ನಾವು ಯಾವುದರ ಬಗ್ಗೆ ಮಾತಾಡಬೇಕಿದೆ ಗೊತ್ತೇ?

Update: 2021-07-18 18:41 GMT

 ನಾವೀಗ ಮಾತಾಡಬೇಕಾಗಿರುವುದು ಧರಿಸುವ ಉಡುಪಿನ ಬಗ್ಗೆ, ಮಾಡುವ ಊಟದ ಮೆನುವಿನ ಬಗ್ಗೆ ಅಲ್ಲ. ಮಾತಾಡಬೇಕಾಗಿರುವುದು ಈ ದೇಶದ ನೂರಾ ಮೂವತ್ತೈದು ಕೋಟಿ ಜನರಿಗೆ ಸೇರಬೇಕಾದ ಸಂಪತ್ತು ಬೆರಳೆಣಿಕೆಯಷ್ಟು ಕಾರ್ಪೊರೇಟ್ ಖದೀಮರ ಒಡೆತನದಲ್ಲಿ ಏಕಿದೆ? ಲಕ್ಷಾಂತರ ಜನ ಉಪವಾಸದಿಂದ ನರಳುತ್ತಿರುವಾಗ ಕೆಲವೇ ಕೆಲವು ಉಳ್ಳವರು ಯಾಕೆ ಮಜಾ ಮಾಡುತ್ತಿದ್ದಾರೆ? ಮುಂಬೈ, ಮಂಗಳೂರು ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳನ್ನು ಅದಾನಿ ಉಡಿಗೆ ಹಾಕಿದ್ದೇಕೆ? ಕಾರ್ಪೊರೇಟ್ ಸನ್ಯಾಸಿ ಬಾಬಾ ರಾಮ್‌ದೇವ್‌ರ ಪತಂಜಲಿ ಉದ್ಯಮದ ಮೇಲೆ ಮುಂದಿನ ಐದು ವರ್ಷ ತೆರಿಗೆ ಮನ್ನಾ ಮಾಡಿದ್ದೇಕೆ?


ಎಂಭತ್ತರ ದಶಕದ ಕೊನೆಯಲ್ಲಿ ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಕುಸಿದು ಬಿತ್ತು. ಅದರ ಬೆನ್ನಲ್ಲೇ ಪೂರ್ವ ಯುರೋಪಿನ ಕಮ್ಯುನಿಸ್ಟ್ ಸರಕಾರಗಳು ನೆಲಕಚ್ಚಿದವು. ಆವಾಗ ವಕ್ಕರಿಸಿದ್ದು ಈ ಜಾಗತೀಕರಣ ಎಂಬ ಪಿಡುಗು. ಹೆಸರೇನೋ ಆಕರ್ಷಕವಾಗಿತ್ತು. ಆದರೆ, ಜಗತ್ತು ಅದನ್ನು ಒಪ್ಪಿಕೊಂಡ ನಂತರ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಜನಕಲ್ಯಾಣದ ಯೋಜನೆಗಳೆಲ್ಲ ಹಳ್ಳ ಹಿಡಿದವು. ವಸ್ತುಗಳ ಉತ್ಪಾದನೆ ಮತ್ತು ಮಾರಾಟ ಜನ ಬಳಕೆಗಾಗಿ ಅಥವಾ ಜನರ ಅವಶ್ಯಕತೆಗಾಗಿ ಎಂಬ ಪರಿಕಲ್ಪನೆ ಮಾಯವಾಗಿ ಎಲ್ಲವೂ ಲಾಭಕ್ಕಾಗಿ, ವ್ಯಾಪಾರಕ್ಕಾಗಿ ಎಂಬ ನವ ಉದಾರವಾದಿ ವ್ಯಾಧಿ ಹಬ್ಬಿದ ನಂತರ ವಿಶ್ವದ ಚಿತ್ರವೇ ಬದಲಾಯಿತು.

ಮಾರುಕಟ್ಟೆ ಆರ್ಥಿಕತೆಯೊಂದಿಗೆ ಮನುಷ್ಯರನ್ನು ಜಾತಿ, ಮತ, ಭಾಷೆಯ ಆಧಾರದಲ್ಲಿ ವಿಭಜಿಸಿ ಆಳುವ ಕುತಂತ್ರವನ್ನು ಆಡಳಿತ ವರ್ಗ ಅತ್ಯಂತ ವ್ಯವಸ್ಥಿತವಾಗಿ ನಡೆಸಿತು. ಜನರಿಗೆ ಅವರ ಹಸಿವು, ನಿರುದ್ಯೋಗ, ನೋವು, ಯಾತನೆಗಳು ಅರಿವಿಗೆ ಬಾರದಂತೆ ದೇವರು, ಧರ್ಮಗಳ ಮತ್ತೇರಿಸಲಾಯಿತು. ಮತ್ತೇರಿಸಿಕೊಂಡ ಜನರಲ್ಲಿ ಕ್ರಮೇಣ ಮನುಷ್ಯತ್ವದ ಅಂತರ್ಜಲ ಬತ್ತತೊಡಗಿತು. ಈಗ ಅದರ ಪರಿಣಾಮವನ್ನು ನಾವೆಲ್ಲ ಅನುಭವಿಸುತ್ತಿದ್ದೇವೆ.

ಭಾರತದಲ್ಲಿ ತೊಂಭತ್ತರ ದಶಕದಲ್ಲಿ ಮಾರುಕಟ್ಟೆ ಆರ್ಥಿಕ ನೀತಿಯ ಜೊತೆ ಕೋಮುವಾದವೂ ಹೆಡೆಯೆತ್ತಿತು. ಅದೇ ಸಂದರ್ಭದಲ್ಲಿ ಬಿಜೆಪಿ ನಾಯಕ ಅಡ್ವಾಣಿ ರಥಾರೂಢರಾಗಿ ಗುಜರಾತಿನ ಸೋಮನಾಥದಿಂದ ಅಯೋಧ್ಯೆಗೆ ಹೊರಟರು. ಆ ನಂತರ ದೇಶದಲ್ಲಿ ಏನೇನಾಯಿತು ಎಂಬುದು ಎಲ್ಲರಿಗೂ ತಿಳಿದ ವಿಷಯ.
 ಇದನ್ನು ಉಲ್ಲೇಖಿಸುವ ಉದ್ದೇಶವೇನೆಂದರೆ ಜಾಗತೀಕರಣ, ನವ ಉದಾರೀಕರಣದ ಬಗ್ಗೆ ದೇಶದಲ್ಲಿ ಎಲ್ಲೂ ಚರ್ಚೆಯಾಗದಂತೆ ರಾಮ ನಾಮಸ್ಮರಣೆ ಅದರ ಜೊತೆ ಜೊತೆಗೆ ನಾಥೂರಾಮ್ ಜನ್ಮದಿನಾಚರಣೆಗಳು ಆರಂಭವಾದವು. ಹೊಸ ದಿಕ್ಕಿಗೆ ಸಾಗಬೇಕಾಗಿದ್ದ ಹೊಸ ಪೀಳಿಗೆ ಜನ ವಿಭಜಕ ಹುಚ್ಚು ಹೊಳೆಯಲ್ಲಿ ತೇಲಿ ಹೋದರು. ಈ ಪ್ರವಾಹದ ಎದುರು ಈಜಿ ದಡ ಮುಟ್ಟಬೇಕಾದ ಚಳವಳಿಗಳು ಕೈ ಸೋತು ಇನ್ನೂವರೆಗೆ ಮುಳುಗುತ್ತ, ಏಳುತ್ತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರದಾಡುತ್ತಿವೆ.

ಕಳೆದ ಮೂವತ್ತು ವರ್ಷಗಳಿಂದ ಅಂದರೆ ನಿರ್ದಿಷ್ಟವಾಗಿ ತೊಂಭತ್ತರ ದಶಕದಿಂದ ದೇಶದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು, ಯಾವ ಆರ್ಥಿಕ ಸಾಮಾಜಿಕ ಕಾರ್ಯಕ್ರಮ ಜಾರಿಗೆ ಬರಬೇಕು? ಯಾವ ವಿಷಯದ ಸುತ್ತ ಚರ್ಚೆಯಾಗಬೇಕು ಎಂಬುದನ್ನು ತೀರ್ಮಾನಿಸುತ್ತ ಬಂದವರು ಈಗ ಅಧಿಕಾರ ಹಿಡಿದು ಕೂತಿದ್ದಾರೆ. ಅವರು ಕಾರ್ಯಸೂಚಿಯನ್ನು ಸಿದ್ಧಪಡಿಸುತ್ತಾರೆ. ನಾವು ಅದರ ಸುತ್ತ ಚರ್ಚಿಸುತ್ತಾ ಬರುತ್ತಿದ್ದೇವೆ. ಅವರ ಅರ್ಥಹೀನ ಭಾವನಾತ್ಮಕ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಅದರಲ್ಲೇ ಕಾಲಹರಣ ಮಾಡುತ್ತ ನಮ್ಮ ಕಾರ್ಯಕ್ರಮಗಳನ್ನೇ ಮರೆತಿದ್ದೇವೆ ಇಲ್ಲವೇ ಜನರ ಬಳಿ ಅವುಗಳನ್ನು ತಲುಪಿಸುವಲ್ಲಿ ವಿಫಲಗೊಂಡಿದ್ದೇವೆ.

ಜಾತಿ ರಹಿತ, ವರ್ಗ ರಹಿತ ಸಮಾಜದ ಸ್ಥಾಪನೆಯ ಕನಸು ಇವತ್ತಿನದ್ದಲ್ಲ. ಜಗತ್ತಿನ ಇತರೆಡೆಗಳಂತೆ ನಮ್ಮ ದೇಶದಲ್ಲೂ ಬುದ್ಧ, ಮಹಾವೀರ, ಗುರು ನಾನಕ ಬಸವಣ್ಣ, ವಿವೇಕಾನಂದ, ಭಗತ್‌ಸಿಂಗ್ ಎಲ್ಲರೂ ಆ ಸುಂದರ ಸಮಾಜ ಸ್ಥಾಪನೆಗಾಗಿ ವಿಚಾರ ಪ್ರತಿಪಾದಿಸುತ್ತ ಹೋರಾಡುತ್ತ ಬಂದವರು.

ಬಸವಣ್ಣನವರಂತೂ ‘ದೇಹವೇ ದೇಗುಲ’ ಎಂದು ಹೇಳಿ ಮಂದಿರ ಎಂಬ ಸ್ಥಾವರ ಸಂಸ್ಕೃತಿಯನ್ನು ತಿರಸ್ಕರಿಸಿದವರು. ಕಾಯಕ ಜೀವಿಗಳ ಹೊಸ ಚಳವಳಿಯನ್ನು ಕಟ್ಟಿದವರು. ವಿಶ್ವದ ಇತರೆಡೆ ಮುಹಮ್ಮದ್ ಪೈಗಂಬರ್, ಏಸುಕ್ರಿಸ್ತರಂಥ ಹಲವಾರು ಪ್ರವಾದಿಗಳ, ಮಹಾತ್ಮರ ಆಶಯ ಕೂಡ ಮನುಷ್ಯನ ಉನ್ನತಿಯಾಗಿತ್ತು.

ಆದರೆ, ಈ ಮಹಾಪುರುಷರ ಆಶಯ ಕನಸಾಗಿಯೇ ಉಳಿಯಿತು. ಇಂಥ ಸುಂದರ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಕೊಂಚ ಯಶಸ್ಸು ಸಾಧಿಸಿದ್ದು ಕಾರ್ಲ್ ಮಾರ್ಕ್ಸ್ ಪ್ರತಿಪಾದಿಸಿದ ಸಮತೆಯ ಸಿದ್ಧಾಂತ. ಒಂದು ಶತಮಾನ ಕಾಲ ಅದು ಜಗತ್ತಿನಲ್ಲಿ ಇಂಥ ಸಮಾಜವೊಂದರ ನಿರ್ಮಾಣ ಸಾಧ್ಯವೆಂದು ಸಾಧಿಸಿ ತೋರಿಸಿತು. ರಶ್ಯದಲ್ಲಿ ಲೆನಿನ್ ನಡೆಸಿದ ಪ್ರಯೋಗ ಕೂಡ 1917ರಲ್ಲಿ ಸಾಕಾರಗೊಂಡು 1988ರಲ್ಲಿ ವಿಫಲಗೊಂಡಿತು. ಭಾರತದಲ್ಲಿ ಇಂಥ ಉದಾತ್ತ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದವರು ಬಾಬಾಸಾಹೇಬ ಅಂಬೇಡ್ಕರ್. ಜಾತಿ, ಅಸ್ಪಶ್ಯತೆ, ಗುಲಾಮಗಿರಿ, ಅಸಮಾನತೆ ಅನಕ್ಷರತೆ ಇವುಗಳಿಂದ ತುಂಬಿದ ಸಮಾಜವೊಂದರಲ್ಲಿ ಎಲ್ಲರೂ ಉಸಿರಾಡುವ ವಾತಾವರಣ ನಿರ್ಮಾಣವಾಗಿದ್ದು ಬಾಬಾಸಾಹೇಬರ ಸಂವಿಧಾನದಿಂದ. ಇದಕ್ಕೆ ಪೂರಕವಾಗಿ ಜನ ಹೋರಾಟಗಳು ಕೂಡ ನಡೆದಿರುವುದೂ ನಿಜ.

 ಇಂಥ ಉದಾತ್ತ ಆಶಯಗಳನ್ನು ಹೊಂದಿದ್ದ ಭಾರತೀಯ ಸಮಾಜ ಇಂದು ಮತ್ತೆ ಅಡ್ಡ ದಾರಿ ಹಿಡಿದಿದೆ. ಬಡತನ, ನಿರುದ್ಯೋಗ, ಅಸಮಾನತೆ, ಅನಕ್ಷರತೆ, ಮಹಿಳಾ ಶೋಷಣೆ, ಅಸ್ಪೃಶ್ಯತೆ, ಮಕ್ಕಳ ಯಾತನೆ, ಪರಿಸರದ ವಿನಾಶ ಇದ್ಯಾವುದರ ಬಗೆಗೂ ಈಗ ಚರ್ಚೆಯಾಗುತ್ತಿಲ್ಲ. ಎಲ್ಲ ಅನಿಷ್ಟಕ್ಕೂ ಅವರೇ ಕಾರಣ ಎಂದು ನಿರ್ದಿಷ್ಟ ಜನಾಂಗವೊಂದನ್ನು ಗುರಿ ಮಾಡಿ, ‘ಅವರು ಏನು ಊಟ ಮಾಡುತ್ತಾರೆ? ಯಾವ ಬಟ್ಟೆ ಧರಿಸುತ್ತಾರೆ? ಅವರಿಗೆ ಎಷ್ಟುಮಕ್ಕಳಿವೆ? ಇಂತಹ ವಿಷಯಗಳ ಸುತ್ತ ನಾವೆಲ್ಲ ಚರ್ಚಿಸುವಂತೆ ಮಾಡುವಲ್ಲಿ ಪ್ರಭುತ್ವದ ಸೂತ್ರ ಹಿಡಿದವರು ಮತ್ತು ಅವರನ್ನು ನಿಯಂತ್ರಿಸುತ್ತಿರುವವರು ಯಶಸ್ವಿಯಾಗುತ್ತ್ತಾ ಬಂದಿದ್ದಾರೆ.

   ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಂಡು ಮತ್ತೆ ಚುನಾವಣೆ ಗೆಲ್ಲಲು ಇಂಥ ಭಾವನಾತ್ಮಕ ವಿಷಯಗಳ ಅನಿವಾರ್ಯತೆ ಅವರಿಗಿದೆ. ದೇಶದ ಸಂಪತ್ತನ್ನು ಅಂಬಾನಿ, ಅದಾನಿಗಳ ತಿಜೋರಿಗೆ ತುಂಬುತ್ತ, ಅವರ ತೆರಿಗೆಯನ್ನು ಮನ್ನಾ ಮಾಡುತ್ತಾ, ಇನ್ನೊಂದೆಡೆ ದೇಶದ ಪ್ರಜೆಗಳು ಲೀಟರ್‌ಗೆ 100 ರೂ. ಕೊಟ್ಟು ಪೆಟ್ರೋಲ್ ಮತ್ತು ಡೀಸೆಲ್ ಕೊಳ್ಳುವಂತೆ, 800 ರೂ. ತೆತ್ತು ಅಡಿಗೆ ಅನಿಲ ಸಿಲಿಂಡರ್ ಖರೀದಿಸುವಂತೆ ಮಾಡಿದವರ ಬಗ್ಗೆ ಚರ್ಚಿಸದೇ ಮುಸ್ಲಿಮರಿಗೆ ಎಷ್ಟು ಮಕ್ಕಳು? ಕ್ರೈಸ್ತರು ಮತಾಂತರ ಮಾಡುತ್ತಾರೆ, ಅವರೇಕೆ ಬುರ್ಖಾ ಧರಿಸುತ್ತಾರೆ? ಎಂಬ ವಿಷಯಗಳ ಸುತ್ತ ಚರ್ಚೆ ನಡೆಯುವಂತೆ ಮಾಡುವ ಅವರು ನಿರ್ಮಿಸಿದ ಹೊಂಡದಲ್ಲಿ ನಾವೆಲ್ಲ ಬಿದ್ದಿದ್ದೇವೆ.

ದೇಶದ್ರೋಹದ ಸುಳ್ಳು ಆರೋಪ ಹೊರಿಸಿ ವರವರರಾವ್, ಆನಂದ್ ತೇಲ್ತುಂಬ್ಡೆ, ಸುಧಾ ಭಾರದ್ವಾಜ್ ಅವರಂತಹ ಹೆಸರಾಂತ ಚಿಂತಕರನ್ನು ಜೈಲಿಗೆ ತಳ್ಳಿ ಎರಡು ವರ್ಷಗಳಾದವು. ಇವರ ಎಂಭತ್ನಾಲ್ಕು ವರ್ಷದ ಪೈಕಿ ಫಾದರ್ ಸ್ಟ್ಯಾನ್ ಸ್ವಾಮಿ ಕೊನೆಯುಸಿರೆಳೆದರು. ಈ ನಡುವೆ ‘ಬ್ರಿಟಿಷ್ ಕಾಲದ ಈ ದೇಶದ್ರೋಹ ಕಾಯ್ದೆಯ ಅಗತ್ಯವೇನಿದೆ’. ಅದನ್ನೇಕೆ ಈವರೆಗೆ ಇಟ್ಟುಕೊಂಡಿದ್ದೀರಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ವಿಷಯದ ಬಗ್ಗೆ ಮಾತಾಡಬೇಕಾದ ನಾವು ಅಪ್ರಸ್ತುತ ವಾದ ಜನಸಂಖ್ಯಾ ನಿಯಂತ್ರಣ, ಬುರ್ಖಾ ನಿಷೇಧದ ಬಗ್ಗೆ ತೌಡು ಕುಟ್ಟುತ್ತಿದ್ದೇವೆ. ಯಾರು ಯಾವ ಬಟ್ಟೆ ಧರಿಸಬೇಕು, ಯಾವ ಆಹಾರ ಉಣ್ಣಬೇಕು ಎಂಬುದು ಅವರವರಿಗೆ ಬಿಟ್ಟಿದ್ದು. ಬುರ್ಖಾ ಧರಿಸುವುದನ್ನು ತಿರಸ್ಕರಿಸುವ ಅಥವಾ ಒಪ್ಪಿಕೊಳ್ಳುವ ಆಯ್ಕೆ ಅದನ್ನು ಧರಿಸುವ ಮಹಿಳೆಯರಿಗೆ ಬಿಟ್ಟ ವಿಷಯ.

ಇತರ ಧರ್ಮಗಳ ಬಗ್ಗೆ ಮಾತಾಡುವ ಮುನ್ನ ನಮ್ಮ ನಮ್ಮ ಧರ್ಮಗಳಲ್ಲಿ ಇರುವ ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆಗಳಂಥ ವಿಷಯಗಳ ಯೋಚಿಸಬೇಕು. ಈ ಬುರ್ಖಾ ವಿವಾದ ನಡೆದಿರುವಾಗಲೇ ಚಿಕ್ಕ ಮಗಳೂರಿನಲ್ಲಿ ‘ಶಿಕ್ಷಕಿಯರು ಚೂಡಿದಾರ ಧರಿಸಿ ಶಾಲೆಗೆ ಬರಕೂಡದು, ಸೀರೆಯನ್ನೇ ಧರಿಸಿಕೊಂಡು ಬರಬೇಕು’ ಎಂದು ಅಲ್ಲಿನ ಶಿಕ್ಷಕರ ಸಂಘ ಕಟ್ಟುಪಾಡು ಹೇರಿರುವ ವಿಷಯ ಬೆಳಕಿಗೆ ಬಂದಿದೆ.

ಇಂಥ ವಿಷಯಗಳ ಬಗ್ಗೆ ಹೀಗೇ ಚರ್ಚಿಸುತ್ತ ಹೊರಟರೆ ಕೊವಿಡ್‌ಗಿಂಥ ಮೊದಲೇ ಹದಗೆಟ್ಟಿದ್ದ ದೇಶದ ಆರ್ಥಿಕತೆ ಈಗ ಹಳ್ಳ ಹಿಡಿದಿರುವ ಬಗ್ಗೆ ಮಾತಾಡುವವರು ಯಾರು? ದೇಶದಲ್ಲಿ ಈಗ 65 ಕೋಟಿ ನಿರುದ್ಯೋಗಿಗಳಿದ್ದಾರೆ. ಇದು ನ್ಯಾಷನಲ್ ಸರ್ವೇ ಸ್ಯಾಂಪಲ್ ಪ್ರಕಾರ, ಕಳೆದ 45 ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ ಎಂದು ದಾಖಲಾಗಿದೆ.ಸರಕಾರದ ವಿವಿಧ ಇಲಾಖೆಗಳಲ್ಲಿ 52 ಲಕ್ಷ ಹುದ್ದೆಗಳನ್ನು ಭರ್ತಿ ಮಾಡದೇ ಖಾಲಿ ಉಳಿಸಲಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಬಳಿ ಇಂಥ ಪ್ರಶ್ನೆ ಗಳಿಗೆ ಉತ್ತರ ಇಲ್ಲ. ಈ ಪ್ರಶ್ನೆಗಳನ್ನು ಜನ ಕೇಳಬಾರದೆಂದು ದಾರಿ ತಪ್ಪಿಸಲು ಮಂದಿರ, ಮಸೀದಿ, ಮತಾಂತರ, ಇಂಥ ವಿಷಯಗಳನ್ನು ಚರ್ಚೆಗೆ ಬಿಡಲಾಗುತ್ತದೆ. ನಾವು ಅಂದರೆ ಪ್ರಗತಿಪರರು ಅವರ ಅರ್ಥಹೀನ ಭಾವನಾತ್ಮಕ ಪ್ರಶ್ನೆಗಳಿಗೆ ಉತ್ತರ ಕೊಡುತ್ತ ಜನಸಾಮಾನ್ಯರನ್ನು ಬಾಧಿಸುತ್ತಿರುವ, ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡುವುದನ್ನು ಮರತೇ ಬಿಡುತ್ತೇವೆ.

ಕಳೆದ ವರ್ಷದ ಕೋವಿಡ್ ಮೊದಲ ಅಲೆಯ ಕಾಲದಲ್ಲಿ ಜನಸಾಮಾನ್ಯರು ಕೈಯಲ್ಲಿ ಇರುವ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದರೆ ಅಂಬಾನಿ, ಅದಾನಿಯಂತ ಕೆಲವೇ ಕೆಲವು ಬಂಡವಾಳಗಾರರ ಸಂಪತ್ತು ಲಕ್ಷಾಂತರ ಕೋಟಿ ರೂಪಾಯಿ ಹೆಚ್ಚಾಯಿತು. ಇಡೀ ದೇಶವೇ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವಾಗ ಇವರ ತಿಜೋರಿ ಹೇಗೆ ಭರ್ತಿಯಾಯಿತು ಎಂಬ ಬಗ್ಗೆ ನಾವು ಪ್ರಶ್ನಿಸಬಾರದು, ಮಾತಾಡಬಾರದೆಂದು ನಾವು ಮಾತಾಡುವ ವಿಷಯಗಳನ್ನೇ ಅವರು ಬದಲಿಸಿ ಕೆಲಸಕ್ಕೆ ಬಾರದ ಬೇರೆ ಮಾತುಗಳನ್ನು ಆಡುವಂತೆ ಮಾಡಿದ್ದಾರೆ.ಇನ್ನೊಬ್ಬರ ಊಟದ ತಟ್ಟೆಯಲ್ಲಿ ಏನಿದೆ? ಇನ್ನೊಬ್ಬರು ಯಾವ ಬಟ್ಟೆ ಧರಿಸುತ್ತಾರೆ. ಹೀಗೆ ಏನೇನೋ ಮಾತಾಡಲು ಹಚ್ಚಿ ನಿಜವಾದ ಮಾತುಗಳು ಹೊರಬಾರದಂತೆ ಮಾಡಿದ್ದಾರೆ.

ತಿನ್ನುವ ಆಹಾರ, ಧರಿಸುವ ಬಟ್ಟೆ ಅವರವರ ವೈಯಕ್ತಿಕ ಆಯ್ಕೆ. ಅದರ ಬಗ್ಗೆ ಇನ್ನೊಬ್ಬರು ತೀರ್ಮಾನಿಸುವುದು ಸಭ್ಯತೆಯೆನಿಸಿಕೊಳ್ಳುವುದಿಲ್ಲ. ಹಾಗೆಂದು ಮಹಿಳೆಯರ ಸ್ವಾತಂತ್ರಕ್ಕೆ ಧಕ್ಕೆಯಾಗಲು ಎಂದಿಗೂ ಅವಕಾಶ ಕೊಡಬಾರದು. ಭೂತಕಾಲದ ನಂಬಿಕೆಗಳು ವರ್ತಮಾನ ಕಾಲದ ಬದುಕನ್ನು ನಿರ್ಧರಿಸಬಾರದು. ಇನ್ನೊಬ್ಬರಿಗೆ ನಮ್ಮಿಂದ ತೊಂದರೆಯಾಗದಂತೆ ಪರಸ್ಪರ ಗೌರವಿಸಿಕೊಂಡು ಬದುಕುವುದನ್ನು ಬೇರೆ ಯಾರೂ ಹೇಳಿಕೊಡಬೇಕಾಗಿಲ್ಲ.ಅದನ್ನು ನಾವೇ ನಮ್ಮ ವಿವೇಚನೆಯಿಂದ ಕಲಿತುಕೊಳ್ಳಬೇಕು.

ಯಾವುದೇ ಸಮುದಾಯದ ಮಹಿಳೆಯರ ಪರಿಸ್ಥಿತಿ ಹಿಂದಿಗಿಂತ ಈಗ ಭಿನ್ನವಾಗಿದೆ. ಅನೇಕ ಮಹಿಳೆಯರು ವಿದ್ಯಾವಂತರಾಗುತ್ತಿದ್ದಾರೆ. ವೈದ್ಯೆ, ದಾದಿ, ಶಿಕ್ಷಕಿ, ಉಪನ್ಯಾಸಕಿ, ವಕೀಲರಾಗಿ, ನ್ಯಾಯಾಧೀಶರಾಗಿ, ಅಂಗನವಾಡಿ ಕಾರ್ಯಕರ್ತೆಯರಾಗಿ, ವಿಜ್ಞಾನಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ಸಾಮರ್ಥ್ಯವನ್ನು ಪಡೆದಿದ್ದಾರೆ. ಅದೇ ರೀತಿ ಕಡು ಬಡತನದಲ್ಲಿ ದುಡಿಮೆಯಿಂದ ಕುಟುಂಬವನ್ನು ಪೊರೆಯುವ ತಾಯಂದಿರ ಸಂಖ್ಯೆ ಸಾಕಷ್ಟಿದೆ.

ನಾವೀಗ ಮಾತಾಡಬೇಕಾಗಿರುವುದು ಧರಿಸುವ ಉಡುಪಿನ ಬಗ್ಗೆ, ಮಾಡುವ ಊಟದ ಮೆನುವಿನ ಬಗ್ಗೆ ಅಲ್ಲ. ಮಾತಾಡಬೇಕಾಗಿರುವುದು ಈ ದೇಶದ ನೂರಾ ಮೂವತ್ತೈದು ಕೋಟಿ ಜನರಿಗೆ ಸೇರಬೇಕಾದ ಸಂಪತ್ತು ಬೆರಳೆಣಿಕೆಯಷ್ಟು ಕಾರ್ಪೊರೇಟ್ ಖದೀಮರ ಒಡೆತನದಲ್ಲಿ ಏಕಿದೆ? ಲಕ್ಷಾಂತರ ಜನ ಉಪವಾಸದಿಂದ ನರಳುತ್ತಿರುವಾಗ ಕೆಲವೇ ಕೆಲವು ಉಳ್ಳವರು ಯಾಕೆ ಮಜಾ ಮಾಡುತ್ತಿದ್ದಾರೆ? ಮುಂಬೈ, ಮಂಗಳೂರು ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳನ್ನು ಅದಾನಿ ಉಡಿಗೆ ಹಾಕಿದ್ದೇಕೆ? ಕಾರ್ಪೊರೇಟ್ ಸನ್ಯಾಸಿ ಬಾಬಾ ರಾಮ್‌ದೇವ್‌ರ ಪತಂಜಲಿ ಉದ್ಯಮದ ಮೇಲೆ ಮುಂದಿನ ಐದು ವರ್ಷ ತೆರಿಗೆ ಮನ್ನಾ ಮಾಡಿದ್ದೇಕೆ? ನಮಗೆ ಪ್ರಾಣವಾಯು ನೀಡುವ ಅಮೂಲ್ಯ ಅರಣ್ಯಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಧಾರೆ ಎರೆದು ಕೊಡುತ್ತಿರುವುದೇಕೆ? ಸ್ವಾತಂತ್ರ ಬಂದು ಏಳು ದಶಕಗಳು ಗತಿಸಿದರೂ ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆ, ಅನಕ್ಷರತೆ ಇನ್ನೂ ನಿವಾರಣೆಯಾಗಿಲ್ಲವೇಕೆ? ನಮ್ಮ ಅನೇಕ ಸೋದರಿಯರು ಇಂದಿಗೂ ಮೈ ಮಾರಾಟಕ್ಕೆ ಇಟ್ಟು ಯಾತನೆಯ ಬದುಕನ್ನು ಬದುಕುತ್ತಿರುವುದೇಕೆ? ಇಂಥ ಸುಡು ಸುಡುವ ವಿಷಯಗಳ ಬಗ್ಗೆ ನಾವು ಯೋಚಿಸಬೇಕಾಗಿದೆ. ಬರೆಯಬೇಕಾಗಿದೆ, ಹೋರಾಡಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News