ಅಧಿಕಾರದಲ್ಲಿರುವ ಬಿಜೆಪಿಯನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ: ನರೇಂದ್ರ ಮೋದಿ

Update: 2021-07-20 11:00 GMT

ಹೊಸದಿಲ್ಲಿ:  ಅಸ್ಸಾಂ, ಬಂಗಾಳ ಮತ್ತು ಕೇರಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರವೂ ಕೋಮಾದಿಂದ ಕಾಂಗ್ರೆಸ್  ಹೊರಬಂದಿಲ್ಲ ಹಾಗೂ ಅಧಿಕಾರದಲ್ಲಿರುವ ಬಿಜೆಪಿಯನ್ನು ಜೀರ್ಣಿಸಿಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಸರಕಾರದ ಕೋವಿಡ್ ನಿರ್ವಹಣೆಯ ವಿರುದ್ದ ವಿಪಕ್ಷಗಳು ನಡೆಸುತ್ತಿರುವ ವಾಗ್ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದರು.

ಬಿಜೆಪಿ ಸಂಸದರ ಸಾಪ್ತಾಹಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಕ್ಷದ ನಡವಳಿಕೆಯನ್ನು "ಬೇಜವಾಬ್ದಾರಿಯುತ ಮತ್ತು ದುರದೃಷ್ಟಕರ" ಎಂದು ಕರೆದರು ಹಾಗೂ  ಸರಕಾರದ ಕೆಲಸದ ಬಗ್ಗೆ ಸತ್ಯವನ್ನು ಜನರ ಬಳಿ ಕೊಂಡೊಯ್ಯುವಂತೆ ತಮ್ಮ ಪಕ್ಷವನ್ನು ಒತ್ತಾಯಿಸಿದರು

 ಕಾಂಗ್ರೆಸ್ಸಿನ "ಹಕ್ಕುದಾರನೆಂಬ ಪ್ರಜ್ಞೆ" ಆ ಪಕ್ಷವು ವಿರೋಧ ಪಕ್ಷವಾಗಿ ಕೆಲಸ ಮಾಡುವುದನ್ನು ತಡೆಯುತ್ತಿದೆ ಎಂದು ಪ್ರಧಾನಿ ಕಳವಳ ವ್ಯಕ್ತಪಡಿಸಿದರು ಎಂದು ಸಭೆಯಲ್ಲಿ ಭಾಗವಹಿಸಿರುವ ನಾಯಕರೊಬ್ಬರು ಹೇಳಿದ್ದಾರೆ.

ವಾಸ್ತವದಲ್ಲಿ ಲಸಿಕೆಗಳ ಕೊರತೆಯಿಲ್ಲದಿದ್ದಾಗ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ದೇಶದಲ್ಲಿ ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, "ತಾನು ಅಧಿಕಾರದ ಹಕ್ಕುದಾರನೆಂದು  ಕಾಂಗ್ರೆಸ್ ಭಾವಿಸಿದೆ. ಅದು ತನ್ನ ಕುರಿತ ಜನಾದೇಶದ ಬಗ್ಗೆ ಹೆದರುವುದಿಲ್ಲ. ಅದು ಎಲ್ಲೆಡೆ ಕ್ಷೀಣಿಸುತ್ತಿದೆ.  ಆದರೆ ಅದು ಈಗಲೂ ನಮ್ಮ ಕುರಿತಾಗಿ ಹೆಚ್ಚು ಕಾಳಜಿಯನ್ನು ಹೊಂದಿದೆ" ಎಂದು  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News