ಹೊಸದಿಲ್ಲಿ: ಕೇಂದ್ರ ಸರಕಾರದ ವಿರುದ್ಧ ಸಂಸತ್‌ ನಲ್ಲಿ ಮೊಳಗಿದ ʼಬೇಕೇ ಬೇಕು ನ್ಯಾಯ ಬೇಕು" ಕನ್ನಡ ಘೋಷಣೆ

Update: 2021-07-28 11:48 GMT

ಹೊಸದಿಲ್ಲಿ : ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ಹಾಗೂ ಪೆಗಾಸಸ್ ಸ್ಪೈವೇರ್ ಮೂಲಕ ನಡೆಸಲಾಗಿದೆಯೆನ್ನಲಾದ ಬೇಹುಗಾರಿಕೆ ಕುರಿತು ಸರಕಾರದಿಂದ ವಿವರಣೆ ಕೋರಿ ಮಂಗಳವಾರ ವಿಪಕ್ಷ ಸಂಸದರು ಪಕ್ಷಬೇಧ ಮರೆತು ಸಂಸತ್ತಿನಲ್ಲಿ ಸರಕಾರದ ಮೇಲೆ ಒತ್ತಡ ಹೇರುವ ಸಂದರ್ಭ ತಮಿಳು ಹಾಗೂ ಕನ್ನಡದಲ್ಲಿ ಘೋಷಣೆ ಕೂಗಿದ್ದು ವಿಶೇಷವಾಗಿತ್ತು.

'ವೇಂಡುಂ, ವೇಂಡುಂ ವಿವಾದಮ್ ವೇಂಡುಂ' (ನಮಗೆ ಚರ್ಚೆ ಬೇಕು) ಎಂಬ ತಮಿಳು ಘೋಷಣೆಗಳು ತಮಿಳುನಾಡು ಸಂಸದರಿಂದ ಕೇಳಿ ಬಂದರೆ ಕರ್ನಾಟಕದ ಸಂಸದರ ಸಹಿತ ಹಲವು ರಾಜ್ಯಸಭಾ ಸದಸ್ಯರು ಕನ್ನಡದಲ್ಲಿ 'ಬೇಕು ಬೇಕು ನ್ಯಾಯ ಬೇಕು' ಎಂಬ ಘೋಷಣೆಗಳನ್ನು ಕೂಗಿದರು.

ಸಾಮಾನ್ಯವಾಗಿ ಸಂಸತ್ತಿನಲ್ಲಿ ಸದಸ್ಯರು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಘೋಷಣೆ ಕೂಗುತ್ತಿದ್ದರೆ ಈ ಬಾರಿ ಮೊದಲ ಬಾರಿ ರಾಜ್ಯಸಭೆಯಲ್ಲಿ ಬಹುತೇಕ ಎಲ್ಲಾ ವಿಪಕ್ಷ ಸದಸ್ಯರೂ "ವೇಂಡುಂ, ವಿವಾದಂ ವೇಂಡುಂ'' ಎಂಬ ಘೋಷಣೆ ಕೂಗಿದರು.

ಅತ್ತ ಲೋಕಸಭೆಯಲ್ಲಿ ಪಂಜಾಬ್‍ನ ಕಾಂಗ್ರೆಸ್ ಸಂಸದ ಜಸ್ಬೀರ್ ಸಿಂಗ್ ಗಿಲ್ ಅವರು  ತಮಿಳಿನಲ್ಲಿ `ವೇಂಡುಂ... ವೇಂಡುಂ' ಎಂದಾಗ ಇತರ ವಿಪಕ್ಷ ಸದಸ್ಯರು "ನೀಧಿ ವೇಂಡುಂ'' (ನಮಗೆ ನ್ಯಾಯ ಬೇಕು) ಎಂಬ ಘೋಷಣೆ ಕೂಗಿದ್ದರು. ಪಶ್ಚಿಮ ಬಂಗಾಳದ ಸಂಸದರು ಬಂಗಾಳಿ ಭಾಷೆಯಲ್ಲಿ `ಖೇಲಾ ಹೋಬೆ' (ಆಟ ಮುಂದುವರಿದಿದೆ) ಎಂಬ ಘೋಷಣೆ ಕೂಗಿದರು.

ರಾಜ್ಯಸಭಾ  ಉಪಸಭಾಪತಿ ಹರಿವಂಶ್ ಅವರು ಘೋಷಣೆ ಕೂಗುತ್ತಿರುವ ಸಂಸದರನ್ನು ಸಮಾಧಾನಿಸಲು ಯತ್ನಿಸಿದರೂ ವಿಪಕ್ಷ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಪ್ರಾದೇಶಿಕ ಭಾಷೆಯಲ್ಲಿ ಘೋಷಣೆ ಮೊಳಗಿಸುತ್ತಲೇ ಇದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News