ಟ್ಯುನೀಷಿಯಾದಲ್ಲಿ ಮುಂದುವರಿದ ರಾಜಕೀಯ ಗೊಂದಲ : ಸಂಸತ್ತು ಅಮಾನತು

Update: 2021-07-29 15:59 GMT
photo : twitter/@doniaboussetta1

ಟ್ಯುನಿಸ್, ಜು.29: ಪ್ರಧಾನಿಯನ್ನು ವಜಾಗೊಳಿಸಿ, ಸಂಸತ್ತನ್ನು ಅಮಾನತಿನಲ್ಲಿರಿಸಿ ಕಾರ್ಯನಿರ್ವಹಣಾಧಿಕಾರ ವಹಿಸಿಕೊಂಡಿರುವ ಟ್ಯುನೀಷಿಯಾದ ಅಧ್ಯಕ್ಷ ಕಯಿಸ್ ಸಯೀದ್ ಇನ್ನೂ ಹಲವು ಅಧಿಕಾರಿಗಳನ್ನು ವಜಾಗೊಳಿಸುವುದರೊಂದಿಗೆ ದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತಷ್ಟು ಬಿಗಡಾಯಿಸಿದೆ ಎಂದು ವರದಿಯಾಗಿದೆ.

 ರವಿವಾರ ಸಂಸತ್ತನ್ನು ಅಮಾನತಿನಲ್ಲಿರಿಸಿ ಪ್ರಧಾನಿ ಹಿಚೆಮ್ ಮೆಷಿಚಿಯನ್ನು ವಜಾಗೊಳಿಸಿದ್ದ ಅಧ್ಯಕ್ಷ ಸಯೀದ್, ಸೋಮವಾರ ರಕ್ಷಣಾ ಸಚಿವ, ಸಾಮಾಜಿಕ ನ್ಯಾಯ ಸಚಿವರನ್ನು ವಜಾಗೊಳಿಸಿದ್ದರು. ಇದೀಗ ಮಂಗಳವಾರ ಸೇನೆಯ ಮುಖ್ಯ ಅಭಿಯೋಜಕರು, ರಾಷ್ಟ್ರೀಯ ಟಿವಿ ವಾಹಿನಿಯ ಸಿಇಒ ಸಹಿತ ಇನ್ನೂ ಹಲವು ಉನ್ನತ ಅಧಿಕಾರಿಗಳ ವಜಾಕ್ಕೆ ಆದೇಶಿಸಿದ್ದಾರೆ. ಜೊತೆಗೆ ಸಂಸದರ ಅಧಿಕಾರ ಕಿತ್ತುಕೊಂಡು ನ್ಯಾಯಾಂಗ ಅಧಿಕಾರವನ್ನೂ ತನ್ನ ಬಳಿ ಇರಿಸಿಕೊಂಡಿದ್ದಾರೆ. ಅಲ್ಲದೆ, 2019ರ ಚುನಾವಣೆಗೂ ಮುನ್ನ ವಿದೇಶಿ ದೇಣಿಗೆ ಪಡೆದಿರುವ ಆರೋಪದ ಬಗ್ಗೆ 3 ರಾಜಕೀಯ ಪಕ್ಷಗಳ ವಿರುದ್ಧ ತನಿಖೆಗೂ ಆದೇಶಿಸಿದ್ದಾರೆ. 2019ರ ಸಂಸದೀಯ ಚುನಾವಣೆಯಲ್ಲಿ ಕಯಿಸ್ ಭರ್ಜರಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ.

ಈ ಮಧ್ಯೆ, ಸಂಸತ್ತನ್ನು 30 ದಿನಕ್ಕಿಂತ ಹೆಚ್ಚು ಸಮಯ ಅಮಾನತಿನಲ್ಲಿರಿಸುವುದು ಕಾನೂನುಬಾಹಿರ ಎಂದು ಎಚ್ಚರಿಸಿರುವ ಪ್ರಮುಖ ಸಾಮಾಜಿಕ ಸಂಘಟನೆಗಳು, ಅವಧಿಬದ್ಧ ರಾಜಕೀಯ ಉಪಕ್ರಮಗಳಿಗೆ ಆಗ್ರಹಿಸಿದ್ದಾರೆ. ಟ್ಯುನೀಷಿಯಾದ ಸುಮಾರು 5 ಬಿಲಿಯನ್ ಡಾಲರ್ ಮೊತ್ತವನ್ನು ಲೂಟಿ ಮಾಡಲಾಗಿದ್ದು ಇದರಲ್ಲಿ ಶಾಮೀಲಾಗಿರುವ ಆರೋಪಿಗಳ ಪಟ್ಟಿ ತನ್ನಲ್ಲಿದೆ. ಇವರಲ್ಲಿ ಹೆಚ್ಚಿನವರು ರಾಜಕಾರಣಿಗಳು ಹಾಗೂ ಸಂಸದರು. ತನ್ನ ನಡೆ ಸಂವಿಧಾನದ ವ್ಯಾಪ್ತಿಯೊಳಗಿದೆ ಎಂದು ಅಧ್ಯಕ್ಷರು ಹೇಳಿರುವುದಾಗಿ ಸ್ಥಳೀಯ ಪತ್ರಕರ್ತ ಸ್ಯಾಮ್ ಕಿಂಬಲ್‌ರನ್ನು ಉಲ್ಲೇಖಿಸಿ ‘ಅಲ್ ಜಝೀರಾ’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News