ದ್ವಿತೀಯ ಟ್ವೆಂಟಿ-20: ಶ್ರೀಲಂಕಾ ವಿರುದ್ದ ಭಾರತ 132/5

Update: 2021-07-28 16:26 GMT

ಕೊಲಂಬೊ: ಆಫ್ ಸ್ಪಿನ್ನರ್ ಅಕಿಲ ದನಂಜಯ ನೇತೃತ್ವದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಶ್ರೀಲಂಕಾ ಬೌಲರ್ ಗಳು  ಭಾರತ ಕ್ರಿಕೆಟ್ ತಂಡವನ್ನು ಬುಧವಾರ ನಡೆದ 2ನೇ ಟ್ವೆಂಟಿ-20 ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 132 ರನ್ ಗೆ ನಿಯಂತ್ರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತದ ಪರ ನಾಯಕ ಶಿಖರ್ ಧವನ್ (40 ರನ್, 42 ಎಸೆತ, 5 ಬೌಂಡರಿ) ಸರ್ವಾಧಿಕ ಸ್ಕೋರ್ ಗಳಿಸಿದರು. ದೇವದತ್ತ ಪಡಿಕ್ಕಲ್ 29, ಋತುರಾಜ್ ಗಾಯಕ್ವಾಡ್ 21 ಹಾಗೂ ಭುವನೇಶ್ವರ ಕುಮಾರ್ ಔಟಾಗದೆ 13 ರನ್ ಗಳಿಸಿದರು. ಸಂಜು ಸ್ಯಾಮ್ಸನ್(7) ಹಾಗೂ ನಿತೀಶ್ ರಾಣಾ(9)ವಿಫಲರಾದರು.

ಧವನ್ ಹಾಗೂ ಗಾಯಕ್ವಾಡ್ ಮೊದಲ ವಿಕೆಟ್ ಗೆ 49 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಆದರೆ, ಯುವ ಆಟಗಾರರು ಲಂಕಾದ ಬಿಗಿ ಬೌಲಿಂಗ್ ಎದುರು ಮಂಕಾದರು.

ಶ್ರೀಲಂಕಾದ ಪರ 8 ಬೌಲರ್ ಗಳು ಬೌಲಿಂಗ್ ದಾಳಿ ನಡೆಸಿದ್ದು ಈ ಪೈಕಿ ಅಕಿಲ ದನಂಜಯ(2-29)ಯಶಸ್ವಿ ಬೌಲರ್ ಎನಿಸಿಕೊಂಡರು.

ಪಾಂಡ್ಯ ಸಹೋದರರು ಸರಣಿಯಿಂದ ಹೊರಗುಳಿದ ಕಾರಣ ಧವನ್ ನೇತೃತ್ವದ ಭಾರತವು ಐಪಿಎಲ್ ನಲ್ಲಿ ಮಿಂಚಿದ್ದ ಋತುರಾಜ್ ಗಾಯಕ್ವಾಡ್, ದೇವದತ್ತ ಪಡಿಕ್ಕಲ್, ನಿತೀಶ್ ರಾಣಾ ಹಾಗೂ ಚೇತನ್ ಸಕಾರಿಯಾಗೆ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ನೀಡಿತು. ಕೇವಲ ಐವರು ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಗಳೊಂದಿಗೆ ಆಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News