ಬೆಳ್ಳಿ ಪದಕವನ್ನು ನನ್ನ ದೇಶಕ್ಕೆ ಅರ್ಪಿಸುತ್ತೇನೆ: ಮೀರಾಬಾಯಿ ಚಾನು

Update: 2021-07-24 12:57 GMT

ಹೊಸದಿಲ್ಲಿ: ಐದು ವರ್ಷಗಳ ಹಿಂದೆ ರಿಯೊ ಒಲಿಂಪಿಕ್ಸ್‌ನಲ್ಲಿ ಸಾಧ್ಯವಾಗದ್ದನ್ನು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸಾಧಿಸಿ ತೋರಿಸಿರುವ  ಮೀರಾಬಾಯಿ ಚಾನು ತಾನು ಗೆದ್ದಿರುವ ಐತಿಹಾಸಿಕ ಬೆಳ್ಳಿ ಪದಕವನ್ನು ದೇಶಕ್ಕೆ ಅರ್ಪಿಸಿದ್ದಾರೆ. ಭಾರತೀಯರ ಶತಕೋಟಿ ಪ್ರಾರ್ಥನೆಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

" ನಿಜಕ್ಕೂ ನನ್ನ ಕನಸು ನನಸಾಗಿದೆ. ಈ ಪದಕವನ್ನು ನನ್ನ ದೇಶಕ್ಕೆ ಅರ್ಪಿಸಲು ನಾನು ಬಯಸುತ್ತೇನೆ ಹಾಗೂ  ಈ ಪ್ರಯಾಣದ ಸಮಯದಲ್ಲಿ ನನ್ನೊಂದಿಗಿದ್ದ ಎಲ್ಲ ಭಾರತೀಯರ ಶತಕೋಟಿ ಪ್ರಾರ್ಥನೆಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದ ನಂತರ ಮೀರಾ ಹೇಳಿದರು. ಒಟ್ಟಾರೆ ಭಾರತಕ್ಕೆ 29 ನೇ ಒಲಿಂಪಿಕ್ ಪದಕವನ್ನು ಗೆದ್ದುಕೊಟ್ಟರು.

ಕರ್ಣಂ ಮಲ್ಲೇಶ್ವರಿ (ಕಂಚು, ಸಿಡ್ನಿ 2000) ನಂತರ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ಸ್  ಪದಕ ಗೆದ್ದುಕೊಟ್ಟ ಏಕೈಕ ಭಾರತೀಯರೆಂಬ ಹೆಗ್ಗಳಿಕೆಗೆ ಚಾನು ಪಾತ್ರರಾದರು.

"ನನ್ನ ಕುಟುಂಬಕ್ಕೆ, ವಿಶೇಷವಾಗಿ ನನ್ನ ತಾಯಿಯ ತ್ಯಾಗಕ್ಕಾಗಿ ಹಾಗೂ  ನನ್ನನ್ನು ನಂಬಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಮ್ಮ ಸರಕಾರಕ್ಕೆ ವಿಶೇಷ ಧನ್ಯವಾದಗಳು . ಕ್ರೀಡಾ ಸಚಿವಾಲಯ, ಭಾರತದ ಕ್ರೀಡಾ ಪ್ರಾಧಿಕಾರ, ಭಾರತೀಯ ಒಲಿಂಪಿಕ್ಸ್  ಅಸೋಸಿಯೇಶನ್, ವೇಟ್ ಲಿಫ್ಟಿಂಗ್ ಫೆಡರೇಶನ್, ರೈಲ್ವೆ, ಒಲಿಂಪಿಕ್ಸ್  ಗೋಲ್ಡ್ ಕ್ವೆಸ್ಟ್, ಪ್ರಾಯೋಜಕರು ಹಾಗೂ  ನನ್ನ ಮಾರ್ಕೆಟಿಂಗ್ ಏಜೆನ್ಸಿ ಐಒಎಸ್ ಅವರ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು ಎಂದರು.

ಚಾನು ಅವರ ತಾಯಿ ತಮ್ಮ ಸ್ವಂತ ಆಭರಣಗಳನ್ನು ಮಾರಾಟ ಮಾಡಿ ಮಗಳಿಗೆ ಉಡುಗೊರೆಯಾಗಿ ಓಲೆಗಳನ್ನು ಮಾಡಿಸಿಕೊಟ್ಟಿದ್ದರು. ಈ ಓಲೆಗಳು ಚಾನುವಿಗೆ ಅದೃಷ್ಟ ತಂದುಕೊಡಲಿ ಎಂಬ ನಂಬಿಕೆ ಇಂದು ನಿಜವಾಗಿದೆ.

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಚಾನು ಇಂದು ಬೆಳಗ್ಗೆ ಬೆಳ್ಳಿ ಗೆದ್ದಿದ್ದಾಳೆ. ನಾನು ಬಹಳ  ವರ್ಷಗಳಿಂದ ತಡೆದಿದ್ದ ಕಣ್ಣೀರು ಈಗ ಹರಿಸಿದೆ ಎಂದು ಅವರ ತಾಯಿ ಸೈಖೋಮ್ ಒಂಗ್ಬಿ ಟೋಂಬಿ ಲೀಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News