ನಗರ ಮತ್ತು ಗ್ರಾಮೀಣ ಶುಚಿತ್ವ: ಭಿನ್ನ ಸವಾಲುಗಳು

Update: 2021-07-28 08:51 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಭಿವೃದ್ಧಿ ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳದೇ ಇರುವಕಾರಣದಿಂದ, ಅಭಿವೃದ್ಧಿಯ ಬುಡದಲ್ಲಿ ಮಾಲಿನ್ಯ ಬೃಹದಾಕಾರವಾಗಿ ತಲೆಯೆತ್ತುತ್ತಿದೆೆ. ಈ ದೇಶ ತಿನ್ನುವುದಕ್ಕೆ ಗಮನ ನೀಡಿದಷ್ಟು, ಶೌಚಕ್ಕೆ ಗಮನ ನೀಡಿಲ್ಲ. ಯಾಕೆಂದರೆ, ಭಾರತದ ಗ್ರಾಮೀಣ ಪ್ರದೇಶ ಇನ್ನೂ ಹಸಿವಿನ ಬಗ್ಗೆಯೇ ತಲೆಕೆಡಿಸಿಕೊಳ್ಳುತ್ತಿದೆ. ಹೀಗಿರುವಾಗ, ‘ವಿಸರ್ಜನೆ’ ಬಗ್ಗೆ ಗಂಭೀರವಾಗಿ ಆಲೋಚಿಸುವುದಾದರೂ ಹೇಗೆ? ಕುಡಿಯುವ ನೀರಿಗಾಗಿ ಒದ್ದಾಡುತ್ತಿರುವ ಗ್ರಾಮೀಣ ಪ್ರದೇಶ, ಆಧುನಿಕ ಶೌಚಾಲಯಕ್ಕಾಗಿ ಭಾರೀ ಪ್ರಮಾಣದ ನೀರನ್ನು ವ್ಯಯ ಮಾಡಲು ಸಾಧ್ಯವೆ?ಸರಕಾರ ಶುಚಿತ್ವ ಆಂದೋಲನದ ಬಗ್ಗೆ, ಶೌಚಾಲಯದ ಬಗ್ಗೆ ಮಾತನಾಡುತ್ತಿರುವಾಗ, ಗ್ರಾಮೀಣ ಮತ್ತು ಕೊಳೆಗೇರಿ ಪ್ರದೇಶದ ಜನರು ತಲೆಗೊಂದು ಸೂರಿನ ಕುರಿತ ಚಿಂತೆಯಲ್ಲಿದ್ದರು. ಸಾರ್ವಜನಿಕ ಶೌಚಾಲಯವನ್ನೇ ಮನೆಯನ್ನಾಗಿ ಪರಿವರ್ತಿಸಿದ ಹಲವು ಪ್ರಕರಣಗಳು ಗ್ರಾಮೀಣ ಪ್ರದೇಶದಲ್ಲಿ ಈಗಲೂ ವರದಿಯಾಗುತ್ತಿವೆ. ಇಂದಿಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯದ ಒಳಗಿನ ಖಾಲಿ ಪ್ರದೇಶದಲ್ಲಿ ಒಲೆ ಹೂಡಿ ಬದುಕುತ್ತಿರುವ ನೂರಾರು ಕುಟುಂಬಗಳಿವೆ. ಸ್ವಾತಂತ್ರ ದೊರೆತ 1947ರಿಂದ ಭಾರತ ಹಲವು ಆರ್ಥಿಕ ಕ್ಷೇತ್ರಗಳಲ್ಲಿ ಅಸಾಧಾರಣ ಅಭಿವೃದ್ಧಿ ಸಾಧಿಸಿದೆ.

ಸಾಕ್ಷರತೆ, ತಲಾ ಆದಾಯ, ಜೀವಿತಾವಧಿ ಮುಂತಾದವುಗಳಲ್ಲಿ ಗಮನಾರ್ಹ ಸಾಧನೆಯ ಬಗ್ಗೆ ಅಂಕಿ-ಅಂಶಗಳು ಹೇಳಿದರೂ, ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಭಾರತದಲ್ಲಿ ಅತ್ಯಧಿಕವಾಗಿದೆ. ನೀರು ಮತ್ತು ನಿರ್ಮಲೀಕರಣ ಸಮಸ್ಯೆಗಳು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಅಂಶಗಳಾಗಿವೆ ಎಂದು ಇತ್ತೀಚಿನ ಸಂಶೋಧನೆ ದೃಢಪಡಿಸಿದೆ. 1980ರಿಂದ ರಾಷ್ಟ್ರೀಯ ನೈರ್ಮಲ್ಯ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದರೂ, ಎಲ್ಲರಿಗೂ ಸಮರ್ಪಕ ಮತ್ತು ಸಮಾನ ನೈರ್ಮಲ್ಯೀಕರಣದ ಉಪಲಬ್ಧತೆ ಮತ್ತು ಬಯಲುಶೌಚವನ್ನು 2030ರೊಳಗೆ ಅಂತ್ಯಗೊಳಿಸುವ ಉದ್ದೇಶದ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ) 6.2ನ್ನು ಮುಟ್ಟುವುದು ಅಷ್ಟೊಂದು ಸುಲಭವಿಲ್ಲ ಎನ್ನುವುದನ್ನು ಸರಕಾರ ಬಿಡುಗಡೆಗೊಳಿಸಿದ ಎನ್‌ಎಫ್‌ಎಚ್‌ಎಸ್-5 ಅಂಕಿ-ಅಂಶದಲ್ಲಿ ಉಲ್ಲೇಖಿಸಲಾಗಿದೆ. ಸಮೀಕ್ಷೆಗೆ ಒಳಪಟ್ಟ ಯಾವುದೇ ರಾಜ್ಯವೂ ಸೂಕ್ತ ಶುಚೀಕರಣ ವ್ಯವಸ್ಥೆಯನ್ನು ಶೇ.100 ಬಳಸಿಕೊಂಡಿಲ್ಲ. ಗುರಿಯನ್ನು ತಲುಪಬೇಕಿದ್ದರೆ ಲಡಾಖ್ ಮತ್ತು ಬಿಹಾರಗಳು ಪರ್ಯಾಪ್ತ ಶುಚೀಕರಣ ಬಳಕೆಯನ್ನು ಶೇ.50ಕ್ಕೂ ಅಧಿಕ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬೇಕು. ಉಳಿದ ರಾಜ್ಯಗಳೂ ಶೌಚಾಲಯ ಬಳಕೆಯನ್ನು ಶೇ.10-35 ಅಂಶಗಳಷ್ಟು ವೃದ್ಧಿಸಿಕೊಳ್ಳಬೇಕಿದೆ.

ಮಿಜೋರಾಂ, ಕೇರಳ ಮತ್ತು ಲಕ್ಷದ್ವೀಪಗಳು ಮಾತ್ರ 2030ರ ವೇಳೆ ಶೇ.100 ಗುರಿ ತಲುಪಲು ನಿಕಟವಾಗಿರುವ 3 ರಾಜ್ಯಗಳಾಗಿವೆ. ಭಾರತ ತನ್ನ ಗುರಿ ಸಾಧಿಸುವುದನ್ನು ಖಾತರಿಪಡಿಸಲು ಮುಂದಿನ ದಶಕದಲ್ಲಿ ಏನು ಮಾಡಬೇಕು? ಎಂಬುದು ಇಲ್ಲಿರುವ ಪ್ರಮುಖ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಪ್ರಥಮ ಹೆಜ್ಜೆಯೆಂದರೆ, ದೇಶದ ಸುಮಾರು ಶೇ.65 ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದೆ ಎಂಬುದನ್ನು ಅರಿತುಕೊಳ್ಳುವುದು. ಭಾರತದಾದ್ಯಂತ ಗ್ರಾಮೀಣ ಮತ್ತು ನಗರಪ್ರದೇಶದ ಕುಟುಂಬಗಳ ನೈರ್ಮಲ್ಯ ವಿಚಾರಗಳಲ್ಲಿ ಭಿನ್ನತೆಗಳಿವೆ. ನಗರಗಳ ಸಮಸ್ಯೆಯೇ ಬೇರೆ, ಗ್ರಾಮೀಣ ಪ್ರದೇಶದ ಸಮಸ್ಯೆಗಳೇ ಬೇರೆ. ಲಡಾಖ್‌ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ಬಳಕೆ ಮಾಡುವ ಕುಟುಂಬಗಳ ಸಂಖ್ಯೆ ನಗರಪ್ರದೇಶಕ್ಕೆ ಹೋಲಿಸಿದರೆ ಸುಮಾರು ಶೇ.40ರಷ್ಟು ಕಡಿಮೆಯಿದೆ. ನಂತರದ ಸ್ಥಾನದಲ್ಲಿ ಗುಜರಾತ್, ಬಿಹಾರ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳಿವೆ. ಹಲವು ದಶಕಗಳಿಂದಲೂ ನಗರಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಶುಚಿತ್ವ ವ್ಯವಸ್ಥೆ ಹಿಂದುಳಿದಿದೆ. 2014ರಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭವಾದ ಬಳಿಕ, ಗ್ರಾಮೀಣ ಪ್ರದೇಶದಲ್ಲಿ ಎದುರಾದ ಪ್ರಮುಖ ಸವಾಲೆಂದರೆ ಶೌಚಾಲಯದ ಬಳಕೆ ಹೆಚ್ಚಿಸುವ ಮೂಲಕ ಬಯಲು ಶೌಚ ಪ್ರಕ್ರಿಯೆಯನ್ನು ಅಂತ್ಯಗೊಳಿಸುವುದು. ಆದರೆ, ಗ್ರಾಮೀಣ ಜನತೆ ಶೌಚಾಲಯ ಬಳಕೆಯ ಬದಲು ಬಯಲು ಶೌಚಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಕಂಡುಬಂದಿದೆ.

ಶೌಚಾಲಯದ ಕಳಪೆ ಗುಣಮಟ್ಟ, ಸಾಮಾಜಿಕ ವಾಡಿಕೆ, ಶೌಚಾಲಯ ಬಳಕೆಗಿಂತ ಬಯಲು ಶೌಚ ಆರೋಗ್ಯಕ್ಕೆ ಒಳಿತು ಎಂಬ ಜನಸಾಮಾನ್ಯರ ನಂಬಿಕೆ ಇದಕ್ಕೆ ಕಾರಣವಾಗಿದೆ. ಮನೆಯ ಆವರಣದಲ್ಲಿ ಶೌಚಾಲಯ ಹೊಂದುವುದರ ಬಗ್ಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಮಡಿವಂತಿಕೆಯಿದೆ. ಗ್ರಾಮೀಣ ಪ್ರದೇಶದಲ್ಲಿ ಗೃಹ ಶೌಚಾಲಯಕ್ಕೆ ಬೇಕಾಗುವ ನೀರು ಬಯಲು ಶೌಚಾಲಯಕ್ಕೆ ಬೇಕಾಗಿಲ್ಲ. ಎಷ್ಟೋ ಶೌಚಾಲಯಗಳು ನೀರಿನ ಕೊರತೆಯಿಂದ ಮುಚ್ಚಿ ಹೋದ ಉದಾಹರಣೆಗಳಿವೆ. ಗಬ್ಬೆದ್ದು ಇನ್ನಷ್ಟು ಮಾಲಿನ್ಯಕ್ಕೆ ಕಾರಣವಾದ ಶೌಚಾಲಯಗಳೂ ಇವೆ. ಹಾಗೆಯೇ ನಗರಗಳ ಅತಿ ದೊಡ್ಡ ಸಮಸ್ಯೆ ಘನ ತ್ಯಾಜ್ಯ ನಿರ್ವಹಣೆ. ಅತ್ಯಧಿಕ ಘನ ತ್ಯಾಜ್ಯ ಉತ್ಪಾದನೆಯಾಗುವ ದೇಶಗಳಲ್ಲಿ ಭಾರತವು 3ನೇ ಸ್ಥಾನದಲ್ಲಿದೆ( ಅಮೆರಿಕ ಪ್ರಥಮ, ಚೀನಾ ದ್ವಿತೀಯ). ಭಾರತದಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯಗಳಲ್ಲಿ ಶೇ.70 ಮಾತ್ರ ಸಂಗ್ರಹವಾಗುತ್ತದೆ ಮತ್ತು ಸಂಗ್ರಹವಾದ ತ್ಯಾಜ್ಯದ ಶೇ.80 ಪ್ರಮಾಣವನ್ನು ತ್ಯಾಜ್ಯಗುಂಡಿಗೆ ಎಸೆಯಲಾಗುತ್ತದೆ. ಹೀಗೆ ಸೂಕ್ತವಾಗಿ ನಿರ್ವಹಿಸದ ತ್ಯಾಜ್ಯದ ಅಂಶ ಭೂಮಿಗೆ ಅಥವಾ ನೀರಿಗೆ ಸೇರಿಕೊಳ್ಳುತ್ತದೆ, ಇಲ್ಲವೇ ತ್ಯಾಜ್ಯ ಸುಟ್ಟಾಗ ಹೊಗೆಯಿಂದ ವಾಯುಮಾಲಿನ್ಯ ಉಂಟಾಗುತ್ತದೆ.

ನಗರ ಪ್ರದೇಶದಲ್ಲಿ ಪೈಪ್‌ಗಳ ಮೂಲಕ ಸುಲಭದಲ್ಲಿ ನೀರು ಲಭ್ಯವಾಗುತ್ತದೆ. ಅವರಿಗೆ ಗೃಹ ಶೌಚಾಲಯ ಅನಿವಾರ್ಯ. ಶೌಚಾಲಯ ಬಳಸಿ ಒಮ್ಮೆ ಪೈಪ್ ಫ್ಲಶ್ ಮಾಡಿದರೆ ಸುಮಾರು ಅರ್ಧದಿಂದ 1 ಬಕೆಟ್ ನೀರು ಖಾಲಿಯಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಬಯಲು ಶೌಚಕ್ಕೆ ಒಂದು ಮಗ್ ನೀರು ಸಾಕು. ಇದರಿಂದ ನೀರಿನ ಸಮಸ್ಯೆ ಎದುರಿಸುವ ಗ್ರಾಮೀಣ ಕುಟುಂಬಗಳಿಗೆ ಬಯಲು ಶೌಚ ಅನುಕೂಲ ಎಂಬ ಭಾವನೆಯಿದೆ. ನಗರ ಪ್ರದೇಶದ ಸವಾಲು, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಸವಾಲು ಬಯಲು ಶೌಚ. ಎರಡೂ ವಿಭಾಗಗಳಿಗೂ ವಿಭಿನ್ನ ಪರಿಹಾರದ ಅಗತ್ಯವಿದೆ. ಘನ-ದ್ರವ ತ್ಯಾಜ್ಯದ ಉತ್ತಮ ನಿರ್ವಹಣೆ ಬಗ್ಗೆ ನಗರವಾಸಿಗಳಿಗೆ, ಬಯಲು ಶೌಚದ ಸಮಸ್ಯೆ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ. ಅತ್ಯಾಧುನಿಕ, ಕಡಿಮೆ ವೆಚ್ಚದ, ಕಡಿಮೆ ನೀರು ಬಳಕೆಯಾಗುವ ನೈರ್ಮಲ್ಯೀಕರಣ ತಂತ್ರಜ್ಞಾನವು ಗ್ರಾಮೀಣ ಜನತೆಯ ನೀರಿನ ಸಮಸ್ಯೆಯ ಆತಂಕವನ್ನು ದೂರಗೊಳಿಸಬಹುದು. ಭಾರತದಲ್ಲಿ ಗ್ರಾಮೀಣ ಮತ್ತು ನಗರಪ್ರದೇಶದಲ್ಲಿ ಸಾರ್ವತ್ರಿಕ ನೈರ್ಮಲ್ಯೀಕರಣ ವ್ಯವಸ್ಥೆಯ ಗುರಿ ಪೂರ್ಣಗೊಳ್ಳಲು ಇನ್ನೂ ಸುದೀರ್ಘ ಹಾದಿ ಕ್ರಮಿಸಬೇಕಿರುವುದರಿಂದ, ಎರಡೂ ವಲಯಗಳು ಎದುರಿಸುವ ವಿಭಿನ್ನ ಸವಾಲುಗಳನ್ನು ಗುರುತಿಸುವುದು ಭಾರತವನ್ನು ಬಯಲುಶೌಚ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News