ಸಂಸತ್ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಪ್ರತಿಪಕ್ಷಗಳನ್ನು ಸಂಪರ್ಕಿಸಿದ ಸರಕಾರ

Update: 2021-07-26 18:42 GMT

ಹೊಸದಿಲ್ಲಿ,ಜು.26: ಪೆಗಾಸಸ್ ಹಗರಣವು ಸಂಸತ್ತಿನಲ್ಲಿ ಸೃಷ್ಟಿಸಿರುವ ಬಿಕ್ಕಟ್ಟನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸರಕಾರವು ಪ್ರತಿಪಕ್ಷಗಳನ್ನು ಸಂಪರ್ಕಿಸುತ್ತಿದೆ. 

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಕಾಂಗ್ರೆಸ್‌ ನ ಮನೀಷ್ ತಿವಾರಿ ಮತ್ತು ಎನ್ಸಿಪಿಯ ಸುಪ್ರಿಯಾ ಸುಳೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಭೋಜನ ಮಾತುಕತೆ ನಡೆಸಿದ್ದಾಗಿ ಮೂಲಗಳು ತಿಳಿಸಿವೆ.

ಜು.18ರಂದು ಪೆಗಾಸಸ್ ಸ್ಪೈವೇರ್ ಹಗರಣ ಸ್ಫೋಟಗೊಂಡ ಬಳಿಕ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಯಾವುದೇ ಕಲಾಪಗಳು ನಡೆದಿಲ್ಲ.
ತಾನು ಪೂರ್ಣ ಪರಿಶೀಲನೆಯ ಬಳಿಕ ಸರಕಾರಗಳಿಗೆ ತಂತ್ರಾಂಶವನ್ನು ಮಾತ್ರ ಪೂರೈಸುತ್ತಿರುವುದಾಗಿ ಪೆಗಾಸಸ್ನ ಮಾಲಿಕ ಸಂಸ್ಥೆ ಇಸ್ರೇಲಿನ ಎನ್ಎಸ್ಒ ಗ್ರೂಪ್ ಘೋಷಿಸಿದ್ದು,ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿವರಣೆಯನ್ನು ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಗೃಹಸಚಿವ ಶಾ ರಾಜೀನಾಮೆಗೆ ಮತ್ತು ಮೋದಿಯವರ ವಿರುದ್ಧ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ.

ಸೋಮವಾರವೂ ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದರಿಂದ ಸದನವನ್ನು ಮುಂದೂಡಲಾಗಿದೆ.

 ಅತ್ತ ಲೋಕಸಭೆಯು ಸುಮಾರು 30 ನಿಮಿಷಗಳ ಕಾಲ ಕಲಾಪ ನಡೆಸಿದ್ದು,ಪ್ರಶ್ನೆವೇಳೆಯಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದ ಬಳಿಕ ಸ್ಪೀಕರ್ ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಿದ್ದರು. ನಂತರ ಸಮಾವೇಶಗೊಂಡಾಗ ಫ್ಯಾಕ್ಟರಿಂಗ್ ನಿಯಂತ್ರಣ(ತಿದ್ದುಪಡಿ) ಮಸೂದೆ ಹಾಗೂ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ,ಉದ್ಯಮಶೀಲತೆ ಮತ್ತು ನಿರ್ವಹಣೆ ಮಸೂದೆಗಳನ್ನು ಅಂಗೀಕರಿಸಲಾಯಿತು.
ಸದನದಲ್ಲಿ ವ್ಯತ್ಯಯಗಳ ಕುರಿತು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಕಳವಳವನ್ನು ವ್ಯಕ್ತಪಡಿಸಿದ್ದು,ಸದನದ 90 ಸದಸ್ಯರಿಂದ ನೋಟಿಸ್ ಗಳನ್ನು ಸ್ವೀಕರಿಸಲಾಗಿದ್ದರೂ ಸಾರ್ವಜನಿಕ ಮಹತ್ವದ ವಿಷಯಗಳನ್ನು ಪ್ರಸ್ತಾವಿಸಲು ಅವರಿಗೆ ಅವಕಾಶಗಳು ದೊರೆಯುತ್ತಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News