ಬಡವರ ಮನೆಬಾಡಿಗೆ ಪಾವತಿ : ಕೇಜ್ರಿವಾಲ್ ಭರವಸೆಯ ಬಗ್ಗೆ ನಿರ್ಧರಿಸುವಂತೆ ದಿಲ್ಲಿ ಸರಕಾರಕ್ಕೆ ಹೈಕೋರ್ಟ್ ನಿರ್ದೇಶ

Update: 2021-07-22 16:59 GMT

ಹೊಸದಿಲ್ಲಿ,ಜು.22: ಮುಖ್ಯಮಂತ್ರಿಯೋರ್ವರ ಘೋಷಣೆಯು ಸ್ಪಷ್ಟವಾಗಿ ಜಾರಿಗೊಳಿಸಬಹುದಾದ ಭರವಸೆಯಾಗಿರುತ್ತದೆ ಮತ್ತು ಇದರ ಜಾರಿಯ ಬಗ್ಗೆ ಸರಕಾರವು ಪರಿಗಣಿಸಬೇಕಾಗುತ್ತದೆ ಎಂದು ಗುರುವಾರ ಎತ್ತಿ ಹಿಡಿದ ದಿಲ್ಲಿ ಉಚ್ಚ ನ್ಯಾಯಾಲಯವು, ಬಾಡಿಗೆ ಮನೆಯಲ್ಲಿ ವಾಸವಾಗಿರುವ ಯಾವುದೇ ವ್ಯಕ್ತಿಗೆ ಬಾಡಿಗೆಯನ್ನು ನೀಡಲು ಅಸಾಧ್ಯವಾದರೆ ಅದನ್ನು ಸರಕಾರವೇ ಪಾವತಿಸುತ್ತದೆ ಎಂದು ಕಳೆದ ವರ್ಷ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನೀಡಿದ್ದ ಭರವಸೆಯ ಬಗ್ಗೆ ನಿರ್ಧರಿಸುವಂತೆ ದಿಲ್ಲಿ ಸರಕಾರಕ್ಕೆ ನಿರ್ದೇಶ ನೀಡಿದೆ.

  ಆಳುವವರು ಜನರಿಗೆ ನೀಡಿರುವ ಭರವಸೆಗಳು ಮಾನ್ಯವಾದ ಮತ್ತು ಸಮರ್ಥನೀಯ ಕಾರಣಗಳಿಲ್ಲದೆ ಮುರಿದು ಬೀಳದಂತೆ ನೋಡಿಕೊಳ್ಳುವುದು ಉತ್ತಮ ಆಡಳಿತದ ಅಗತ್ಯವಾಗಿದೆ ಎಂದು ಹೇಳಿದ ನ್ಯಾ.ಪ್ರತಿಭಾ ಎಂ.ಸಿಂಗ್ ಅವರು,ಸಾಮಾಜಿಕ ಸನ್ನಿವೇಶಗಳಲ್ಲಿ ‘ಭರವಸೆಗಳಿರುವುದೇ ಮುರಿಯಲಿಕ್ಕೆ ’ಎಂಬ ಮಾತು ಪ್ರಚಲಿತವಿದೆ. ಆದರೂ ಸರಕಾರ,ಅದರ ಅಧಿಕಾರಿಗಳು ಮತ್ತು ಇತರ ಪ್ರಾಧಿಕಾರಗಳು ನೀಡಿರುವ ಭರವಸೆಗಳು ಹುಸಿಯಾಗದಂತೆ ನೋಡಿಕೊಳ್ಳಲು ಕಾನೂನುಬದ್ಧ ನಿರೀಕ್ಷೆಗಳು ಮತ್ತು ನಿಬಂಧನೆಗಳ ಸಿದ್ಧಾಂತವನ್ನು ಕಾನೂನು ವಿಕಸನಗೊಳಿಸಿದೆ ಮತ್ತು ವಾಸ್ತವದಲ್ಲಿ ಕೆಲವು ಷರತ್ತುಗಳಿಗೊಳಪಟ್ಟು ಈ ಭರವಸೆಗಳನ್ನು ನ್ಯಾಯಾಂಗದ ಮೂಲಕ ಜಾರಿಗೊಳಿಸಬಹುದು ಎಂದರು.

ಕಳೆದ ವರ್ಷ ಮಾ.29ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೇಜ್ರಿವಾಲ್ ಬಡ ಬಾಡಿಗೆದಾರರಿಂದ ಬಾಡಿಗೆ ವಸೂಲಿಯನ್ನು ಮುಂದೂಡುವಂತೆ ಎಲ್ಲ ಮನೆಮಾಲಿಕರನ್ನು ಕೋರಿಕೊಂಡಿದ್ದರು ಮತ್ತು ಯಾವುದೇ ಬಾಡಿಗೆದಾರನಿಗೆ ಬಡತನದಿಂದಾಗಿ ಬಾಡಿಗೆ ಪಾವತಿಸಲು ಅಸಾಧ್ಯವಾದರೆ ಸರಕಾರವೇ ಅದನ್ನು ಭರಿಸುವುದು ಎಂಬ ಭರವಸೆಯನ್ನು ನೀಡಿದ್ದರು ಎಂದು ಐವರು ದಿನಗೂಲಿ ಕಾರ್ಮಿಕರು ಮತ್ತು ಓರ್ವ ಮನೆಮಾಲಿಕ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

ಮುಖ್ಯಮಂತ್ರಿ ನೀಡಿದ್ದ ಭರವಸೆಯ ಬಗ್ಗೆ ಆರು ವಾರಗಳಲ್ಲಿ ನಿರ್ಧರಿಸುವಂತೆ ದಿಲ್ಲಿ ಸರಕಾರಕ್ಕೆ ನಿರ್ದೇಶ ನೀಡಿರುವ ನ್ಯಾಯಾಲಯವು,ಕೇಜ್ರಿವಾಲ್‌ರ ಹೇಳಿಕೆಯಲ್ಲಿನ ಉದ್ದೇಶಿತ ಫಲಾನುಭವಿಗಳ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಿದೆ.

ಮುಖ್ಯಮಂತ್ರಿಗಳು ವಿಧ್ಯುಕ್ತ ಭರವಸೆಯನ್ನು ನೀಡಿದಾಗ ಅದನ್ನು ಜಾರಿಗೊಳಿಸಬೇಕೇ ಬೇಡವೇ ಎನ್ನುವುದರ ಬಗ್ಗೆ ಖಚಿತ ನಿಲುವು ತಳೆಯುವುದು ಸರಕಾರದ ಕರ್ತವ್ಯವಾಗುತ್ತದೆ ಮತ್ತು ಬೇಡವೆಂದಿದ್ದರೆ ಅದಕ್ಕೆ ಸಮರ್ಥನೀಯ ಕಾರಣಗಳನ್ನು ತಿಳಿಸಬೇಕಾಗುತ್ತದೆ ಎಂದೂ ನ್ಯಾಯಾಲಯವು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News