ಚುನಾವಣೋತ್ತರ ಹಿಂಸಾಚಾರ ಕುರಿತ ವರದಿಯನ್ನು ಖಂಡಿಸಿ ಹೈಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ ಪ.ಬಂಗಾಳ ಸರಕಾರ

Update: 2021-07-27 09:56 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೋತ್ತರ ಹಿಂಸಾಚಾರ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನ್ನ ವರದಿಯಲ್ಲಿ ಮಾಡಿರುವ ಪ್ರತಿಯೊಂದು ಆರೋಪವನ್ನು ನಿರಾಕರಿಸಿ ರಾಜ್ಯ ಸರಕಾರ ಕೊಲ್ಕತ್ತಾ ಹೈಕೋರ್ಟಿಗೆ ವಿಸ್ತೃತ ಅಫಿಡವಿಟ್ ಸಲ್ಲಿಸಿದೆ.

"ಆಯೋಗದ ತಂಡವು ರಾಜ್ಯದ ಆಡಳಿತದ ವಿರುದ್ಧ ತಾರತಮ್ಯಕಾರಿ ನಿಲುವು ಹೊಂದಿದೆ ಹಾಗೂ  ತಂಡದ ಸದಸ್ಯರು ಬಿಜೆಪಿ ಅಥವಾ ಕೇಂದ್ರ ಸರಕಾರದ ಜತೆಗೆ ನಿಕಟ ಸಹಯೋಗ ಹೊಂದಿರುವುದರಿಂದ  ತಂಡದ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ" ಎಂದು ರಾಜ್ಯದ ಗೃಹ ಕಾರ್ಯದರ್ಶಿ ಬಿ.ಪಿ ಗೋಪಾಲಿಕಾ ಆವರು ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಕುರಿತು ಋಣಾತ್ಮಕ ವರದಿ ನೀಡಲು  ತಾರತಮ್ಯಕಾರಿ ನಿಲುವು ಹೊಂದಿರುವ ಬಿಜೆಪಿ ನಾಯಕ ಆತಿಫ್ ರಶೀದ್ ಅವರಂತಹವರನ್ನು ಆಯೋಗದ ತಂಡದಲ್ಲಿ ಉದ್ದೇಶಪೂರ್ವಕವಾಗಿ ಆರಿಸಲಾಗಿತ್ತು ಎಂದು ಕೂಡ ಅದರಲ್ಲಿ ತಿಳಿಸಲಾಗಿದೆ.

ಆಯೋಗದ ವರದಿಯು ರಾಜ್ಯದ ಪೊಲೀಸ್ ಪಡೆಯ ಹಾಗೂ ಆಡಳಿತಾತ್ಮಕ ಸೇವೆಯ ಸದಸ್ಯರ ಗೌರವಕ್ಕೆ ಧಕ್ಕೆ ತರಬಹುದು ಎಂದು ಅಫಿಡವಿಟ್‍ನಲ್ಲಿ ಹೇಳಲಾಗಿದೆ. ಆಯೋಗ ತನ್ನ ವರದಿಯಲ್ಲಿ ರಾಜ್ಯದ ಒಬ್ಬ ಸಚಿವರು ಹಾಗೂ ಟಿಎಂಸಿಯ ಜನಪ್ರತಿನಿಧಿಗಳನ್ನು ಕುಖ್ಯಾತ ಕ್ರಿಮಿನಲ್‍ಗಳು/ಗೂಂಡಾಗಳ ಪಟ್ಟಿಯಲ್ಲಿ ಹೆಸರಿಸಿರುವುದನ್ನೂ ಅಫಿಡವಿಟ್‍ನಲ್ಲಿ ಪ್ರಶ್ನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News