ನೀಟ್ - ಎಂಡಿಎಸ್ ಕೌನ್ಸೆಲಿಂಗ್ ವಿಳಂಬ: ಸುಪ್ರೀಂಕೋರ್ಟ್ ಅಸಮಾಧಾನ

Update: 2021-07-13 16:43 GMT

ಹೊಸದಿಲ್ಲಿ,ಜು.13: ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಸಲಾಗುವ 2021ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಹಾಗೂ ಸ್ನಾತಕೋತ್ತರ ದಂತಶಸ್ತ್ರಚಿತ್ಸೆ ಕೋರ್ಸ್ ನ (ನೀಟ್-ಎಂಡಿಎಸ್) ಪರೀಕ್ಷೆಯ ಕೌನ್ಸೆಲಿಂಗ್ ನ ವೇಳಾಪಟ್ಟಿಯನ್ನು ಪ್ರಕಟಿಸಲು ವಿಳಂಬಿಸುತ್ತಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
   
‘‘ಈ ಬಗ್ಗೆ ಹೇಳಿಕೆ ನೀಡಿ. ಆರೋಗ್ಯ ಸಚಿವಾಲಯವು ವೇಳಾಪಟ್ಟಿಯನ್ನು ಪ್ರಕಟಿಸಲು ಮೀನಾಮೇಷ ಎಣಿಸುತ್ತಿದೆ’’ ಎಂದು ನ್ಯಾಯಮೂರ್ತಿ ಚಂದ್ರಚೂಡ ಅವರು ಆಕ್ಷೇಪ ವ್ಯಕ್ತಪಡಿಸಿದರು. ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವವರು ವೈದ್ಯಕೀಯ ಕೋರ್ಸ್ ಗಳ ಪ್ರವೇಶಾರ್ಥಿಗಳಾಗಿದ್ದಾರೆ ಹಾಗೂ ಅವರು ಭವಿಷ್ಯದಲ್ಲಿ ರೋಗಿಗಳ ಸೇವೆಯನ್ನು ಮಾಡುವವರಾಗಿದ್ದಾರೆ ಎಂದವರು ಹೇಳಿದರು. 

ಈ ಬಗ್ಗೆ ಉತ್ತರಿಸಲು ಒಂದು ವಾರಗಳ ಕಾಲವಕಾಶ ನೀಡಬೇಕೆಂಬ ಕೇಂದ್ರ ಸರಕಾರದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರ ಮನವಿಯನ್ನು ನ್ಯಾಯಪೀಛ ಪುರಸ್ಕರಿಸಿತು. ನೀಟ್ ಹಾಗೂ ನೀಟ್-ಎಂಡಿಎಸ್ ಪರೀಕ್ಷೆಗಳ ಕೌನ್ಸೆಲಿಂಗ್ ನಡೆಸುವ ಬಗ್ಗೆ ಈ ವಾರದೊಳಗೆ ತ್ವರಿತ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಳ್ಳುವುದೆಂದು ತಾನು ನಿರೀಕ್ಷಿಸುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿತು. ಕೌನ್ಸೆಲಿಂಗ್ ಗಳ ಪ್ರಸ್ತಾವಿತ ದಿನಾಂಕಗಳ ಬಗ್ಗೆ ತನಗೆ ಮಾಹಿತಿ ನೀಡುವಂತೆಯೂ ಕೇಂದ್ರ ಸರಕಾರಕ್ಕೆ ಸೂಚಿಸಿತು.

ಕೌನ್ಸೆಲಿಂಗ್ ವಿಳಂಬಿಸುತ್ತಿರುವುದನ್ನು ಪ್ರಶ್ನಿಸಿ ನೀಟ್-ಎಂಡಿಎಸ್ ಪರೀಕ್ಷಾರ್ಥಿಗಳು ಜುಲೈ 2ರಂದು ಅರ್ಜಿ ಸಲ್ಲಿಸಿದ ಬಳಿಕ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News