ಬಿಜೆಪಿ ಸಂಸದರು ಮಾತ್ರವಲ್ಲ, ಕಾಂಗ್ರೆಸ್ ನ ಸಿಂಘ್ವಿ ಕೂಡ ಜನಸಂಖ್ಯಾ ನಿಯಂತ್ರಣ ಕುರಿತು ಖಾಸಗಿ ಮಸೂದೆ ಮಂಡನೆಗೆ ಸಜ್ಜು!

Update: 2021-07-15 12:38 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.15: ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕುರಿತು ಚರ್ಚೆಗೆ ಕಾವೇರುತ್ತಿದೆ. ತನ್ಮಧ್ಯೆ ಜು.19ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಜನಸಂಖ್ಯಾ ನಿಯಂತ್ರಣದ ಮೇಲೆ ಖಾಸಗಿ ಸದಸ್ಯರ ಮಸೂದೆಗಳನ್ನು ಮಂಡಿಸಲು ಬಿಜೆಪಿ ಸಂಸದರು ಮಾತ್ರವಲ್ಲ, ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರೂ ಸಜ್ಜಾಗಿದ್ದಾರೆ. 2019ರಿಂದಲೂ ಬಾಕಿಯಿರುವ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಮಂಡಿಸಲು ಸಿಂಘ್ವಿ ಉದ್ದೇಶಿಸಿದ್ದಾರೆ ಎಂಧು theprint.in ವರದಿ ಮಾಡಿದೆ.

ಮಸೂದೆ ಮಂಡನೆಗೆ ಕಾರಣಗಳನ್ನು ತನ್ನ ಹೇಳಿಕೆಯಲ್ಲಿ ಪಟ್ಟಿ ಮಾಡಿರುವ ಸಿಂಘ್ವಿ, ತ್ವರಿತ ಜನಸಂಖ್ಯೆ ಬೆಳವಣಿಗೆಯಿಂದಾಗಿ ದೇಶದ ಸೀಮಿತ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಪರಿಣಾಮವಾಗಿ ಕಳೆದ ಕೆಲವು ದಶಕಗಳಲ್ಲಿ ಭಾರೀ ಪ್ರಮಾಣದಲ್ಲಿ ಪರಿಸರ ನಾಶ, ನಗರ ವಾಯುಮಾಲಿನ್ಯ ಮತ್ತು ಕೃಷಿ ಹಿಡುವಳಿ ಪ್ರಮಾಣದಲ್ಲಿ ಕುಸಿತದಂತಹ ಹಲವಾರು ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ ಎಂದು ತಿಳಿಸಿದ್ದಾರೆ.

ಏನಿದೆ ಮಸೂದೆಯಲ್ಲಿ?

ಮಸೂದೆಯಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಹಲವಾರು ಪ್ರೋತ್ಸಾಹಕ ಮತ್ತು ಎರಡು ಮಕ್ಕಳ ನೀತಿಯನ್ನು ಪಾಲಿಸುವಲ್ಲಿ ವಿಫಲರಾದ ಸರಕಾರಿ ನೌಕರರಿಗೆ ದಂಡನಾತ್ಮಕ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.

ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗುವುದು. ಅವರು ರಾಜ್ಯಸಭೆ ಮತ್ತು ರಾಜ್ಯ ವಿಧಾನ ಪರಿಷತ್ಗಳಿಗೆ ಆಯ್ಕೆಯಾಗಲೂ ಅನರ್ಹರಾಗುತ್ತಾರೆ. ಇಂತಹ ವ್ಯಕ್ತಿಗಳು ಸರಕಾರಿ ಉದ್ಯೋಗಗಳಲ್ಲಿ ಬಡ್ತಿಯಿಂದ ವಂಚಿತರಾಗುತ್ತಾರೆ. ಕೇಂದ್ರ ಮತ್ತು ರಾಜ್ಯ ಸರಕಾರದ ಗ್ರೂಪ್ ಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ಇಂತಹ ದಂಪತಿ ಬಡತನ ರೇಖೆಗಿಂತ ಮೇಲಿನ (ಎಪಿಎಲ್)ವರ್ಗಕ್ಕೆ ಸೇರಿದ್ದರೆ ಯಾವುದೇ ರೀತಿಯ ಸರಕಾರಿ ಸಹಾಯಧನವೂ ಲಭಿಸುವುದಿಲ್ಲ.

ಅಲ್ಲದೆ, ಕಾಯ್ದೆಯು ಜಾರಿಗೆ ಬಂದ ಒಂದು ವರ್ಷದ ಬಳಿಕ ಎಲ್ಲ ಕೇಂದ್ರ ಸರಕಾರಿ ನೌಕರರು ತಾವು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದಿಲ್ಲ ಎಂದು ಆಯಾ ನೇಮಕಾತಿ ಪ್ರಾಧಿಕಾರಕ್ಕೆ ಲಿಖಿತ ಮುಚ್ಚಳಿಕೆಯನ್ನು ಸಲ್ಲಿಸಬೇಕಾಗುತ್ತದೆ. ಒಂದು ಮಗುವು ಅಂಗವೈಕಲ್ಯ ಹೊಂದಿದ್ದರೆ ಅಥವಾ ಸೂಚಿಸಬಹುದಾದ ಇತರ ಯಾವುದೇ ಸ್ಥಿತಿಯಿಂದ ಬಳಲುತ್ತಿದ್ದರೆ ಮಾತ್ರ ಎರಡು ಮಕ್ಕಳನ್ನು ಹೊಂದಿರುವ ಉದ್ಯೋಗಿಗೆ ಇನ್ನೊಂದು ಮಗುವನ್ನು ಹೊಂದಲು ಅವಕಾಶ ನೀಡಲಾಗುತ್ತದೆ. ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವ ಕೇಂದ್ರ ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸುವುದನ್ನೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಸ್ವಯಂಪ್ರೇರಿತ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ಜನಸಂಖ್ಯಾ ಸ್ಥಿರೀಕರಣ ನಿಧಿ

ಏಕೈಕ ಮಗುವನ್ನು ಹೊಂದಿರುವವರಿಗೆ ಮತ್ತು ಸ್ವಯಂಪ್ರೇರಿತವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗುವ ಪೋಷಕರಿಗೆ ಹಲವಾರು ಪ್ರೋತ್ಸಾಹಕ ಕ್ರಮಗಳನ್ನು ಮಸೂದೆಯು ಪ್ರಸ್ತಾಪಿಸಿದೆ. ಇಂತಹ ಪ್ರಕರಣಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಮತ್ತು ಸರಕಾರಿ ಉದ್ಯೋಗಗಳಲ್ಲಿ ಇಂತಹ ಏಕೈಕ ಮಗುವಿಗೆ ಆದ್ಯತೆಯನ್ನು ನೀಡಲಾಗುವುದು. ವಿವಾಹಿತ ದಂಪತಿಯ ಪ್ರಕರಣದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಬಿಪಿಎಲ್ ವರ್ಗಕ್ಕೆ ಸೇರಿದ್ದು ಒಂದೇ ಮಗುವನ್ನು ಹೊಂದಿದ್ದರೆ ಅಂತಹ ಮಗುವು ಗಂಡಾಗಿದ್ದರೆ 60,000 ರೂ. ಮತ್ತು ಹೆಣ್ಣಾಗಿದ್ದರೆ ಒಂದು ಲಕ್ಷ ರೂ.ಗಳ ಒಂದು ಬಾರಿಯ ಧನಸಹಾಯವನ್ನು ಕೇಂದ್ರ ಸರಕಾರದಿಂದ ಪಡೆಯುತ್ತಾರೆ.

ರಾಷ್ಟ್ರೀಯ ಜನಸಂಖ್ಯಾ ಸ್ಥಿರೀಕರಣ ನಿಧಿಯ ಸ್ಥಾಪನೆಯನ್ನೂ ಮಸೂದೆಯಲ್ಲಿ ಪ್ರಸ್ತಾವಿಸಲಾಗಿದ್ದು,ಕೇಂದ್ರ ಮತ್ತು ರಾಜ್ಯಸರಕಾರಗಳು ಇದಕ್ಕೆ ತಮ್ಮ ವಂತಿಗೆಯನ್ನು ಸಲ್ಲಿಸುತ್ತವೆ. ಹೆಚ್ಚಿನ ಫಲವತ್ತತೆ ದರ ಹೊಂದಿರುವ ರಾಜ್ಯಗಳು ಹೆಚ್ಚಿನ ಅನುಪಾತದಲ್ಲಿ ವಂತಿಗೆಯನ್ನು ಸಲ್ಲಿಸಬೇಕಾಗುತ್ತದೆ ಮತ್ತು ಕಡಿಮೆ ಫಲವತ್ತತೆ ದರವನ್ನು ಹೊಂದಿರುವ ರಾಜ್ಯಗಳಿಗೆ ಈ ವಂತಿಗೆಯ ಅನುಪಾತ ಕಡಿಮೆಯಾಗಿರುತ್ತದೆ.

 ನಿಧಿಯಡಿ ಸಂಗ್ರಹವಾಗುವ ಹಣವನ್ನು ಜನಸಂಖ್ಯೆಯನ್ನು ನಿಯಂತ್ರಿಸಲು ಸುಧಾರಣೆಗಳನ್ನು ಜಾರಿಗೊಳಿಸಿದ ಮತ್ತು ಜನಸಂಖ್ಯಾ ಬೆಳವಣಿಗೆ ದರದಲ್ಲಿ ಗಮನಾರ್ಹ ಇಳಿಕೆಯನ್ನು ಸಾಧಿಸಿದ ರಾಜ್ಯಗಳಿಗೆ ವಿತರಿಸಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.

ರಾಜ್ಯಸಭೆಗೆ ಬಿಜೆಪಿಯ ನಾಮಕರಣ ಸದಸ್ಯ ರಾಕೇಶ ಸಿನ್ಹಾ ಅವರೂ ಖಾಸಗಿ ಮಸೂದೆಯನ್ನು ಮಂಡಿಸಲು ಉದ್ದೇಶಿಸಿದ್ದಾರೆ. ಸಂಸದರು, ಶಾಸಕರು ಅಥವಾ ಸ್ಥಳೀಯ ಸ್ವಯಂ ಆಡಳಿತದ ಯಾರೇ ಆದರೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಅವರನ್ನು ಅನರ್ಹಗೊಳಿಸುವುದನ್ನು ಈ ಮಸೂದೆಯು ಪ್ರಸ್ತಾವಿಸಿದೆ.

ಸರಕಾರದ ಸಚಿವರಲ್ಲದ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News