×
Ad

ಇಸ್ರೇಲ್ - ಟರ್ಕಿ ಅಧ್ಯಕ್ಷರ ನಡುವೆ ದೂರವಾಣಿ ಮಾತುಕತೆ

Update: 2021-07-13 21:19 IST
 photo: Isaac Herzog (twiiter/@HananyaNaftali) | Recep Tayyip Erdogan (PTI)

ಅಂಕಾರಾ, ಜು.13: ಟರ್ಕಿಯ ಅಧ್ಯಕ್ಷ ರಿಸೆಪ್ ಎರ್ಡೋಗನ್ ಇಸ್ರೇಲ್ ನೂತನ ಅಧ್ಯಕ್ಷ ಇಸಾಕ್ ಹೆರ್ಝೋರ್ಗ್‌ ರ ಜತೆ ಸೋಮವಾರ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು ಈ ಪ್ರಕ್ರಿಯೆ ದೀರ್ಘಾವಧಿಯಿಂದ ಹದಗೆಟ್ಟಿರುವ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿರಿಸಿದ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. 

ಪೆಲೆಸ್ತೀನ್ ನ ನಿಲುವನ್ನು ನಿರಂತರ ಬೆಂಬಲಿಸುತ್ತಾ ಬಂದಿರುವ ಎರ್ಡೋಗನ್ ಕಳೆದ ಶನಿವಾರ ಪೆಲೆಸ್ತೀನ್ ಅಥಾರಿಟಿ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಜತೆ ಮಾತುಕತೆ ನಡೆಸಿದ ಬಳಿಕ ಅಪರೂಪದ ವಿದ್ಯಮಾನ ಸಂಭವಿಸಿದೆ. ಪೆಲೆಸ್ತೀನ್ ನಲ್ಲಿ ಇಸ್ರೇಲ್ ನ ದಬ್ಬಾಳಿಕೆಯನ್ನು ನೋಡಿ ಟರ್ಕಿ ಸುಮ್ಮನಿರುವುದಿಲ್ಲ ಎಂದು ಈ ಮಾತುಕತೆ ಸಂದರ್ಭ ಅಬ್ಬಾಸ್ ಗೆ ಎರ್ಡೋಗನ್ ಭರವಸೆ ನೀಡಿದ್ದರು ಎಂದು ವರದಿಯಾಗಿತ್ತು. ಈ ಹಿಂದೆ ಇಸ್ರೇಲ್ ಮತ್ತು ಟರ್ಕಿ ಜತೆ ನಿಕಟ ಪ್ರಾದೇಶಿಕ ಸಹಭಾಗಿತ್ವವಿತ್ತು, ಆದರೆ ಕಳೆದ 10 ವರ್ಷಗಳಿಂದ ಈ ಸಂಬಂಧ ಹದಗೆಟ್ಟಿತ್ತು. 

ಪೆಲೆಸ್ತೀನ್ ವಿರುದ್ಧದ ಇಸ್ರೇಲ್ ನ ನೀತಿಯನ್ನು ಟರ್ಕಿ ಕಡುವಾಗಿ ವಿರೋಧಿಸುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಶಾಂತಿ ಮತ್ತು ಸ್ಥಿರತೆಗೆ ಟರ್ಕಿ-ಇಸ್ರೇಲ್ ನಡುವಿನ ಸಂಬಂಧಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ . ವಿಭಿನ್ನ ನಿಲುವು ಹೊಂದಿದ್ದರೂ ಉಭಯ ದೇಶಗಳ ನಡುವಿನ ಮಾತುಕತೆ ಮುಂದುವರಿಯಬೇಕಾಗಿದೆ. ಇಂಧನ, ಪ್ರವಾಸೋದ್ದಿಮೆ, ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಸಹಭಾಗಿತ್ವಕ್ಕೆ ವ್ಯಾಪಕ ಅವಕಾಶಗಳಿಗೆ ಎಂದು ಸೋಮವಾರ ಇಸ್ರೇಲ್ ಅಧ್ಯಕ್ಷರ ಜತೆಗಿನ ಮಾತುಕತೆ ಸಂದರ್ಭ ಎರ್ಡೋಗನ್ ಹೇಳಿರುವುದಾಗಿ ಟರ್ಕಿ ಅಧ್ಯಕ್ಷರ ಕಚೇರಿಯ ಮೂಲಗಳು ಹೇಳಿವೆ. ಅಭಿಪ್ರಾಯ ಭೇದವಿದ್ದರೂ ಮಾತುಕತೆ ಮುಂದುವರಿಸಲು, ವಿಶೇಷವಾಗಿ ಇಸ್ರೇಲ್- ಪೆಲೆಸ್ತೀನ್ ನಡುವಿನ ಎರಡು ರಾಷ್ಟ್ರ ವಿವಾದಕ್ಕೆ ಪರಿಹಾರ ರೂಪಿಸಲು ಮಾತುಕತೆ ಮುಂದುವರಿಯುವ ಅಗತ್ಯವಿದೆ ಎಂದು ಇಸ್ರೇಲ್ ಅಧ್ಯಕ್ಷರ ಕಚೇರಿಯ ಹೇಳಿಕೆಯಲ್ಲೂ ಉಲ್ಲೇಖಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News