ರಾಜ್ಯ ಬಿಜೆಪಿ ರಾಜಕಾರಣ: ಲಿಂಗಾಯತ ಮಠಗಳಿಂದ ನಾಗಪುರ ಮಠದೆಡೆಗೆ

Update: 2021-07-27 06:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

 ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಈ ಮೂಲಕ ಅವರ ರಾಜಕೀಯ ಬದುಕು ಬಿಜೆಪಿಯೊಳಗೆ ಬಹುತೇಕ ಮುಕ್ತಾಯಗೊಂಡಿದೆ. ಈ ಬೆಳವಣಿಗೆ ಬರೇ ಭ್ರಷ್ಟಾಚಾರ ಆರೋಪ ಹೊತ್ತಿರುವ ಯಡಿಯೂರಪ್ಪ ಅವರಿಗಷ್ಟೇ ಸೀಮಿತವಾಗಿದ್ದಿದ್ದರೆ ಚರ್ಚಿಸುವ ಅಗತ್ಯವಿರಲಿಲ್ಲ. ಈ ರಾಜಕೀಯ ಬದಲಾವಣೆ ಕರ್ನಾಟಕಕ್ಕೆ ಮಾತ್ರವಲ್ಲ ದಕ್ಷಿಣ ಭಾರತಕ್ಕೆ ಹಲವು ಕಾರಣಗಳಿಗಾಗಿ ಮುಖ್ಯವಾಗುತ್ತದೆ. ದಕ್ಷಿಣ ಭಾರತವನ್ನು ಬಿಜೆಪಿ ಪ್ರವೇಶಿಸಿದ್ದು ಕರ್ನಾಟಕದ ಮೂಲಕ. ಕೇವಲ ‘ಮೀಸೆಯಷ್ಟೇ ತಾನೇ’ ಎಂದು ದಕ್ಷಿಣ ಭಾರತ ಆ ರಾಜಕೀಯ ಬೆಳವಣಿಗೆಯನ್ನು ನಿರ್ಲಕ್ಷಿಸಿತ್ತು. ಆದರೆ ಆನಂತರದ ಚುನಾವಣೆಯಲ್ಲಿ ಅದು ತನ್ನ ದೇಹವನ್ನು ಪೂರ್ಣ ಪ್ರಮಾಣದೊಳಗೆ ಕರ್ನಾಟಕದೊಳಗೆ ತೂರಿಸಿಕೊಂಡಿತು. ಆದರೆ ರಾಜ್ಯದ ಅಧಿಕಾರ ಸೂತ್ರ ಎಲ್ಲಿಯವರೆಗೆ ಉತ್ತರ ಭಾರತೀಯ ವರಿಷ್ಠರ ಕೈವಶವಾಗುವುದಿಲ್ಲವೋ ಅಲ್ಲಿಯವರೆಗೆ ಆರೆಸ್ಸೆಸ್ ತಾನು ಉದ್ದೇಶಿಸಿದ್ದು ಸಾಧಿಸಲು ಸಾಧ್ಯವಾಗುವುದಿಲ್ಲ. ಸೋಮವಾರ ಯಡಿಯೂರಪ್ಪ ನೀಡಿರುವ ರಾಜೀನಾಮೆಯನ್ನು, ಕರ್ನಾಟಕದ ರಾಜಕೀಯ ಶಕ್ತಿ ಕೇಂದ್ರವನ್ನು ಲಿಂಗಾಯತ ಮಠಗಳಿಂದ, ನಾಗಪುರದ ಮಠಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು ಎಂದು ಕರೆಯಬಹುದು. ಭವಿಷ್ಯದಲ್ಲಿ ನೆಪ ಮಾತ್ರಕ್ಕೆ ನೂತನ ಮುಖ್ಯಮಂತ್ರಿಯಾಗಿ ಲಿಂಗಾಯತರನ್ನೇ ನೇಮಕ ಮಾಡಬಹುದಾದರೂ, ಮುಂದಿನ ದಿನಗಳಲ್ಲಿ ಅವರು ಪೂರ್ಣ ಪ್ರಮಾಣದಲ್ಲಿ ನಾಗಪುರ ಮಠಕ್ಕೆ ನಿಷ್ಠರಾಗಬೇಕಾಗುತ್ತದೆ. ಒಂದು ರೀತಿಯಲ್ಲಿ, ದಕ್ಷಿಣ ಭಾರತದಲ್ಲಿ ತನ್ನ ನಿಯಂತ್ರಣವನ್ನು ಸಾಧಿಸುವ ಮೊದಲ ಹಂತವನ್ನು ನಾಗಪುರ ಮಠವು ಕರ್ನಾಟಕದಲ್ಲಿ ಸೋಮವಾರ ಸಂಪನ್ನಗೊಳಿಸಿದೆ. ಸದ್ಯದ ರಾಜಕೀಯ ಸಂಘರ್ಷದಲ್ಲಿ ರಾಜ್ಯದ ಲಿಂಗಾಯತದ ಶಕ್ತಿಕೇಂದ್ರಕ್ಕೆ ನಾಗಪುರ ಶಕ್ತಿಕೇಂದ್ರದಿಂದ ಬಹುದೊಡ್ಡ ಹಿನ್ನಡೆಯಾಗಿದೆ.

     ಜನಸಂಘದಿಂದ ಬಿಜೆಪಿಯಾಗಿ ರೂಪಾಂತರಗೊಂಡು ಹಿಂದುತ್ವದ ರಾಜಕಾರಣದ ಮೂಲಕ ಉತ್ತರ ಭಾರತವನ್ನು ಆರೆಸ್ಸೆಸ್ ಆವರಿಸಿಕೊಂಡಿತ್ತಾದರೂ, ದಕ್ಷಿಣ ಭಾರತದ ಕೋಟೆ ಅದರ ಪಾಲಿಗೆ ದುರ್ಗಮವಾಗಿತ್ತು. ಕೇರಳವನ್ನು ನಿಯಂತ್ರಿಸುತ್ತಿದ್ದ ಕಮ್ಯುನಿಸ್ಟ್ ಮತ್ತು ನಾರಾಯಣ ಗುರು ಚಿಂತನೆ, ತಮಿಳುನಾಡನ್ನು ಕಾಯುತ್ತಿದ್ದ ದ್ರಾವಿಡ ಚಿಂತನೆ, ತೆಲುಗರನ್ನು ಪೊರೆಯುತ್ತಿದ್ದ ಪ್ರಾದೇಶಿಕ ಚಿಂತನೆಗಳು ಹಿಂದಿ ರಾಷ್ಟ್ರೀಯ ವಾದಕ್ಕೆ ಬಹುದೊಡ್ಡ ಅಡ್ಡಿಯಾಗಿದ್ದವು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅವರಿಗೆ ಸವಾಲಾಗಿದ್ದು, ಕನ್ನಡದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಅಧ್ಯಾತ್ಮ ಶಕ್ತಿಯಾದ ಲಿಂಗಾಯತ ಧರ್ಮ. ನಾಗಪುರದ ಹಿಂದುತ್ವ, ಸಂಸ್ಕೃತ, ಹಿಂದಿ ಎಲ್ಲವನ್ನೂ ಕನ್ನಡ ಪ್ರಾದೇಶಿಕತೆಯ ಮೂಲಕ ಲಿಂಗಾಯತ ಧರ್ಮ ಸಮರ್ಥವಾಗಿ ಎದುರಿಸಿ ನಿಂತಿತ್ತು. ಲಿಂಗಾಯತ ಮಠಗಳಿಗೆ ಶರಣಾಗದೆ, ಕರ್ನಾಟಕವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ನಾಗಪುರ ಮಠಕ್ಕೆ ಅಸಾಧ್ಯವಾಗಿತ್ತು. ಆದುದರಿಂದ ಶರಣಾಯಿತು ಕೂಡ. ತಳಸ್ತರದಲ್ಲಿ ವೀರಶೈವ ಧರ್ಮದ ಜೊತೆಗೆ ಲಿಂಗಾಯತ ಧರ್ಮದ ವರ್ಣಸಂಕರವನ್ನು ಅದು ಬಳಸಿಕೊಂಡಿತು. ಮಠಗಳ ಜೊತೆಗೆ, ಲಿಂಗಾಯತ ಮುಖಂಡರ ಜೊತೆಗೆ ವೈದಿಕ ಧರ್ಮ ಕೊಡುಕೊಳ್ಳುವಿಕೆಯನ್ನು ಶುರು ಹಚ್ಚಿತು. ಲಿಂಗಾಯತ ಧರ್ಮದಿಂದ ಬಂದ ಯಡಿಯೂರಪ್ಪನವರನ್ನೇ ಮುಂದಿಟ್ಟುಕೊಂಡು ಬಿಜೆಪಿ ಕರ್ನಾಟಕದಲ್ಲಿ ಕೆಲಸ ಆರಂಭಿಸಿತು. ಕೇರಳ ಮತ್ತು ತಮಿಳುನಾಡಿನಲ್ಲಿ ಸಾಧಿಸಲಾಗದೇ ಇದ್ದದ್ದು ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಮೂಲಕ ಸಾಧ್ಯವಾಯಿತು. ಬಿಜೆಪಿ ಗೆದ್ದರೆ ತಾನೇ ಮುಖ್ಯಮಂತ್ರಿ ಎಂದು ತಿಳಿದಿದ್ದ ಯಡಿಯೂರಪ್ಪ, ಹಿಂದುತ್ವ ಮತ್ತು ಲಿಂಗಾಯತ ಧರ್ಮವೆಂಬ ಎರಡು ದೋಣಿಗಳಲ್ಲಿ ಏಕಕಾಲದಲ್ಲಿ ಪಯಣಿಸಿದರು. ಇಷ್ಟಾದರೂ, ಲಿಂಗಾಯತ ನಾಯಕರು ಕಾಂಗ್ರೆಸ್‌ನೊಳಗೂ ಇದ್ದರು. ಹಾಗೆಯೇ ಇನ್ನೊಂದು ಪ್ರಾದೇಶಿಕ ರಾಜಕೀಯ ಶಕ್ತಿಯಾಗಿದ್ದ ಒಕ್ಕಲಿಗರನ್ನು ಜೊತೆಗೆ ಕರೆದುಕೊಂಡು ಹೋಗುವುದು ಬಿಜೆಪಿಗೆ ಅಗತ್ಯವಾಗಿತ್ತು. ಇಲ್ಲವಾದರೆ ಕರ್ನಾಟಕದ ಚುಕ್ಕಾಣಿ ಹಿಡಿಯುವುದು ಕಷ್ಟ ಎನ್ನುವುದು ಅದಕ್ಕೆ ಗೊತ್ತಿತ್ತು. ಇಂತಹ ಸಂದರ್ಭದಲ್ಲಿ, ಜೆಡಿಎಸ್‌ನ್ನು ಒಡೆದು ಕುಮಾರಸ್ವಾಮಿಯ ಮೂಲಕ ಬಿಜೆಪಿಯನ್ನು ಅನಿರೀಕ್ಷಿತವಾಗಿ ಅಧಿಕಾರಕ್ಕೆ ಕೊಂಡೊಯ್ಯುವ ತಂತ್ರಗಾರಿಕೆಯನ್ನು ರೂಪಿಸಿದವರು ಯಡಿಯೂರಪ್ಪ. ‘ಜಾತ್ಯತೀತ’ ಎಂದು ಗುರುತಿಸಿಕೊಂಡಿದ್ದ ಜೆಡಿಎಸ್ ಅಧಿಕಾರದ ಆಸೆಗಾಗಿ ಬಿಜೆಪಿಯೊಂದಿಗೆ ಸೇರಿಕೊಂಡು, ಆವರೆಗೆ ಜಾತ್ಯತೀತತೆಗೆ ಅಸ್ಪಶ್ಯವಾಗಿದ್ದ ಪಕ್ಷವನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸಿತು. ಹೀಗೆ ಲಿಂಗಾಯತ ಮಠಗಳೊಂದಿಗೆ, ಲಿಂಗಾಯತ ನಾಯಕನನ್ನೇ ಮುಂದಿಟ್ಟುಕೊಂಡು, ಪ್ರಾದೇಶಿಕ ಒಕ್ಕಲಿಗ ಶಕ್ತಿಯನ್ನು ಒಡೆದು ಮೊದಲ ಬಾರಿಗೆ ದಕ್ಷಿಣ ಭಾರತದೊಳಗೆ ಆರೆಸ್ಸೆಸ್ ತನ್ನ ಮೀಸೆಯನ್ನು ತೂರಿಸಿಕೊಂಡಿತು. ಹೀಗೆ ಅಧಿಕಾರ ಹಂಚಿಕೊಂಡ 20 ತಿಂಗಳಲ್ಲೇ ಚುನಾವಣೆಯನ್ನು ಎದುರಿಸಿ ಬಹುಮತವನ್ನು ತನ್ನದಾಗಿಸಿಕೊಂಡಿತು. ತನ್ನ ಕಾರ್ಯಸಾಧನೆ ಮುಗಿದದ್ದೇ ಜಾತ್ಯತೀತ ಜನತಾದಳ ಮತ್ತು ಕುಮಾರಸ್ವಾಮಿಯನ್ನು ಕಸದ ಬುಟ್ಟಿಗೆ ಎಸೆಯಿತು. ಧರ್ಮ, ಜಾತಿ, ಹಣ, ಸಂವಿಧಾನ ವಿರೋಧಿ ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿ ಅಧಿಕಾರಕ್ಕೇರಿತು.

     ಆ ಬಳಿಕ ನಾಗಪುರ ಮಠಕ್ಕೆ ಸಮಸ್ಯೆಯಾಗಿದ್ದು ಯಡಿಯೂರಪ್ಪ ಮತ್ತು ಲಿಂಗಾಯತ ಮಠಗಳು. ಮುಖ್ಯಮಂತ್ರಿಯಾಗಿ ತನ್ನದೇ ಅಭ್ಯರ್ಥಿಯನ್ನು ಮುನ್ನೆಲೆಗೆ ತರಲು ಆರೆಸ್ಸೆಸ್ ಅಂದೇ ಪ್ರಯತ್ನಿಸಿತ್ತಾದರೂ, ಈ ಸಂಚನ್ನು ಅರಿತ ಯಡಿಯೂರಪ್ಪ ಲಿಂಗಾಯತ ಮಠಗಳನ್ನು ಗುರಾಣಿಯಾಗಿ ಬಳಸಿಕೊಂಡರು. ಚುನಾವಣೆಯನ್ನು ಎದುರಿಸಲು ಹಿಂದುತ್ವ ಮತ್ತು ಬಿಜೆಪಿಯೊಳಗಿನ ನಾಗಪುರ ಶಕ್ತಿಗಳನ್ನು ಎದುರಿಸಲು ಲಿಂಗಾಯತ ಮಠಗಳನ್ನು ಜೊತೆಗಿರಿಸಿಕೊಂಡರು. ಮುಖ್ಯಮಂತ್ರಿಯಾದ ದಿನದಿಂದ ಯಡಿಯೂರಪ್ಪ ಅವರನ್ನು ವಿರೋಧಪಕ್ಷಗಳಿಗಿಂತ ಬಿಜೆಪಿಯೊಳಗಿರುವ ಆರೆಸ್ಸೆಸ್ ಶಕ್ತಿಗಳೇ ಕಾಡಿದ್ದು ಅಧಿಕ. ದಿವಂಗತ ಅನಂತಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಸಂಚು ಎಡೆಬಿಡದೆ ದಿಲ್ಲಿಯಲ್ಲಿ ನಡೆಯಿತು. ಅತ್ತ ತನ್ನ ವಿರುದ್ಧ ಸಂಚುಗಳು ಹೆಚ್ಚುತ್ತಿರುವಂತೆಯೇ ಇತ್ತ ಯಡಿಯೂರಪ್ಪ ಜಾತಿ ಮಠಗಳಿಗೆ ಹೆಚ್ಚು ಹೆಚ್ಚು ಆತುಕೊಳ್ಳತೊಡಗಿದರು. ಹಾಗೆಯೇ, ರಾಜಕೀಯ ಅಭದ್ರತೆಯಿಂದ ತತ್ತರಿಸಿದ ಅವರು ತನ್ನ ಸಹೋದ್ಯೋಗಿಗಳ ಭ್ರಷ್ಟಾಚಾರಕ್ಕೆ ಮುಕ್ತ ಪರವಾನಿಗೆ ನೀಡಬೇಕಾದಂತಹ ಸನ್ನಿವೇಶ ನಿರ್ಮಾಣವಾಯಿತು. ಗಣಿ ರೆಡ್ಡಿ ಸಹೋದರರ ಹಣದಿಂದಲೇ ರಚನೆಗೊಂಡ ಸರಕಾರ ಅದಾಗಿತ್ತು. ಯಡಿಯೂರಪ್ಪ ಅವರ ಅಸಹಾಯಕತೆಯನ್ನು ಗಣಿ ರೆಡ್ಡಿ ಸಹೋದರರು ಚೆನ್ನಾಗಿಯೇ ಬಳಸಿಕೊಂಡರು. ಗಡ್ಕರಿ, ಅಡ್ವಾಣಿ, ಸುಷ್ಮಾ ಸ್ವರಾಜ್ ಅವರ ನೇರ ಸಂಪರ್ಕ ಗಣಿರೆಡ್ಡಿ ಸಹೋದರರಿಗಿದ್ದುದರಿಂದ ಪದೇ ಪದೇ ದಿಲ್ಲಿ ವರಿಷ್ಠರಿಗೆ ಯಡಿಯೂರಪ್ಪ ಸಮಜಾಯಿಶಿ ನೀಡಬೇಕಾಯಿತು. ನಿಧಾನಕ್ಕೆ ಯಡಿಯೂರಪ್ಪರೂ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಣ ಶೇಖರಿಸುವುದರ ಕಡೆಗೆ ಗಮನ ಹರಿಸಿದರು. ಯಾವಾಗ ಆರೆಸ್ಸೆಸ್ ಯಡಿಯೂರಪ್ಪರನ್ನು ಬಳಸಿ ಎಸೆಯಲು ಮುಂದಾಯಿತೋ ಆಗ ಅವರು ಆರೆಸ್ಸೆಸ್‌ಗೆ ಸವಾಲು ಎಸೆಯುವಂತೆ ಕೆಜೆಪಿಯನ್ನು ಕಟ್ಟಿದರು. ಲಿಂಗಾಯತ ಶಕ್ತಿಗಳಿಲ್ಲದೆ ಬಿಜೆಪಿಯಿಲ್ಲ ಎನ್ನುವುದನ್ನು ತೋರಿಸಿ ಕೊಟ್ಟರು. ಯಡಿಯೂರಪ್ಪ ಮತ್ತು ಲಿಂಗಾಯತ ರಾಜಕೀಯ ಶಕ್ತಿಯಿಲ್ಲದೆ ಕರ್ನಾಟಕದಲ್ಲಿ ಮುಂದುವರಿಯುವುದು ಕಷ್ಟ ಎನ್ನುವುದನ್ನು ಅರಿತ ಆರೆಸ್ಸೆಸ್ ಮತ್ತೆ ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನು ಒಪ್ಪಿಕೊಂಡಿತು. ಆ ಮೂಲಕ ಮತ್ತೊಮ್ಮೆ ಲಿಂಗಾಯತ ಮಠಗಳಿಗೆ ಶರಣಾಯಿತು.

  ಅಂದೇ ಆರೆಸ್ಸೆಸ್‌ನ ಸಂಚುಗಳನ್ನು ಅರ್ಥಮಾಡಿಕೊಂಡು, ನಿಜವಾದ ಲಿಂಗಾಯತ ಸಿದ್ಧಾಂತಗಳಿಗೆ ಮರಳಿ, ಅದನ್ನು ರಾಜಕೀಯಶಕ್ತಿಯಾಗಿ ಬೆಳೆಸಿದ್ದಿದ್ದರೆ ಯಡಿಯೂರಪ್ಪರಿಗೆ ಇಂತಹ ಹೀನಾಯ ಸ್ಥಿತಿ ಬರುತ್ತಿರಲಿಲ್ಲ. ಒಂದು ಕಾಲನ್ನು ವೈದಿಕ ದೋಣಿಯ ಮೇಲಿಟ್ಟು ಬಿಜೆಪಿಯನ್ನಾಗಲಿ, ಆರೆಸ್ಸೆಸ್‌ನ್ನಾಗಲಿ ಪೂರ್ಣವಾಗಿ ಎದುರಿಸಲು ಸಾಧ್ಯವಿಲ್ಲ ಎನ್ನುವುದನ್ನು ಲಿಂಗಾಯತ ಸ್ವಾಮೀಜಿಗಳು ಅರ್ಥಮಾಡಿಕೊಳ್ಳಬೇಕಾಗಿತ್ತು. ಅವರೂ ಅದರಲ್ಲಿ ವಿಫಲರಾದರು. ಆರೆಸ್ಸೆಸ್ ಮತ್ತು ವೈದಿಕ ರಾಜಕಾರಣದ ಜೊತೆಗೆ ಲಿಂಗಾಯತ ಮಠಗಳು ಹೊಂದಾಣಿಕೆಯ ರಾಜಕಾರಣ ಮಾಡಿಕೊಂಡರು. ಇಂದು ಪೂರ್ಣ ಪ್ರಮಾಣದಲ್ಲಿ ನಾಗಪುರ ಮಠ ಲಿಂಗಾಯತ ಅಸ್ಮಿತೆಯ ಮೇಲೆ ಮಾತ್ರವಲ್ಲ ಇಡೀ ಕರ್ನಾಟಕದ ಮೇಲೆ ತನ್ನ ಮೊದಲ ಪಾದವನ್ನು ಊರಿದೆ. ತನ್ನ ಎರಡನೇ ಮತ್ತು ಮೂರನೇ ಪಾದವನ್ನು ಕೇರಳ, ತಮಿಳುನಾಡಿನ ಕಡೆಗೆ ಊರುವ ಅದರ ಪ್ರಯತ್ನ ಇಲ್ಲಿಂದಲೇ ಮುಂದುವರಿಯಲಿದೆ. ಆದುದರಿಂದ, ಯಡಿಯೂರಪ್ಪ ರಾಜೀನಾಮೆ ನೀಡಿರುವ ಈ ದಿನ, ರಾಜ್ಯ ಬಿಜೆಪಿಯ ರಾಜಕೀಯ ಶಕ್ತಿ ಕೇಂದ್ರ, ಲಿಂಗಾಯತ ಮಠಗಳಿಂದ ಅಧಿಕೃತವಾಗಿ ನಾಗಪುರ ಮಠಕ್ಕೆ ಹಸ್ತಾಂತರವಾದ ವಿಷಾದನೀಯ ದಿನ ಎಂದೇ ಬಗೆಯಬೇಕು. ಯಡಿಯೂರಪ್ಪ ರಾಜೀನಾಮೆಯಿಂದ ಕರ್ನಾಟಕದಲ್ಲಿ ಭ್ರಷ್ಟಾಚಾರದ ದಿನಗಳು ಮುಗಿದವು ಎಂದು ಭಾವಿಸುವುದು ಮೂರ್ಖತನ. ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ದೋಚಿದ ಹಣ, ದಿಲ್ಲಿಯ ವರಿಷ್ಠರ ಖಜಾನೆಗಳನ್ನು ತುಂಬಲಿದೆೆ. ಕೋಮುರಾಜಕಾರಣದ ಮರೆಯಲ್ಲಿ ರಾಜ್ಯ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಇನ್ನಷ್ಟು ದಿವಾಳಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News