ಲೆಬನಾನ್ ಪಡೆಗಳಿಗೆ ನೆರವು ಒದಗಿಸಲು ಖತರ್ ನಿರ್ಧಾರ

Update: 2021-07-07 15:55 GMT

ದೋಹಾ, ಜು.7: ಈ ದಶಕದಲ್ಲೇ ಅತ್ಯಂತ ಗಂಭೀರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿರುವ ಲೆಬನಾನ್ನ ಸಶಸ್ತ್ರ ಪಡೆಗಳಿಗೆ ತಿಂಗಳಿಗೆ 70 ಟನ್ ಆಹಾರ ವಸ್ತುಗಳನ್ನು ಒದಗಿಸುವುದಾಗಿ ಖತರ್ ಮಂಗಳವಾರ ಘೋಷಿಸಿದೆ. ವಿದೇಶ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುರ್ರಹ್ಮಾನ್ ಅಲ್ ಥಾನಿ ಬೈರೂತ್ಗೆ ಭೇಟಿ ನೀಡಿದ ಸಂದರ್ಭ ಈ ಘೋಷಣೆ ಮಾಡಿದ್ದಾರೆ. 

ಜೊತೆಗೆ, ದೇಶದಲ್ಲಿ ಸ್ಥಿರತೆ ನೆಲೆಗೊಳ್ಳಲು ಶೀಘ್ರದಲ್ಲೇ ನೂತನ ಸರಕಾರ ರಚಿಸುವಂತೆ ಲೆಬನಾನ್ನ ಎಲ್ಲಾ ರಾಜಕೀಯ ಪಕ್ಷಗಳಿಗೂ ಅವರು ಕರೆ ನೀಡಿದ್ದಾರೆ. ಕಳೆದ ತಿಂಗಳು ಆಗಸ್ಟ್ ನಲ್ಲಿ ಬೈರೂತ್ ಬಂದರಿನಲ್ಲಿ ಭಾರೀ ಸ್ಫೋಟ ಸಂಭವಿಸಿದ ಬಳಿಕ ಅಲ್ಲಿನ ಸರಕಾರ ರಾಜೀನಾಮೆ ನೀಡಿದ್ದು, ಅಂದಿನಿಂದ ಉಸ್ತುವಾರಿ ಸರಕಾರವಾಗಿ ಮುಂದುವರಿದಿದೆ. ಖತರ್ ನೆರವನ್ನು ಮತ್ತು ನಿರಂತರ ಬೆಂಬಲವನ್ನು ಸ್ವಾಗತಿಸುವುದಾಗಿ ಲೆಬನಾನ್ ಅಧ್ಯಕ್ಷ ಮೈಕೆಲ್ ಅವೋನ್ ಹೇಳಿದ್ದಾರೆ. ಲೆಬನಾನ್ನ ರಾಜಕೀಯ ಬಿಕ್ಕಟ್ಟಿಗೆ ಪರಿಹಾರ ಹುಡುಕಲು ಮತ್ತು ಲೆಬನಾನ್ಗೆ ನೆರವಾಗುವ ಬದ್ಧತೆಗೆ ಅನುಗುಣವಾಗಿ ಮತ್ತು ಲೆಬನಾನ್ನ ಸಹೋದರರ ಜತೆ ನಿಲ್ಲುವ ಖತರ್ ದೇಶದ ನಿರಂತರ ಪ್ರಯತ್ನದ ಚೌಕಟ್ಟಿನೊಳಗೆ ಈ ನೆರವು ಒದಗಿಸಲಾಗುವುದು ಎಂದು ಖತರ್ ನ ಸರಕಾರಿ ಮಾಧ್ಯಮ ವರದಿ ಮಾಡಿದೆ. 

ಅಮೆರಿಕದ ಡಾಲರ್ ಎದುರು ಲೆಬನಾನ್ನ ಕರೆನ್ಸಿ ತೀವ್ರ ಅಪಮೌಲ್ಯಗೊಂಡ ಬಳಿಕ ದೇಶದಲ್ಲಿ ಹಣದುಬ್ಬರದ ಪ್ರಮಾಣ ಹೆಚ್ಚಿದ್ದು ಜನಸಂಖ್ಯೆಯ ಅರ್ಧಾಂಶಕ್ಕೂ ಅಧಿಕ ಜನತೆ ಬಡತನ ರೇಖೆಯ ವ್ಯಾಪ್ತಿಗೆ ಸೇರಿದ್ದಾರೆ. ಈ ಪರಿಸ್ಥಿತಿಯಲ್ಲಿ ಯೋಧರಿಗೆ ನೆರವಾಗಲು ಕಳೆದ ತಿಂಗಳು ಫ್ರಾನ್ಸ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಲೆಬನಾನ್ ಸೇನಾಪಡೆಯ ಮುಖ್ಯಸ್ಥ ಜೋಸೆಫ್ ಅವೋನ್ ನೆರವು ನೀಡುವಂತೆ ವಿಶ್ವದ ಬಲಿಷ್ಟ ದೇಶಗಳಿಗೆ ಮನವಿ ಮಾಡಿದ್ದರು. ದೇಶದಲ್ಲಿ ತೈಲ ಕೊರತೆಯಿಂದಾಗಿ ಪೆಟ್ರೋಲ್ ಪಂಪ್ಗಳಲ್ಲಿ ಘರ್ಷಣೆ ಸಾಮಾನ್ಯವಾಗಿದ್ದು ಲೆಬನಾನ್ ಶೀಘ್ರವೇ ಸಾಮಾಜಿಕ ಸ್ಫೋಟಕ್ಕೆ ಸಾಕ್ಷಿಯಾಗಲಿದೆ ಎಂದು ಉಸ್ತುವಾರಿ ಪ್ರಧಾನಿ ಹಸನ್ ದಯಾಬ್ ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News