ಆರೋಗ್ಯ ಸಚಿವರ ಕೆಟ್ಟ ಇಂಗ್ಲಿಷ್ ನೀವು ಅಣಕಿಸಿದ್ದೀರಾ? ಹಾಗಾದರೆ ಮೋದಿಗೆ ಇನ್ನಷ್ಟು ಮತ ಗಳಿಸಲು ನೆರವಾಗುತ್ತಿದ್ದೀರಿ

Update: 2021-07-10 15:39 GMT

ಕೇಂದ್ರದ ನೂತನ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರ ಕಳಪೆ ಇಂಗ್ಲಿಷ್ ಅನ್ನು ಅಣಕಿಸಿ ಆನ್ಲೈನ್ ನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ನೀವು ಯಾವ ಪಕ್ಷದಲ್ಲಿದ್ದೀರಿ? ಚರ್ಚೆಯಲ್ಲಿ ಒಂದು ಪಕ್ಷದವರು ಮಾಂಡವೀಯರ ಮೇಲಿನ ದಾಳಿಗಳನ್ನು ಹಾಸ್ಯಾಸ್ಪದ, ಅನ್ಯಾಯ ಮತ್ತು ಆಡಂಬರಪೂರ್ಣ ಎಂದು ಆಕ್ಷೇಪಿಸಿದ್ದಾರೆ. ಅಂದ ಹಾಗೆ ನಾನು ಈ ಪಕ್ಷದಲ್ಲಿದ್ದೇನೆ ಎಂದು ಮೊದಲೇ ಹೇಳಿಬಿಡುತ್ತೇನೆ. 

ಈ ಚರ್ಚೆಯು 1977-79ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಾರ್ಟಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ದಿ.ರಾಜನಾರಾಯಣ ಅವರು ಲಂಡನ್ ಗೆ ಭೇಟಿ ನೀಡಿದ್ದಾಗ ಆಡಿದ್ದ, ಈಗ ಮರೆತುಹೋಗಿರುವ ಆ ಪ್ರಸಿದ್ಧ ಶಬ್ದಗಳನ್ನು ಮತ್ತೊಮ್ಮೆ ನೆನಪಿಸಿದೆ.

ನಿಮಗೆ ಇಂಗ್ಲಿಷ್ ಗೊತ್ತಿಲ್ಲದಿದ್ದರೆ ನೀವು ನಿಮ್ಮ ಸಚಿವಾಲಯವನ್ನು ಹೇಗೆ ನಡೆಸುತ್ತಿದ್ದೀರಿ ಎಂದು ಪತ್ರಕರ್ತರು ಅವರನ್ನು ಪ್ರಶ್ನಿಸಿದ್ದರು. ಮೂಲ ‘ಲಾಲುಪ್ರಸಾದ ಯಾದವ್ ’ಎಂದು ನಾವು ಬಣ್ಣಿಸಬಹುದಾದ ಸಮಾಜವಾದಿ ರಾಜನಾರಾಯಣ ಈ ಪ್ರಶ್ನೆಯಿಂದ ವಿಚಲಿತರಾಗಿರಲಿಲ್ಲ. ‘ಅರೆ,‌ ಸಬ್ ಅಂಗ್ರೇಜಿ ಜಾನ್ತೇ ಹೈಂ ಹಮ್. ಮಿಲ್ಟನ್-ಹಿಲ್ಟನ್ ಸಬ್ ಪಢೆ ಹೈಂ ಹಮ್ (ಎಲ್ಲ ಇಂಗ್ಲಿಷ್ ನಮಗೆ ಗೊತ್ತಿದೆ. ಮಿಲ್ಟನ್ನಿಂದ ಹಿಡಿದು ಹಿಲ್ಟನ್‌ ವರೆಗೆ ಎಲ್ಲವನ್ನೂ ಓದಿದ್ದೇವೆ)’ ಎಂದು ಉತ್ತರಿಸಿದ್ದರು.

 ದಾಖಲೆಗಾಗಿ, ಅವರ ಗ್ರಾಮೀಣ ಪದ್ಧತಿ ಮತ್ತು ಒಂದು ರೀತಿಯಲ್ಲಿ ರಾಸ್ತಾಫೇರಿಯನ್ (ಜಮೈಕಾದ ಒಂದು ಪಂಥಕ್ಕೆ ಸೇರಿದ ಕರಿಯರು) ನೋಟದಿಂದಾಗಿ ಅವರು ಸುಶಿಕ್ಷಿತರೆಂದು ನಂಬಿಕೆಯನ್ನು ಹುಟ್ಟಿಸುತ್ತಿರಲಿಲ್ಲ. ರಾಜನಾರಾಯಣ ತನ್ನ 17ನೇ ವಯಸ್ಸಿನಲ್ಲಿಯೇ ವಿದ್ಯಾರ್ಥಿ ಯೂನಿಯನ್ ನಾಯಕ, ಸ್ವಾತಂತ್ರ ಹೋರಾಟಗಾರ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಅವರು ವಾರಣಾಸಿಯಿಂದ ‘ಜನಮುಖ್’ಎಂಬ ಹಿಂದಿ ಸಾಪ್ತಾಹಿಕವನ್ನು ಪ್ರಕಟಿಸುತ್ತಿದ್ದರು. ಇಂಗ್ಲಿಷ್ ಭಾಷೆಯಲ್ಲಿನ ಅವರ ಅಪೂರ್ಣತೆಗಳು ಅವರು ಇಂದಿರಾ ಗಾಂಧಿಯವರನ್ನು, ಒಂದಲ್ಲ ಎರಡು ಬಾರಿ ಸೋಲಿಸುವುದಕ್ಕೆ ಅಡ್ಡಿಯಾಗಿರಲಿಲ್ಲ.

ಚರ್ಚೆಯಲ್ಲಿನ ಇನ್ನೊಂದು ಪಕ್ಷವು ಕಳಪೆ ಇಂಗ್ಲಿಷ್ ನಲ್ಲಿಯ ಮಾಂಡವೀಯ ಅವರ ಹಳೆಯ ಟ್ವೀಟ್ ಗಳನ್ನು ಹದಗೆಟ್ಟ ತಮಾಷೆಯನ್ನಾಗಿ ನೋಡುತ್ತಿದೆ. ತಮಾಷೆ ಮಾತ್ರವಲ್ಲ, ಕೋರೋನ ವೈರಸ್ ಸಾಂಕ್ರಾಮಿಕದ ಈ ಕಾಲದಲ್ಲಿ ಅವರಿಗೆ ಯಾವ ವಿಶ್ವಾಸದಿಂದ ಆರೋಗ್ಯ ಸಚಿವಾಲಯವನ್ನು ಒಪ್ಪಿಸಬಹುದು ಎಂದೂ ಅದು ಪ್ರಶ್ನಿಸಿದೆ. ಇದರ ಬೆನ್ನ ಹಿಂದೆಯೇ ನರೇಂದ್ರ ಮೋದಿಯವರ ಬಿಜೆಪಿಯಿಂದ ಇನ್ನೇನು ಉತ್ತಮವಾದುದನ್ನು ನೀವು ನಿರೀಕ್ಷಿಸಬಹುದು ಎಂಬ ವಾದವೂ ಹುಟ್ಟಿಕೊಳ್ಳುತ್ತದೆ. 

ಅದು ಬಿಜೆಪಿಯ ಪ್ರತಿಭೆಯಲ್ಲಿ ಕೊರತೆ ಮತ್ತು ಯಾವುದಕ್ಕೂ ಕ್ಯಾರೇ ಎನ್ನದ ಅದರ ಅಹಂಕಾರಗಳನ್ನು ಪ್ರದರ್ಶಿಸುತ್ತದೆ ಮತ್ತು ಇದು ಭಾರತೀಯ ಮತದಾರರಿಗೆ ಅವರು ಮತ ಚಲಾಯಿಸುವಾಗ ಮಾಡಿರುವ ತಪ್ಪನ್ನು ನೆನಪಿಸಬೇಕು.

ನಾನು ಚರ್ಚೆಯ ಇನ್ನೊಂದು ಪಕ್ಷದಲ್ಲಿರುವುದಕ್ಕೆ ಕಾರಣವೆಂದರೆ ಹೆಚ್ಚಿನ ಭಾರತೀಯರು ಇಂಗ್ಲಿಷ್ ಜ್ಞಾನವನ್ನು ವಿದ್ಯಾವಂತ, ಸಾಕ್ಷರ ಮತ್ತು ಬುದ್ಧಿಶಕ್ತಿ ಅಥವಾ ಬುದ್ಧಿಯನ್ನು ಹೊಂದಿರುವುದರ ಜೊತೆಗೆ ತಳುಕು ಹಾಕುವುದನ್ನು ತಪ್ಪು ಮತ್ತು ಅತಿರೇಕದ್ದು ಎಂದು ಭಾವಿಸಿದ್ದಾರೆ ಎಂದು ನಾನು ನಂಬಿದ್ದೇನೆ. ಇಂಗ್ಲಿಷ್ ನೋಯಿಸುವುದಿಲ್ಲ,ಆದರೆ ಓರ್ವ ಮಂತ್ರಿ ಅಥವಾ ಸಾರ್ವಜನಿಕ ಜೀವನದಲ್ಲಿರುವ ಯಾರಿಗೇ ಆದರೂ ರಾಜಕೀಯ ಒಲವು,ಜಾಣ್ಮೆ,ಕಲಿಯುವ ಸಾಮರ್ಥ್ಯ ಮತ್ತು ತನ್ನ ತಂಡದಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವ ಚುರುಕುತನ ಅಗತ್ಯವಾಗಿರುತ್ತವೆ.

ಅಮಿತ್ ಶಾ ಬಿಜೆಪಿಯಲ್ಲಿ ಉತ್ತುಂಗಕ್ಕೇರುವ ಮುನ್ನ ರಾಜಕೀಯ ಪಕ್ಷವೊಂದರ ಅತ್ಯಂತ ಬಲಿಷ್ಠ ಅಧ್ಯಕ್ಷರಾಗಿದ್ದ ಕೆ.ಕಾಮರಾಜ (ಕಾಂಗ್ರೆಸ್,1963-65) ಅವರು ಕಡುಬಡತನ ಮತ್ತು ತಂದೆಯ ಸಾವಿನಿಂದಾಗಿ 11ರ ಹರೆಯದಲ್ಲಿಯೇ ಶಾಲೆಯನ್ನು ತೊರೆಯುವಂತಾಗಿತ್ತು ಎನ್ನುವುದು ಇಂದು ಯಾರಿಗೂ ನೆನಪಿಲ್ಲ. ಅವರಿಗೆ ತನ್ನ ತಮಿಳು ಭಾಷೆ,ಭಾರತದಲ್ಲಿಯ ಬಡವರ ಮನಃಸ್ಥಿತಿಯ ಬಗ್ಗೆ ಗೊತ್ತಿತ್ತು ಮತ್ತು ಓರ್ವ ಮೇಧಾವಿಯ ರಾಜಕೀಯ ಪ್ರವೃತ್ತಿ ಅವರಲ್ಲಿತ್ತು. ಬಹುಶಃ ಇಂದಿನ ಟ್ವಿಟರ್ ಯುಗದಲ್ಲಿ ಅವರು ಬದುಕಿಲ್ಲದಿರುವುದು ಅವರ ಅದೃಷ್ಟವೆನ್ನಬಹುದು.

ನಮ್ಮ ಆಳವಾದ ಸಾಮಾಜಿಕ ಗಣ್ಯತೆಯು ವ್ಯಾಪಾರಗಳು ಮತ್ತು ವೃತ್ತಿಗಳಲ್ಲಿ ಹಾಕುಹೊಕ್ಕಾಗಿದೆ. ಠಾಕುಠೀಕಿನ ಸಶಸ್ತ್ರಪಡೆಗಳ ಸಮಾರಂಭದಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ ಪಾರ್ರಿಕರ್ ಅವರು ಚಪ್ಪಲಿಗಳಲ್ಲಿ ಓಡಾಡುತ್ತಿದ್ದನ್ನು ನಾವು ನೋಡಿದ್ದೇವೆ. ಭಾರತಕ್ಕೆ ಇದಕ್ಕಿಂತ ಚೆನ್ನಾಗಿ ಗೊತ್ತಿರಬೇಕು. ನಮ್ಮ ಇಬ್ಬರು ಅತ್ಯಂತ ಯಶಸ್ವಿ ರಕ್ಷಣಾ ಸಚಿವರಾಗಿದ್ದ ವೈ.ಬಿ.ಚವಾಣ್ ಮತ್ತು ಬಾಬು ಜಗಜೀವನ ರಾಮ ಅವರು ಮಿಲಿಟರಿಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿರದ ವರ್ತನೆ ಮತ್ತು ಮನೋಭಾವಗಳನ್ನು ಹೊಂದಿದ್ದರು. 

ಆದರೆ ಭಾರತದಲ್ಲಿಯ ನಮಗೆ ನಮ್ಮದೇ ರಾಜಕೀಯ ಇತಿಹಾಸ ಗೊತ್ತಿಲ್ಲ. ಇಂಗ್ಲಿಷ್ ತಿಳಿದಿರುವುದರ ಮಹತ್ವವನ್ನು ನಾವು ಕಡೆಗಣಿಸುವಂತಿಲ್ಲ. ಭಾರತದಲ್ಲಿ ಅದು ಸಶಕ್ತೀಕರಣದ ಭಾಷೆಯಾಗಿದೆ. ಇದೇ ಕಾರಣದಿಂದ ಲೋಹಿಯಾವಾದಿಗಳು ಸಾಮಾಜಿಕ ಗಣ್ಯತೆಯನ್ನು ಬ್ರಿಟಷರು ಬಿಟ್ಟುಹೋದ ಬಳುವಳಿ ಎಂದು ವಿರೋಧಿಸುವ ಮೂಲಕ ತಪ್ಪು ಮಾಡಿದ್ದರು. ಈಗ ಯೋಗಿ ಆದಿತ್ಯನಾಥ ಮತ್ತು ವೈ.ಎಸ್.ಜಗನ್ಮೋಹನ್ ರೆಡ್ಡಿಯವರಂತಹ ಮುಖ್ಯಮಂತ್ರಿಗಳು ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಭಾಷೆಯಲ್ಲಿ ಅಷ್ಟೊಂದು ಪಾರಂಗತರಲ್ಲದವರನ್ನು ಅನಕ್ಷರಸ್ಥ ಅಥವಾ ಹಳ್ಳಿ ಗಮಾರ ಎಂದು ಅಣಕಿಸುವುದು ತಪ್ಪು.

ನಾವು ಭಾರತೀಯರು ಇಂಗ್ಲಿಷ್ ಅನ್ನು ನಮ್ಮ ಅನುಕೂಲತೆಗಳಿಗೆ ತಕ್ಕಂತೆ ಅಳವಡಿಸಿಕೊಂಡಿದ್ದೇವೆ. ಇಂಗ್ಲಿಷ್ ಮಾತನಾಡಲು, ಬರೆಯಲು ಮತ್ತು ವ್ಯಾಖ್ಯಾನಿಸಲೂ ನಾವು ನಮ್ಮದೇ ಆದ ವಿಧಾನಗಳನ್ನು ಹೊಂದಿದ್ದೇವೆ. ಇಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ರೀತಿಯಲ್ಲಿಯೇ ಇಂಗ್ಲಿಷ್ ಮಾತನಾಡುತ್ತಾರೆ. ವಿಭಿನ್ನ ಕಡೆಗಳಲ್ಲಿ ಅವೇ ಇಂಗ್ಲಿಷ್ ಶಬ್ದಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ. ಉದಾಹರಣೆಗೆ ‘ಟ್ರಬಲ್ ಶೂಟರ್’ ಎಂದರೆ ತೊಂದರೆಗಳನ್ನು ನಿವಾರಿಸುವವನು ಎನ್ನುವುದು ನಮ್ಮ ಅರ್ಥವಾಗಿದ್ದರೆ ಈಶಾನ್ಯ ಭಾರತದವರ ಪಾಲಿಗೆ ಈ ಟ್ರಬಲ್ ಶೂಟರ್ ’ ಅಂದರೆ ತೊಂದರೆಗಳನ್ನುಂಟು ಮಾಡುವವನು ಎಂದಾಗಿದೆ. ಪ.ಬಂಗಾಳದಲ್ಲಿ ನೀವು ಯಾವುದಾದರೂ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ,ಅವರು ಮಾರ್ಕೆಟಿಂಗ್ ಹೋಗಿದ್ದಾರೆ ಎಂಬ ಉತ್ತರ ನಿಮಗೆ ದೊರೆಯಬಹುದು. ಶಾಪಿಂಗ್ ಸ್ಥಳೀಯ ಇಂಗ್ಲಿಷ್ ನಲ್ಲಿ ಬಳಕೆಯಾಗುವುದು ಹೀಗೆ.

ಕೆಟ್ಟ ಇಂಗ್ಲಿಷ್ ಬಳಸುವುದು ಒಳ್ಳೆಯದು ಎಂದು ನಾನು ಹೇಳುತ್ತಿಲ್ಲ. ಅದು ನಿಮ್ಮನ್ನು ತಿದ್ದಿಕೊಳ್ಳುವಂತೆ ಮತ್ತು ಬುದ್ದಿ ಕಲಿತುಕೊಳ್ಳುವಂತೆ ಮಾಡುತ್ತದೆ. ಆದರೆ ನಿಮಗೆ ಇಂಗ್ಲಿಷ್ ಮಾತನಾಡಲು ಬರದಿದ್ದರೆ ನೀವು ಯಾವುದಕ್ಕೂ ಉಪಯೋಗವಿಲ್ಲ ಎನ್ನುವುದು ಅದರ ಅರ್ಥವಲ್ಲ. ಅಲ್ಲದೆ ಪರಿಪೂರ್ಣ ಅಥವಾ ಸರಿಯಾದ ಇಂಗ್ಲಿಷ್ ಯಾವುದು ಎನ್ನುವುದನ್ನು ನೀವು ಎಲ್ಲಿಂದ ಬಂದಿದ್ದೀರಿ ಮತ್ತು ನೀವು ಎಲ್ಲಿ ಅದನ್ನು ಕಲಿತಿದ್ದೀರಿ ಎನ್ನುವದರ ಮೇಲೆ ಒಂದು ನೂರು ವಿಧಗಳಲ್ಲಿ ವ್ಯಾಖ್ಯಾನಿಸಬಹುದು. ದಿಲ್ಲಿಯ ವೈವಾಹಿಕ ಜಾಹೀರಾತುಗಳಲ್ಲಿಯ ‘ಕಾನ್ವೆಂಟೆಡ್’ನಂತಹ ಶಬ್ದಗಳು ಅಥವಾ ‘ತರೂರಿಯನ್’ನಂತಹ ಉಕ್ತಿಗಳನ್ನು ಎರವಲಾಗಿ ಪಡೆದುಕೊಳ್ಳುವ ಮೂಲಕ ನೀವು ಪರಿಪೂರ್ಣತೆಗೆ ನಿಕಟವಾಗಬಹುದು.

ಪ್ರತಿಯೊಬ್ಬರೂ ಶಾಲೆಯಲ್ಲಿ ಆರಂಭದಲ್ಲಿಯೇ ಇಂಗ್ಲಿಷ್ ಕಲಿತಿರುವುದಿಲ್ಲ. ನೀವು ಭಾಷೆಯೊಂದಿಗೆ ಹೇಗೆ ಸಂಬಂಧವನ್ನು ಹೊಂದಿರುತ್ತೀರಿ ಎನ್ನುವುದು ನೀವು ಅದನ್ನು ಹೇಗೆ ಕಲಿತಿದ್ದಿರಿ ಎನ್ನುವುದನ್ನೂ ಅವಲಂಬಿಸಿರುತ್ತದೆ. ನಾನು ಆರನೇ ತರಗತಿಯಿಂದ ಇಂಗ್ಲಿಷ್ ವರ್ಣಮಾಲೆಯನ್ನು ಕಲಿಸುವುದನ್ನು ಆರಂಭಿಸುವ ಶಾಲೆಯಲ್ಲಿ ಓದಿದ್ದೆ. ಆಗ ಶಿಕ್ಷಕರು ಕೆಲವು ಶಬ್ದಗಳನ್ನು ನಾವು ಬೇಗ ಕಲಿತುಕೊಳ್ಳುವಂತಾಗಲು ಕೆಲವು ಟ್ರಿಕ್ಗಳನ್ನೂ ಬಳಸುತ್ತಿದ್ದರು.

ಮೋದಿಯವರ ರಾಜಕೀಯ ಪ್ರತಿಪಾದನೆಯು ಮೂರು ಪ್ರಮುಖ ಅಂಶಗಳನ್ನು ಹೊಂದಿದೆ ಎಂದು ನಾನು ಹೇಳುತ್ತಲೇ ಬಂದಿದ್ದೇನೆ. ಹೊಸ ಪುನರ್ವ್ಯಾಖ್ಯಾನಿತ ಹಿಂದು ರಾಷ್ಟ್ರವಾದ, ಭ್ರಷ್ಟಾಚಾರ ವಿರೋಧಿ ಹೋರಾಟಗಾರನೆಂಬ ಛಾಪನ್ನು ಪಡೆಯುವುದು ಮತ್ತು ಅತ್ಯಂತ ಬಡವನಿಗೂ ಅಭ್ಯುದಯದ ಫಲಗಳನ್ನು ತಲುಪಿಸಲು ಯತ್ನಿಸುತ್ತಿದ್ದೇನೆ ಎನ್ನವುದು ಇವು ಈ ಮೂರು ಅಂಶಗಳು. 

ಹಾಂ,ನಾನು ಇನ್ನೊಂದು ಮುಖ್ಯ ಅಂಶವನ್ನು ಕಡೆಗಣಿಸಿದ್ದೆ. ಅದು ಗಣ್ಯತೆ ವಿರೋಧಿ. ನಮ್ಮ ಶಾಲಾ ಪಠ್ಯಪುಸ್ತಕಗಳು ನೆಹರು ಬೆಳೆಸಿದ್ದ ಸಂಪತ್ತಿನ ಬಗ್ಗೆ ಹೆಮ್ಮೆಯಿಂದ ಉಲ್ಲೇಖಿಸಿದ್ದವು. ಈಗ ಅದು ಯಾರ ಮೇಲೂ ಪ್ರಭಾವ ಬೀರುವುದಿಲ್ಲ,ಆದರೆ ‘ಚಾಯ್ವಾಲಾ ’ಕಥೆ ಕೆಲಸ ಮಾಡುತ್ತದೆ.

ಮೋದಿಯವರನ್ನು ಇಂದು ಆಗ ಕಾಂಗ್ರೆಸ್ ನಾಯಕರು ಹೇಗಿದ್ದರೋ ಅದರ ವಿರೋಧಾಭಾಸದ ರೂಪದಲ್ಲಿ ನೋಡಲಾಗುತ್ತಿದೆ. ಮೋದಿಯವರು ಲುಟ್ಯೆನ್ ಮತ್ತು ಖಾನ್ ಮಾರ್ಕೆಟ್ ಗ್ಯಾಂಗಗಳ ವಿರುದ್ಧ ದಾಳಿ ನಡೆಸಿದಾಗ ಅದು ಈ ಮೇಲ್ಸ್ತರದ ನಾಯಕರನ್ನು ಸೂಚಿಸುತ್ತದೆ. ಅವರು ಸುದೀರ್ಘ ಕಾಲದಿಂದ ಅಧಿಕಾರದಲ್ಲಿದ್ದರು ಮತ್ತು ಅದಕ್ಕೆ ಅವರಿಗೆ ಅರ್ಹತೆಯೇ ಇರಲಿಲ್ಲ ಎಂದು ಅವರು ತನ್ನ ಮತದಾರರಿಗೆ ಹೇಳುತ್ತಾರೆ. ನೀವು ಅವರು ಸ್ಟ್ರೆಂಗ್ತ್ ಅನ್ನು ‘ಸ್ಟ್ರೆನ್ತ್’ ಎಂದು ಉಚ್ಚರಿಸಿದ್ದಕ್ಕಾಗಿ ಅಥವಾ ಮಾಂಡವೀಯ ಅವರು ಮಹಾತ್ಮಾ ಗಾಂಧಿಯವರನ್ನು ‘ನೇಷನ್ ಆಫ್ ದಿ ಫಾದರ್’ ಎಂದು ಕರೆದಿದ್ದಕ್ಕಾಗಿ ಅಣಕಿಸಿದಾಗೆಲ್ಲ ನೀವು ಮೋದಿಯವರ ಅಭಿಪ್ರಾಯವನ್ನು ಅವರ ಮತದಾರರಿಗೆ ತಲುಪಿಸುತ್ತೀರಿ.

Writer - ಶೇಖರ್ ಗುಪ್ತಾ (Theprint.in)

contributor

Editor - ಶೇಖರ್ ಗುಪ್ತಾ (Theprint.in)

contributor

Similar News