕಾನೂನಿನಡಿಯಲ್ಲಿ ಸರಿಯಾದ ಪ್ರಕ್ರಿಯೆಯ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿ ತನ್ನ ವಶಕ್ಕೆ ತೆಗೆದುಕೊಂಡಿತ್ತು" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಂಗಳವಾರ ಸಂಜೆ ತಿಳಿಸಿದ್ದಾರೆ.

"ಸ್ವಾಮಿ ಅವರ ವಿರುದ್ಧದ ಆರೋಪಗಳ ನಿರ್ದಿಷ್ಟ ಸ್ವರೂಪದಿಂದಾಗಿ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸಿದ್ದವು. ಭಾರತದಲ್ಲಿನ ಅಧಿಕಾರಿಗಳು ಕಾನೂನು ಉಲ್ಲಂಘನೆಗಳ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಾರೆಯೇ ಹೊರತು ಕಾನೂನುಬದ್ಧ ಹಕ್ಕುಗಳ ವಿರುದ್ಧವಾಗಿ ಅಲ್ಲ. ಅಂತಹ ಎಲ್ಲಾ ಕ್ರಮಗಳು ಕಟ್ಟುನಿಟ್ಟಾಗಿ ಕಾನೂನಿಗೆ ಅನುಗುಣವಾಗಿರುತ್ತವೆ" ಎಂದು ಅವರು ಹೇಳಿದರು.

''ಬಾಂಬೆ ಹೈಕೋರ್ಟ್‌ನ ಆದೇಶದ ಮೇರೆಗೆ  ಸ್ಟ್ಯಾನ್ ಸ್ವಾಮಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿ ಅವರು ಎಲ್ಲ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ" ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News