ಸಮುದಾಯದ ಮುಖಂಡರ ಜತೆಗೂಡಿ ಲಸಿಕೆ ಕುರಿತು ಜಾಗೃತಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತಾ

Update: 2021-07-07 14:13 GMT

ಬೆಂಗಳೂರು, ಜು.7: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವ ಪ್ರದೇಶದಲ್ಲಿ ಸಮುದಾಯದ ಮುಖಂಡರ ಜತೆ ಸೇರಿ ಜನತೆಗೆ ಮನವರಿಕೆ ಮಾಡಿಕೊಟ್ಟು ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತಾ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಕಾರಣಗಳಿಂದ ಕೆಲವು ಮಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಬಹುದು. ಇಂತಹವರ ಕುರಿತು ಮಾಹಿತಿ ಪಡೆಯಲು ಮನೆ ಮನೆ ಸರ್ವೇ ನಡೆಸಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳದವರನ್ನು ಗುರುತಿಸಿ ಅವರಿಗೆ ಲಸಿಕೆ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ಪ್ರತಿದಿನ ಲಸಿಕೆ ಲಭ್ಯತೆಯ ಅನುಸಾರ ದಿನಕ್ಕೆ ಸರಾಸರಿ 80ಸಾವಿರ ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಕೆಲ ದಿನಗಳಿಂದ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುತ್ತಿದ್ದು, ಮುಂದಿನ ಐದಾರು ದಿನದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಗಿಯಲಿದೆ. ಲಸಿಕೆ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಮನವಿ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 54ಮಾರ್ಷಲ್ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲೂ ಮಾರ್ಷಲ್‍ಗಳ ಜತೆ ಪೊಲೀಸ್ ಸಿಬ್ಬಂದಿಗಳು ಇರುತ್ತಾರೆ. ಈ ತಂಡಗಳನ್ನು ಹೆಚ್ಚು ಜನರು ಸೇರುವ ಪ್ರದೇಶದಲ್ಲಿ ನಿಯೋಜಿಸಿದ್ದು, ದಂಡ ವಸೂಲಿಗಿಂತ ಜನರಲ್ಲಿ ಕೊರೋನ ಕುರಿತು ಜಾಗ್ರತೆಯಿಂದಿರುವಂತೆ ಎಚ್ಚರಿಕೆ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣ ಪ್ರಮಾಣ ಕಡಿಮೆ ಆಗುತ್ತಿದೆ. ಆದರೆ, ಕೆಲವು ವಾರ್ಡ್‍ಗಳಲ್ಲಿ ದಿನಕ್ಕೆ 20, 30ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ಪ್ರದೇಶದಲ್ಲಿ ಕೆಲವೊಂದು ಬಿಗಿ ಕ್ರಮಗಳು ಮುಂದುವರೆದಿದೆ. ಹಾಗೂ ರೋಗ ಲಕ್ಷಣ ಇರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ಪ್ರಕರಣಗಳು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಕೋವಿಡ್ ಹಾಸಿಗೆಗಳನ್ನು ಕಡಿಮೆ ಮಾಡಲಾಗಿದೆ. ಆದರೆ, ಮೂರನೇ ಅಲೆ ಮುಂಜಾಗ್ರತೆಯಾಗಿ ಹಾರೈಕೆ ಕೇಂದ್ರಗಳು, ಒಂದಷ್ಟು ಪ್ರಮಾಣದಲ್ಲಿ ಹಾಸಿಗೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹಾಗೆಯೇ ಖಾಸಗಿ ಆಸ್ಪತ್ರೆಗಳಿಂದ ಪಡೆದಿದ್ದ ಕೋವಿಡ್ ಹಾಸಿಗಳಲ್ಲಿ 5ಸಾವಿರ ಹಾಸಿಗೆಗಳನ್ನು ಉಳಿಸಿಕೊಂಡು ಉಳಿದಿದ್ದನ್ನು ಬಿಟ್ಟುಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News