ಅನುಸರಣೆಯ ಅಫಿಡವಿಟ್ ಸಲ್ಲಿಸಲು ಟ್ವಿಟರ್‌ ಗೆ ಕೊನೆಯ ಅವಕಾಶ ನೀಡಿದ ದಿಲ್ಲಿ ಹೈಕೋರ್ಟ್

Update: 2021-07-28 15:52 GMT

ಹೊಸದಿಲ್ಲಿ, ಜು. 28: ಮಾಹಿತಿ ತಂತ್ರಜ್ಞಾನದ ನಿಯಮಗಳ ಅನುಸರಣೆಯನ್ನು ಟ್ವಿಟರ್‌ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಬುಧವಾರ ಪ್ರತಿಪಾದಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯ, ಒಂದು ವಾರದಲ್ಲಿ ತನ್ನ ಅನುಸರಣೆ ತೋರಿಸುವ ಉತ್ತಮ ಅಫಿಡಾವಿಟ್ ಅನ್ನು ಸಲ್ಲಿಸಲು ಕೊನೆಯ ಅವಕಾಶವನ್ನು ಟ್ವಿಟರ್‌ ಗೆ ನೀಡಿದೆ. 

ನ್ಯಾಯಮೂರ್ತಿ ರೇಖಾ ಪಳ್ಳಿ ಅವರ ಏಕ ಸದಸ್ಯ ಪೀಠ, ಟ್ವಿಟರ್‌ ತನ್ನ ಮುಖ್ಯ ಅನುಸರಣಾ ಅಧಿಕಾರಿ ಹಾಗೂ ನಿವಾಸಿ ಅಹವಾಲು ಅಧಿಕಾರಿಗಳಾಗಿ ನೇಮಕ ಮಾಡಿರುವ ವ್ಯಕ್ತಿಯ ವಿವರಗಳನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದೆ. ನೋಡಲ್ ಸಂಪರ್ಕ ಅಧಿಕಾರಿಯನ್ನು ಇದುವರೆಗೆ ನೇಮಕ ಮಾಡದಿರುವುದಕ್ಕೆ ಕಾರಣಗಳನ್ನು ಹಾಗೂ ಅವರನ್ನು ಯಾವಾಗ ನೇಮಕ ಮಾಡಲಾಗುತ್ತದೆ ಎಂಬ ಬಗ್ಗೆ ಅಫಿಡವಿಟ್ ಒಳಗೊಳ್ಳಬೇಕು ಎಂದು ತಿಳಿಸಿದೆ. 

ಟ್ವಿಟರ್‌ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಸಾಜನ್ ಪೂವಯ್ಯ ಅವರು, ಸ್ಪಷ್ಟ ಪದಗಳ ಪಾರದರ್ಶಕ ಅಫಿಡವಿಟ್ ಅನ್ನು ಕಂಪೆನಿ ಸಲ್ಲಿಸಲಿದೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಟ್ವಿಟರ್‌ ಪ್ರತ್ಯೇಕ ಪತ್ರ ಬರೆದಿದ್ದು, ನೇಮಕಾತಿ ಬಗ್ಗೆ ಮಾಹಿತಿ ನೀಡಿದೆ. ಆದರೆ, ಸಚಿವಾಲಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಪೂವಯ್ಯ ನ್ಯಾಯಾಲಯಕ್ಕೆ ತಿಳಿಸಿದರು. 

ನ್ಯಾಯಾಲಯದ ಈ ಹಿಂದಿನ ನಿರ್ದೇಶನದಂತೆ ಐಟಿ ನಿಯಮ 2021ರಲ್ಲಿ ಕಡ್ಡಾಯಗೊಳಿಸಿದಂತೆ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿ ಟ್ವಿಟರ್‌ ಜುಲೈ 19ರಂದು ಅಫಿಡವಿಟ್ ಸಲ್ಲಿಸಿತ್ತು. ನೇಮಕಾತಿಯ ಔಪಚಾರಿಕತೆ ಪೂರೈಸಲು ಸಾಧ್ಯವಾಗದೇ ಇರುವುದರಿಂದ ನೋಡಲ್ ಸಂಪರ್ಕ ಅಧಿಕಾರಿ ಹುದ್ದೆಗೆ ನೇಮಕವಾದ ವ್ಯಕ್ತಿಯಿಂದ ಮೌಖಿಕ ದೃಢೀಕರಣ ಸ್ವೀಕರಿಸಲಾಗಿದೆ ಎಂದು ಟ್ವಿಟರ್‌ ಜುಲೈ 27ರಂದು ಸಲ್ಲಿಸಿದ ಮನವಿಯಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News