ಪೆಗಾಸಸ್ ಬೇಹುಗಾರಿಕೆ: ರಾಹುಲ್ ಗಾಂಧಿಯಿಂದ ಪ್ರಧಾನಿ ವಿರುದ್ಧ ದೇಶದ್ರೋಹದ ಆರೋಪ
ಹೊಸದಿಲ್ಲಿ, ಜು. 23: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ದೇಶ, ನಮ್ಮ ದೇಶದೊಳಗಿನ ಸಂಸ್ಥೆಗಳು ಹಾಗೂ ಪ್ರಜಾಪ್ರಭುತ್ವದ ವಿರುದ್ಧ ಪೆಗಾಸಸ್ ಸ್ಪೈವೇರ್ ಬಳಸಿ ಬೇಹುಗಾರಿಕೆ ನಡೆಸುತ್ತಿದ್ದಾರೆ. ಇದನ್ನು ದೇಶದ್ರೋಹ ಎಂದು ಹೇಳದೆ, ಬೇರೇನೂ ಹೇಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ಸಂಸತ್ತಿನ ಸಮೀಪದ ವಿಜಯ್ ಚೌಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇಸ್ರೇಲ್ ನಲ್ಲಿ ಪೆಗಾಸಸ್ ಅನ್ನು ದೇಶದ ರಕ್ಷಣೆಗೆ ಹಾಗೂ ಭಯೋತ್ಪಾದಕರ ವಿರುದ್ಧ ಬಳಸಲಾಗುತ್ತದೆ. ಆದರೆ, ಇಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರು ಪೆಗಾಸಸ್ ಅನ್ನು ದೇಶದ ಹಾಗೂ ದೇಶದ ಸಂಸ್ಥೆಗಳ ವಿರುದ್ದ ಬಳಸಿದ್ದಾರೆ. ಅದನ್ನು ರಾಜಕೀಯವಾಗಿ ಕೂಡ ಬಳಸಿದ್ದಾರೆ. ಕರ್ನಾಟಕದ ರಾಜಕೀಯದಲ್ಲೂ ಇದು ಬಳಕೆಯಾಗಿದೆ ಎಂದು ಅವರು ಹೇಳಿದರು.
‘‘ರಫೇಲ್ ಹಗರಣದ ತನಿಖೆ ತಡೆಯಲು ಸುಪ್ರೀಂ ಕೋರ್ಟ್ನ ವಿರುದ್ಧ ಪೆಗಾಸಸ್ ಅನ್ನು ಬಳಸಲಾಯಿತು. ನರೇಂದ್ರ ಮೋದಿ ಅವರು ಈ ಆಯುಧವನ್ನು ನಮ್ಮ ದೇಶದ ವಿರುದ್ಧ ಬಳಸಿದರು. ಇದನ್ನು ದೇಶದ್ರೋಹ ಎಂದು ಮಾತ್ರ ವರ್ಣಿಸಬಹುದು’’ ಎಂದು ರಾಹುಲ್ ಗಾಂಧಿ ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವರು ರಾಜೀನಾಮೆ ನೀಡಬೇಕು. ನರೇಂದ್ರ ಮೋದಿ ಅವರ ವಿರುದ್ಧ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಯಾಕೆಂದರೆ ಪೆಗಾಸಸ್ ಬಳಕೆಗೆ ಯಾರೊಬ್ಬರೂ ಅಧಿಕೃತತೆ ನೀಡಲು ಸಾಧ್ಯವಿಲ್ಲ. ಪ್ರಧಾನಿ ಹಾಗೂ ಗೃಹ ಸಚಿವರು ಮಾತ್ರ ಪೆಗಾಸಸ್ ಬಳಕೆಗೆ ಅಧಿಕೃತತೆ ನೀಡಲು ಸಾಧ್ಯ ಎಂದು ಅವರು ಹೇಳಿದರು.
ನನ್ನ ಎಲ್ಲ ಫೋನ್ ಕರೆಗಳನ್ನು ಕದ್ದಾಲಿಸಲಾಗುತ್ತಿದೆ. ಈ ಕುರಿತು ನನ್ನ ಸ್ನೇಹಿತರಿಗೆ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರು ಮಾಹಿತಿ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದರು.