ಲೆಬನಾನ್ ಗೆ ನೆರವಾಗುವ ಉದ್ದೇಶ: ಫ್ರಾನ್ಸ್ ಆತಿಥೇಯತ್ವದಲ್ಲಿ ಅಂತರಾಷ್ಟ್ರೀಯ ಸಮಾವೇಶ

Update: 2021-07-16 15:19 GMT

 ಪ್ಯಾರಿಸ್, ಜು.16: ತೀವ್ರ ಬಿಕ್ಕಟ್ಟು ಎದುರಿಸುತ್ತಿರುವ ಲೆಬನಾನ್ಗೆ ನೆರವಾಗುವ ಉದ್ದೇಶದಿಂದ ಮುಂದಿನ ತಿಂಗಳು ಅಂತರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವುದಾಗಿ ಫ್ರಾನ್ಸ್ ಹೇಳಿದೆ. ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ಸುಮಾರು 200 ಮಂದಿಯ ಸಾವಿಗೆ ಕಾರಣವಾದ ಭೀಕರ ಬಾಂಬ್ ಸ್ಫೋಟದ ಪ್ರಥಮ ವಾರ್ಷಿಕ ದಿನದಂದು ಈ ಸಮಾವೇಶ ನಡೆಯಲಿದೆ ಎಂದು ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ಈ ಮಧ್ಯೆ, ಲೆಬನಾನ್ ನ ನಿಯೋಜಿತ ಪ್ರಧಾನಿ ಸಾದ್ ಹರೀರಿ ನೂತನ ಸರಕಾರ ರಚಿಸುವ ಪ್ರಯತ್ನ ಕೈಬಿಟ್ಟಿರುವುದಾಗಿ ಘೋಷಿಸಿರುವುದು ದೇಶದ ರಾಜಕೀಯ ಅಸ್ಥಿರತೆಗೆ ಅಂತ್ಯಹಾಡುವ ಪ್ರಯತ್ನಗಳಿಗೆ ಮತ್ತೊಂದು ಹಿನ್ನಡೆಯಾಗಿದೆ. ಕಳೆದ ವರ್ಷದ ಆಗಸ್ಟ್ 4ರಂದು ಬೈರೂತ್ನಲ್ಲಿ ನಡೆದಿದ್ದ ಭೀಕರ ಬಾಂಬ್ ಸ್ಫೋಟದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದ ಪ್ರಧಾನಿ ಹಸನ್ ಡಿಯಾಬ್, ಈಗಲೂ ಉಸ್ತುವಾರಿ ಪ್ರಧಾನಿಯಾಗಿ ಮುಂದುವರಿದಿದ್ದು ವಿಪಕ್ಷಗಳು ಸರಕಾರ ರಚಿಸುವ ಪ್ರಯತ್ನದಲ್ಲಿ ಸಫಲವಾಗಿಲ್ಲ.
  
ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿರುವುದರಿಂದ ತೀವ್ರ ತೊಂದರೆಗೆ ಸಿಲುಕಿರುವ ಲೆಬನಾನ್ ಜನರ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ನೆರವಿನಿಂದ ಈ ಸಮಾವೇಶ ಆಯೋಜಿಸಲಾಗುವುದು ಎಂದು ಫ್ರಾನ್ಸ್ ವಿದೇಶ ಸಚಿವಾಲಯ ಹೇಳಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆನ್ ಮಾಕ್ರನ್ ಈ ಹಿಂದೆಯೂ ಲೆಬನಾನ್ ಗೆ ನೆರವಾಗುವ ಸಮಾವೇಶ ಆಯೋಜಿಸಿದ್ದು ಇದರಲ್ಲಿ ಸುಮಾರು 295 ಮಿಲಿಯನ್ ಡಾಲರ್ ನೆರವು ಸಂಗ್ರಹವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News