×
Ad

ಏಕರೂಪ ನಾಗರಿಕ ಸಂಹಿತೆಗೆ ದಿಲ್ಲಿ ಹೈಕೋರ್ಟ್ ಕರೆ: ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರಕ್ಕೆ ಸೂಚನೆ

Update: 2021-07-10 20:37 IST

ಹೊಸದಿಲ್ಲಿ,ಜು.10: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವನ್ನು ಬೆಂಬಲಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯವು,ಸಂವಿಧಾನದ ವಿಧಿ 44ರಡಿ ಹೇಳಲಾಗಿರುವ ಏಕರೂಪ ನಾಗರಿಕ ಸಂಹಿತೆಯ ಅಗತ್ಯವನ್ನು ಸರ್ವೋಚ್ಚ ನ್ಯಾಯಾಲಯವು ಆಗಾಗ್ಗೆ ಪುನರುಚ್ಚರಿಸುತ್ತಲೇ ಬಂದಿದೆ. ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯು ಕೇವಲ ಭರವಸೆಯಾಗಿಯೇ ಉಳಿಯಬಾರದು ಎಂದು ಹೇಳಿದೆ.

ಸಮಾಜದಲ್ಲಿಯ ಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದ ತಡೆಬೇಲಿಗಳು ಕ್ರಮೇಣ ಕಣ್ಮರೆಯಾಗುತ್ತಿವೆ ಎಂದು ಹೇಳಿದ ನ್ಯಾ.ಪ್ರತಿಭಾ ಎಂ.ಸಿಂಗ್ ಅವರು,ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದರು.

ರಾಜಸ್ಥಾನದ ಮೀನಾ ಸಮುದಾಯಕ್ಕೆ ಸೇರಿದ ದಂಪತಿಗೆ ಹಿಂದು ವಿವಾಹ ಕಾಯ್ದೆಯ ಅನ್ವಯಿಸುವಿಕೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಪತಿ ಹಿಂದು ವಿವಾಹ ಕಾಯ್ದೆಯ ಕಲಂ 13(1)ರಡಿ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದು, ರಾಜಸ್ಥಾನದಲ್ಲಿ ಅಧಿಸೂಚಿತ ಪರಿಶಿಷ್ಟ ಪಂಗಡವಾಗಿರುವ ಮೀನಾ ಸಮುದಾಯಕ್ಕೆ ಈ ಕಾಯ್ದೆಯು ಅನ್ವಯಿಸುವುದಿಲ್ಲ ಎಂಬ ಕಾರಣ ನೀಡಿ ಕುಟುಂಬ ನ್ಯಾಯಾಲಯವು ಆತನ ಅರ್ಜಿಯನ್ನು ತಳ್ಳಿಹಾಕಿತ್ತು. ಆತ ಈ ಆದೇಶವನ್ನು ಪ್ರಶ್ನಿಸಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದ.

ಮದುವೆಯನ್ನು ಮಾಡಿಕೊಳ್ಳುವ ವಿವಿಧ ಸಮುದಾಯಗಳು, ಪಂಗಡಗಳು,ಜಾತಿಗಳು ಅಥವಾ ಧರ್ಮಗಳಿಗೆ ಸೇರಿದ ಭಾರತದ ಯುವಜನರು ವಿವಿಧ ವೈಯಕ್ತಿಕ ಕಾನೂನುಗಳಲ್ಲಿಯ, ವಿಶೇಷವಾಗಿ ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಸಂಘರ್ಷಗಳಿಂದಾಗಿ ಉಂಟಾಗುವ ಸಮಸ್ಯೆಗಳ ವಿರುದ್ಧ ಹೋರಾಡುವ ಅನಿವಾರ್ಯತೆಗೆ ಸಿಲುಕಿ ಒದ್ದಾಡುವಂತಾಗಬಾರದು ಎಂದು ಹೇಳಿದ ನ್ಯಾ.ಸಿಂಗ್, 1955ರ ಹಿಂದು ವಿವಾಹ ಕಾಯ್ದೆಯು ವೀರಶೈವ, ಲಿಂಗಾಯಿತ ಅಥವಾ ಬ್ರಹ್ಮೋ ಪಂಥದ ಅನುಯಾಯಿಗಳಾಗಿರಲಿ, ಹಿಂದು ಧರ್ಮವನ್ನು ಅನುಸರಿಸುವ ಎಲ್ಲರಿಗೂ ಅನ್ವಯವಾಗುತ್ತದೆ. 

ಪಂಗಡವೊಂದರ ಸದಸ್ಯರು ಹಿಂದು ಪದ್ಧತಿಗಳು,ಸಂಪ್ರದಾಯಗಳು ಮತ್ತು ವಿಧಿಗಳನ್ನು ಅನುಸರಿಸಲು ಆಯ್ಕೆ ಮಾಡಿಕೊಂಡರೆ ಅವರನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವಂತಿಲ್ಲ ಎಂದು ಹೇಳಿದರು. ಏಕರೂಪ ನಾಗರಿಕ ಸಂಹಿತೆಯನ್ನು ತರಲು ತಾನು ಬದ್ಧನಾಗಿದ್ದೇನೆ, ಆದರೆ ಅದಕ್ಕಾಗಿ ವ್ಯಾಪಕ ಸಮಾಲೋಚನೆಗಳ ಅಗತ್ಯವಿದೆ ಎಂದು ಕೇಂದ್ರವು ಕಳೆದ ವರ್ಷ ಸಂಸತ್ತಿಗೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News