ದಿಲ್ಲಿ ಗಲಭೆ: ಪೊಲೀಸರು ಆರೋಪಿಗಳ ಸಮರ್ಥನೆಗೆ ಯತ್ನಿಸುತ್ತಿದ್ದಾರೆ, ಕರ್ತವ್ಯದಲ್ಲಿ ವಿಫಲರಾಗಿದ್ದಾರೆ ಎಂದ ಕೋರ್ಟ್

Update: 2021-07-14 11:23 GMT

ಹೊಸದಿಲ್ಲಿ: ಕಳೆದ ವರ್ಷ  ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ವೇಳೆ ತನ್ನ ಕಣ್ಣಿಗೆ ಗುಂಡೇಟಿನಿಂದ ಗಾಯಗಳಾಗಿವೆ ಎಂದು ಘೊಂಡಾದ ನಾಗರಿಕರೋರ್ವರು ದಾಖಲಿಸಿದ್ದ ದೂರಿನ ಆಧಾರದಲ್ಲಿ ಎಫ್‍ಐಆರ್ ದಾಖಲಿಸುವಂತೆ ದಿಲ್ಲಿಯ ನ್ಯಾಯಾಲಯವೊಂದು ನೀಡಿದ ಆದೇಶವನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿರುವ ದಿಲ್ಲಿ ಪೊಲೀಸರ ಕ್ರಮವನ್ನು  ಆಕ್ಷೇಪಿಸಿರುವ ನ್ಯಾಯಾಲಯ, ಪೊಲೀಸರು ಆರೋಪಿಗಳಿಗೆ ಸಮರ್ಥನೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಹಾಗೂ ತಮ್ಮ  ಶಾಸನಬದ್ಧ ಕರ್ತವ್ಯಗಳನ್ನುನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದೆ.

ಭಜನಪುರ ಪೊಲೀಸ್ ಠಾಣಾಧಿಕಾರಿ ಹಾಗೂ ಇತರ ಅಧಿಕಾರಿಗಳ ಮೇಲೆ ಈ ಸಂಬಂಧ ರೂ. 25,000 ದಂಡ ಹೇರಿದ  ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ವಿನೋದ್ ಯಾದವ್, ತಮ್ಮ ಆದೇಶದ ಪ್ರತಿಯನ್ನು ಪೊಲೀಸ್ ಆಯುಕ್ತರಿಗೂ ಸಲ್ಲಿಸಿ  ಈ ನಿರ್ದಿಷ್ಟ ಪ್ರಕರಣದಲ್ಲಿ ತನಿಖೆಯ ಕುರಿತಂತೆ ಅವರ ಗಮನ ಸೆಳೆದರಲ್ಲದೆ ಸೂಕ್ತ ಕ್ರಮಕ್ಕೂ ಸೂಚಿಸಿದ್ದಾರೆ.

ಮೊಹಮ್ಮದ್ ನಾಸಿರ್ ಎಂಬಾತನ ದೂರಿನ ಆಧಾರದಲ್ಲಿ  ದಿಲ್ಲಿ ಪೊಲೀಸರಿಗೆ 24 ಗಂಟೆಗಳೊಳಗೆ ಎಫ್‍ಐಆರ್ ದಾಖಲಿಸುವಂತೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಅಕ್ಟೋಬರ್ 2020ರಲ್ಲಿ ಸೂಚಿಸಿದ್ದರು. ಆತ ತನ್ನ ದೂರಿನಲ್ಲಿ  ಹಲವು ಮಂದಿಯ ಹೆಸರುಗಳನ್ನು ಉಲ್ಲೇಖಿಸಿದ್ದರು. ಆದರೆ ಪೊಲೀಸರು ಎಫ್‍ಐಆರ್ ದಾಖಲಿಸಲು ಕ್ರಮ ಕೈಗೊಳ್ಳದೇ ಇದ್ದುದರಿಂದ ಕೋರ್ಟಿನ ಮೊರೆ ಹೋಗಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು ಘಟನೆ ಸಂಬಂಧ ಈಗಾಗಲೇ ಎಫ್‍ಐಆರ್ ದಾಖಲಾಗಿದೆ ಆದರೆ ನಾಸಿರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ ವ್ಯಕ್ತಿಗಳ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದರಲ್ಲದೆ ಆರೋಪಿಗಳಲ್ಲಿಬ್ಬರಾದ ನರೇಶ್ ಮತ್ತು ಉತ್ತಮ್ ಘಟನೆ ನಡೆದ ದಿನ ದಿಲ್ಲಿಯಲ್ಲಿಯೇ ಇರಲಿಲ್ಲ ಹಾಗೂ ಇನ್ನೊಬ್ಬಾತ ಸುಶೀಲ್ ತನ್ನ ಕಚೇರಿಯಲ್ಲಿದ್ದ ಎಂದು ಹೇಳಿದ್ದರು.

ಆದರೆ ಇದರಿಂದ ಸಮಾಧಾನಗೊಳ್ಳದ ನ್ಯಾಯಾಲಯ ಪ್ರತ್ಯೇಕ ಎಫ್‍ಐಆರ್ ದಾಖಲಿಸುವಂತೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News