2022 ಆಗಸ್ಟ್ ನಿಂದ 10 ನೂತನ ವಂದೇ ಭಾರತ್ ರೈಲುಗಳು ಆರಂಭ
ಹೊಸದಿಲ್ಲಿ,ಜು.19: ಸ್ವದೇಶಿ ಸೆಮಿಸ್ಪೀಡ್ ರೈಲು ವ್ಯವಸ್ಥೆ ವಂದೇ ಭಾರತ್ಗೆ ಬೃಹತ್ ಉತ್ತೇಜನ ನೀಡಲು ಭಾರತೀಯ ರೈಲ್ವೆಯು ಸಜ್ಜಾಗಿದೆ. 75ನೇ ವರ್ಷದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ 2022,ಆಗಸ್ಟ್ ನಲ್ಲಿ ಸುಮಾರು 40 ನಗರಗಳನ್ನು ಸಂಪರ್ಕಿಸುವ ಕನಿಷ್ಠ 10 ನೂತನ ವಂದೇ ಭಾರತ್ ರೈಲುಗಳನ್ನು ಅದು ಆರಂಭಿಸಲಿದೆ. ನೂತನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಅಧಿಕಾರ ಸ್ವೀಕರಿಸಿದ ನಂತರ ಇಟ್ಟ ಮೊದಲ ಹೆಜ್ಜೆಗಳಲ್ಲಿ ವಂದೇ ಭಾರತ್ ಯೋಜನೆಯ ಪುನರ್ಪರಿಶೀಲನೆಯೂ ಒಂದಾಗಿದೆ ಎನ್ನಲಾಗಿದೆ.
ಹೈದರಾಬಾದ್ ನ ಮೇಧಾ ಇಂಜಿನಿಯರಿಂಗ್ ಸಂಸ್ಥೆಯು 44 ವಂದೇ ಭಾರತ್ ರೈಲುಗಳಿಗೆ ವಿದ್ಯುತ್ ವ್ಯವಸ್ಥೆಗಳನ್ನು ಪೂರೈಸುವ ಗುತ್ತಿಗೆಯನ್ನು ಪಡೆದುಕೊಂಡಿದ್ದು,ತಯಾರಿಕೆ ಯೋಜನೆಯನ್ನು ತ್ವರಿತಗೊಳಿಸುವಂತೆ ಮತ್ತು ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಲ್ಲ ಟ್ರಯಲ್ಗಳನ್ನು ಪೂರೈಸಿ ಕನಿಷ್ಠ ಎರಡು ಮೂಲಮಾದರಿಗಳನ್ನು ಪೂರೈಸುವಂತೆ ರೈಲ್ವೆ ಇಲಾಖೆಯು ಅದಕ್ಕೆ ಸೂಚಿಸಿದೆ.
ಮುಂದಿನ ಲಾಟ್ ನ ಉತ್ಪಾದನೆಗೆ ಹಸಿರು ನಿಶಾನೆಯನ್ನು ಪಡೆಯುವ ಮುನ್ನ ಎಲ್ಲ ಟ್ರಯಲ್ಗಳು ಮತ್ತು ಪರೀಕ್ಷೆಗಳೊಂದಿಗೆ ವಂದೇ ಭಾರತ್ನ ಮೂಲಮಾದರಿಯು ಪ್ರಯಾಣಿಕರೊಂದಿಗೆ ಒಂದು ಲಕ್ಷ ಕಿ.ಮೀ.ಗಳ ವಾಣಿಜ್ಯಿಕ ಸಂಚಾರವನ್ನು ಪೂರ್ಣಗೊಳಿಸಲು ಸಮರ್ಥವಾಗಿರಬೇಕು ಎಂದು ರೈಲ್ವೆ ಸಚಿವಾಲಯವು ಗುತ್ತಿಗೆ ಒಪ್ಪಂದದಲ್ಲಿ ಉಲ್ಲೇಖಿಸಿದೆ. ಹೀಗಾಗಿ ವಂದೇಭಾರತ್ ರೈಲುಗಳು ವಾಣಿಜ್ಯಿಕವಾಗಿ ಹಳಿಗಿಳಿಯಲು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ರೈಲುಗಳ ಮೊದಲ ಸೆಟ್ನ್ನು 2022 ಡಿಸೆಂಬರ್ ಅಥವಾ 2023ರ ಆರಂಭದಲ್ಲಿ ಕಾರ್ಯಾಚರಣೆಗಿಳಿಸಲು ಯೋಜನೆಯು ಉದ್ದೇಶಿಸಿತ್ತು.
16 ಬೋಗಿಗಳ ವಂದೇ ಭಾರತ್ ದೇಶದ ಸ್ವಂತ ನಿರ್ಮಾಣದ ಸೆಮಿ ಹೈಸ್ಪೀಡ್ ರೈಲು ಆಗಿದೆ. ಸಂಪೂರ್ಣವಾಗಿ ವಿದ್ಯುತ್ಚಾಲಿತವಾಗಿರುವ ಈ ರೈಲುಗಳಿಗೆ ಇಂಜಿನ್ ಅಗತ್ಯವಿಲ್ಲ.