ಪೆಗಾಸಸ್ ಸ್ಪೈವೇರ್ ಬಳಸಿ ರಾಜಕಾರಣಿಗಳು, ಪತ್ರಕರ್ತರು ಇತರರ ಫೋನ್ ಗಳಿಗೆ ದಾಳಿ

Update: 2021-07-19 16:31 GMT
Photo: Thewire

ಹೊಸದಿಲ್ಲಿ,ಜು.19: ಇಸ್ರೇಲಿನ ಕಣ್ಗಾವಲು ತಂತ್ರಜ್ಞಾನ ಸಂಸ್ಥೆ ಎನ್ಎಸ್ಒ ಗ್ರೂಪ್‌ ನ ಹಲವಾರು ಸರಕಾರಿ ಗ್ರಾಹಕರು ಪಟ್ಟಿ ಮಾಡಿದ್ದರೆನ್ನಲಾಗಿರುವ ದೂರವಾಣಿ ಸಂಖ್ಯೆಗಳ ದತ್ತಾಂಶ ಸಂಚಯದ ಸೋರಿಕೆಯು ಸಚಿವರು, ಪ್ರತಿಪಕ್ಷ ನಾಯಕರು, ಪತ್ರಕರ್ತರು, ಕಾನೂನು ತಜ್ಞರು, ಉದ್ಯಮಿಗಳು, ಸರಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಇತರರು ಸೇರಿದಂತೆ 300ಕ್ಕೂ ಅಧಿಕ ದೃಢೀಕೃತ ಭಾರತೀಯ ಮೊಬೈಲ್ ಫೋನ್ ನಂಬರ್ ಗಳನ್ನು ಒಳಗೊಂಡಿದೆ ಎಂದು ಸುದ್ದಿ ಜಾಲತಾಣ The Wire  ಮತ್ತು 16 ಮಾಧ್ಯಮ ಪಾಲುದಾರರು ಕೈಗೊಂಡಿದ್ದ ತನಿಖೆಯು ಬಹಿರಂಗಗೊಳಿಸಿದೆ.

ಈ ದೂರವಾಣಿ ಸಂಖ್ಯೆಗಳನ್ನು ಹೊಂದಿರುವ ಫೋನುಗಳ ಪೈಕಿ ಕೆಲವನ್ನು ವಿಧಿವಿಜ್ಞಾನ ಪರೀಕ್ಷೆಗೊಳಪಡಿಸಿದಾಗ 37 ದೂರವಾಣಿಗಳನ್ನು ಪೆಗಾಸಸ್ ಸ್ಪೈವೇರ್ ಗುರಿಯಾಗಿಸಿಕೊಂಡಿತ್ತು ಎನ್ನುವುದನ್ನು ಸೂಚಿಸುವ ಸ್ಪಷ್ಟ ಸಂಕೇತಗಳು ಲಭಿಸಿದ್ದು,ಈ ಪೈಕಿ 10 ಭಾರತೀಯರಿಗೆ ಸೇರಿದ ಫೋನ್ ನಂಬರ್ ಗಳಾಗಿವೆ. ಫೋನ್ ಅನ್ನು ಈ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸದೆ ಅದು ಸ್ಪೈ ವೇರ್ ದಾಳಿ ಪ್ರಯತ್ನಕ್ಕೆ ಗುರಿಯಾಗಿತ್ತೇ ಅಥವಾ ಅದರ ಮೇಲೆ ಯಶಸ್ವಿ ದಾಳಿ ನಡೆದಿತ್ತೇ ಎನ್ನುವುದನ್ನು ನಿರ್ಣಾಯಕವಾಗಿ ಹೇಳಲು ಸಾಧ್ಯವಾಗುವುದಿಲ್ಲ ಎಂದು ತನಿಖಾ ವರದಿಯು ತಿಳಿಸಿದೆ. 

ತಾನು ಪರಿಶೀಲಿಸಿರುವ 'ಸರಕಾರಗಳು' ಮಾತ್ರ ತನ್ನ ಗ್ರಾಹಕರಾಗಿದ್ದಾರೆ ಎಂದು ವಿಶ್ವಾದ್ಯಂತ ಪೆಗಾಸಸ್ ಸ್ಪೈ ವೇರ್ ನ್ನು ಮಾರಾಟ ಮಾಡುವ ಎನ್ಎಸ್ಒ ಗ್ರೂಪ್ ಹೇಳಿಕೊಂಡಿದೆ ಮತ್ತು ಇಂತಹ ಸರಕಾರಗಳ ಸಂಖ್ಯೆ 36 ಎಂದು ನಂಬಲಾಗಿದೆ. ತನ್ನ ಗ್ರಾಹಕರನ್ನು ಹೆಸರಿಸಲು ಅದು ನಿರಾಕರಿಸಿದೆಯಾದರೂ ಅದರ ಈ ಹೇಳಿಕೆಯು The Wire  ಮತ್ತು ಅದರ ಪಾಲುದಾರ ಮಾಧ್ಯಮಗಳು ದೃಢಪಡಿಸಿರುವ ದಾಳಿಗಳಲ್ಲಿ ಭಾರತ ಅಥವಾ ವಿದೇಶದಲ್ಲಿಯ ಯಾವುದೇ ಖಾಸಗಿ ಸಂಸ್ಥೆಯ ಕೈವಾಡದ ಸಾಧ್ಯತೆಯನ್ನು ತಳ್ಳಿಹಾಕಿದೆ.

ಸೋರಿಕೆಯಾದ ದತ್ತಾಂಶ ಸಂಚಯವು ಪ್ಯಾರಿಸ್‌ನ ಲಾಭರಹಿತ ಮಾಧ್ಯಮ ‘ಫಾರ್ಬಿಡನ್ ಸ್ಟೋರೀಸ್ ’ಮತ್ತು ಆ್ಯಮ್ನೆಸ್ಟಿ ಇಂಟರ್ ನ್ಯಾಶನಲ್ ಗೆ ಲಭ್ಯವಾಗಿದ್ದು, ‘ಪೆಗಾಸಸ್ ಪ್ರಾಜೆಕ್ಟ್ ’ ಹೆಸರಿನ ಸಹಭಾಗಿತ್ವದ ತನಿಖೆಯ ಅಂಗವಾಗಿ ದಿ ವೈರ್, ಲೆ ಮೊಂಡೆ, ದಿ ಗಾರ್ಡಿಯನ್, ವಾಷಿಂಗ್ಟನ್ ಪೋಸ್ಟ್, ಡೀ ಝಿಟ್ ಮತ್ತು ಇತರ 10 ಮೆಕ್ಸಿಕನ್,ಅರಬ್ ಮತ್ತು ಯುರೋಪಿಯನ್ ಮಾಧ್ಯಮ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿತ್ತು.

 ಸೋರಿಕೆಯಾಗಿರುವ ದತ್ತ ಸಂಚಯವು ಎನ್ಎಸ್ಒ ಗ್ರಾಹಕರು ತಮ್ಮ ಗುರಿಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದ ದೂರವಾಣಿಗಳ ದಾಖಲೆಗಳನ್ನು ಒಳಗೊಂಡಿದೆ ಎಂಬ ‘ಫಾರ್ಬಿಡನ್ ಸ್ಟೋರೀಸ್ ’ನ ಹೇಳಿಕೆಯನ್ನು ಕಂಪನಿಯು ವಿಧ್ಯುಕ್ತವಾಗಿ ನಿರಾಕರಿಸಿದೆಯಾದರೂ ತನ್ನ ಗ್ರಾಹಕರು ಇತರ ಉದ್ದೇಶಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಬಳಸಿಕೊಂಡಿರಬಹುದು ಎಂದು ಒಪ್ಪಿಕೊಂಡಿದೆ. ಪಟ್ಟಿಯಲ್ಲಿ ಗುರುತಿಸಲಾಗಿರುವ ಹೆಚ್ಚಿನ ದೂರವಾಣಿ ಸಂಖ್ಯೆಗಳು ಭಾರತ, ಅಜರ್ಬೈಜಾನ್, ಬೆಹರಿನ್, ಹಂಗರಿ, ಕಝಕಸ್ತಾನ್, ಮೆಕ್ಸಿಕೊ, ಮೊರೊಕ್ಕೊ,ರ್ವಾಂಡಾ,ಸೌದಿ ಅರೇಬಿಯಾ ಮತ್ತು ಯುಎಇಗಳಿಗೆ ಸೇರಿದ್ದಾಗಿವೆ. 

ಈ ಪ್ರತಿಯೊಂದೂ ದೇಶವನ್ನೂ ಪೆಗಾಸಸ್ ಸ್ಪೈವೇರ್ ಕೇಂದ್ರೀಕರಿಸಿದೆ ಎಂದು ಟೊರೊಂಟೊ ವಿವಿಯ ಡಿಜಿಟಲ್ ಕಣ್ಗಾವಲು ಸಂಶೋಧನಾ ಸಂಸ್ಥೆ ಸಿಟಿಜನ್ ಲ್ಯಾಬ್ ತಜ್ಞರು ಗುರುತಿಸಿದ್ದಾರೆ. ಈ ದೂರವಾಣಿ ಸಂಖ್ಯೆಗಳು ಯಾರಿಗೆ ಸೇರಿವೆ ಎನ್ನುವುದನ್ನು ಪತ್ತ ಹಚ್ಚಿ ದೃಢೀಕರಿಸಿಕೊಳ್ಳಲು ಮತ್ತು ದತ್ತಾಂಶ ಸಂಚಯದ ಅವಧಿಯಲ್ಲಿ ಅವರು ಬಳಸುತ್ತಿದ್ದ ಫೋನುಗಳ ವಿಧಿವಿಜ್ಞಾನ ಪರೀಕ್ಷೆಯನ್ನು ನಡೆಸಲು ‘ಫಾರ್ಬಿಡನ್ ಸ್ಟೋರೀಸ್ ’ 80 ಪತ್ರಕರ್ತರನ್ನು ಸಂಯೋಜಿಸಿತ್ತು ಮತ್ತು ಇದಕ್ಕೆ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಕೈಜೋಡಿಸಿತ್ತು. 

ಭಾರತದ ಮಟ್ಟಿಗೆ ಈ ಅವಧಿ 2017ರ ಮಧ್ಯದಿಂದ 2019ರ ಮಧ್ಯದವರೆಗೆ ಆಗಿದೆ. ಭಾರತೀಯ ಟೆಲಿಗ್ರಾಫ್ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯು ಕಾನೂನುಬದ್ಧ ಪ್ರತಿಬಂಧಕ್ಕೆ ಕಡ್ಡಾಯವಾಗಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಸೂಚಿಸಿದೆ. ವಿಭಿನ್ನ ದೇಶಗಳು ವಿಭಿನ್ನ ಕಾನೂನುಗಳನ್ನು ಹೊಂದಿವೆ,ಆದರೆ ಭಾರತದಲ್ಲಿ ಯಾವುದೇ ಅಧಿಕೃತ ಅಥವಾ ಖಾಸಗಿ ವ್ಯಕ್ತಿ ಕಣ್ಗಾವಲು ಸ್ಪೈ ವೇರ್ ನ್ನು ನುಸುಳಿಸಲು ಸಾಧನಗಳನ್ನು ಹ್ಯಾಕ್ ಮಾಡುವುದು ಐಟಿ ಕಾಯ್ದೆಯಡಿ ಅಪರಾಧವಾಗಿದೆ. 

ಯಾವುದೇ ವ್ಯಕ್ತಿಯ ಸ್ಮಾರ್ಟ್ ಫೋನ್ ಅನ್ನು ಪೆಗಾಸಸ್ ನಂತಹ ಸ್ಪೈ ವೇರ್ ನ ಮೂಲಕ ಕಣ್ಗಾವಲಿಗೊಳಪಡಿಸಲು ಅದನ್ನು ಹ್ಯಾಕ್ ಮಾಡುವುದು ಅಗತ್ಯವಾಗುತ್ತದೆ. ದತ್ತ ಸಂಚಯದಲ್ಲಿರುವ ಸಂಖ್ಯೆಗಳಲ್ಲಿ ಭಾರತದ 40ಕ್ಕೂ ಅಧಿಕ ಪತ್ರಕರ್ತರು, ಓರ್ವ ಸಾಂವಿಧಾನಿಕ ಅಧಿಕಾರಿ, ನರೇಂದ್ರ ಮೋದಿ ಸರಕಾರದ ಇಬ್ಬರು ಸಚಿವರು, ಭದ್ರತಾ ಸಂಸ್ಥೆಗಳ ಹಾಲಿ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಮತ್ತು ಹಲವಾರು ಉದ್ಯಮಿಗಳ ದೂರವಾಣಿ ಸಂಖ್ಯೆಗಳು ಸೇರಿವೆ. 

ದತ್ತ ಸಂಚಯದಲ್ಲಿ ಈ ಸಂಖ್ಯೆಗಳಿರುವುದು ಅದು ಕಣ್ಗಾವಲಿಗೆ ಒಳಪಟ್ಟಿದ್ದ ಸಾಧ್ಯತೆಯನ್ನು ಸೂಚಿಸುತ್ತದೆ. ಆದರೆ ವಿಧಿವಿಜ್ಞಾನ ಪರೀಕ್ಷೆಯಿಂದ ಮಾತ್ರವೇ ಇದನ್ನು ಖಚಿತಪಡಿಸಬೇಕಿದೆ. ಸಾಧನವು ಐಫೋನ್ ಆಗಿದ್ದರೆ ಈ ಪರೀಕ್ಷೆಯು ಹೆಚ್ಚು ಸುಲಭವಾಗುತ್ತದೆ. 

ಖಾಸಗಿ ಹಕ್ಕುಗಳಿಗೆ ಬದ್ಧ: ಸರಕಾರ

ಪೆಗಾಸಸ್ ಯೋಜನೆಯ ಪಾಲುದಾರರು ಈ ವಾರದ ಪ್ರಧಾನಿ ಕಚೇರಿಗೆ ಸಲ್ಲಿಸಿದ್ದ ಪ್ರಶ್ನೆಗಳಿಗೆ ಉತ್ತರಿಸಿರುವ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು,ಭಾರತವು ತನ್ನ ಎಲ್ಲ ಪ್ರಜೆಗಳ ಮೂಲಭೂತ ಹಕ್ಕು ಆಗಿರುವ ಖಾಸಗಿತನ ಹಕ್ಕಿನ ಸುರಕ್ಷತೆಗೆ ಬದ್ಧವಾಗಿದೆ ಮತ್ತು ನಿರ್ದಿಷ್ಟ ವ್ಯಕ್ತಿಗಳ ಮೆಲೆ ಸರಕಾರದ ಕಣ್ಗಾವಲಿಗೆ ಸಂಬಂಧಿಸಿದ ಆರೋಪಗಳಿಗೆ ಯಾವುದೇ ಬಲವಾದ ಆಧಾರವಿಲ್ಲ ಎಂದು ಹೇಳಿದೆ.

ಸರಕಾರದಿಂದ ಪೆಗಾಸಸ್ ನ ಬಳಕೆಯನ್ನು ಸಚಿವಾಲಯವು ನಿರ್ದಿಷ್ಟವಾಗಿ ನಿರಾಕರಿಸಿಲ್ಲ. ಪ್ರತಿಬಂಧ, ನಿಗಾ ಮತ್ತು ಡಿಕ್ರಿಪ್ಶನ್ನ ಪ್ರತಿ ಪ್ರಕರಣವು ಸಕ್ಷಮ ಪ್ರಾಧಿಕಾರಿಯ ಅನುಮತಿಯನ್ನು ಪಡೆದಿರುತ್ತದೆ. ಹೀಗಾಗಿ ಇಂತಹ ಪ್ರಕ್ರಿಯೆಗಳು ಕಾನೂನಿಗೆ ಅನುಗುಣವಾಗಿಯೇ ನಡೆಯುತ್ತವೆ ಎಂದು ಅದು ತಿಳಿಸಿದೆ.

5,000 ಅಲ್ಲ, 50,000 ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳಲು ಪೆಗಾಸಸ್ ಬಳಕೆಯಾಗಿರಬಹುದು ಎಂಬ ಪ್ರತಿಪಾದನೆಯನ್ನು ನಿರಾಕರಿಸಿರುವ ಎನ್ಎಸ್ಒ, ತನ್ನ ಎಲ್ಲ ಸರಕಾರಿ ಗ್ರಾಹಕರನ್ನು ಪರಿಗಣನೆಗೆ ತೆಗೆದುಕೊಂಡರೆ ಕಣ್ಗಾವಲು ಗುರಿಗಳ ವಾರ್ಷಿಕ ಪ್ರಮಾಣ 5,000 ಮೀರುವುದಿಲ್ಲ ಎಂದು ಹೇಳಿಕೊಂಡಿದೆ.

ಕೃಪೆ: thewire.in

Similar News