ತಿಂಗಳು ಕಳೆದರೂ ಜಾರಿಯಾಗದ ಆದೇಶ

Update: 2021-08-02 06:38 GMT
photo : PTI

► ನಿತ್ಯ ಕಚೇರಿಗಳಿಗೆ ಅಲೆಯುತ್ತಿರುವ ಸಂತ್ರಸ್ತ ಕುಟುಂಬಗಳು

ಮೈಸೂರು, ಆ.1: ಕೋವಿಡ್ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿ ತಿಂಗಳುಗಳು ಕಳೆದರೂ ಆದೇಶ ಮಾತ್ರ ಜಾರಿಯಾಗದೆ ಇರುವುದು ಕೋವಿಡ್‌ನಿಂದ ಮೃತಪಟ್ಟ ಬಡ ಕುಟುಂಬಗಳ ಆತಂಕಕ್ಕೆ ಕಾರಣವಾಗಿದ್ದು, ನೊಂದ ಕುಟುಂಬಗಳು ಪರಿಹಾರದ ಹಣಕ್ಕಾಗಿ ಪ್ರತಿ ನಿತ್ಯ ಕಚೇರಿಗಳನ್ನು ಅಲೆಯುವಂತಾಗಿದೆ.

ಕೋವಿಡ್-19ಕ್ಕೆ ತುತ್ತಾಗಿ ಮೃತ ಪಟ್ಟರೆ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಓರ್ವ ಸದಸ್ಯರಿಗೆ ಒಂದು ಲಕ್ಷ ರೂ. ನೀಡುವುದಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೂ.14 ರಂದೇ ಘೋಷಣೆ ಮಾಡಿದ್ದರು. ಒಂದೂವರೆಗೆ ತಿಂಗಳು ಕಳೆದರೂ ಈ ಯೋಜನೆ ಜಾರಿಯಾಗದೆ ಇರುವುದು ಬಡಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದರು. ಆದರೆ ಯಾವ ಇಲಾಖೆಯಿಂದ ಪಡೆಯಬೇಕು ಎಂಬ ಮಾಹಿತಿ ನೀಡದಿರುವುದು ಮೃತ ಪಟ್ಟ ಕುಟುಂಬಗಳ ಗೊಂದಲಕ್ಕೆ ಕಾರಣವಾಗಿದೆ. ಅನೇಕ ಕುಟುಂಬಗಳಲ್ಲಿ ಮನೆಗೆ ಆಧಾರವಾಗಿದ್ದ ವ್ಯಕ್ತಿಯೇ ಮೃತ ಪಟ್ಟಿದ್ದು, ಅವರ ಕುಟುಂಬ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದ್ದು, ಇತ್ತ ಪರಿಹಾರವೂ ಇಲ್ಲದೆ ಕೆಲಸವೂ ಇಲ್ಲದೆ ಬೀದಿಗೆ ಬೀಳುವಂತಾಗಿದೆ.

ಸರಕಾರ ಘೋಷಿಸಿದ ಹಣ ಎಲ್ಲಿಂದ ಪಡೆಯಬೇಕು ಎಂಬ ಮಾಹಿತಿ ಇಲ್ಲದೆ ಗ್ರಾಮ ಸಹಾಯಕರು, ಗ್ರಾಪಂ ಕಚೇರಿ, ತಾಲೂಕು ಕಚೇರಿಗಳನ್ನು ಅಲೆದು ಅಲೆದು ನೊಂದ ಕುಟುಂಬಗಳು ಇದರ ಕನಸನ್ನೇ ಬಿಟ್ಟಂತಾಗಿದೆ.

ತಾಲೂಕು ಕಚೇರಿಗಳಿಗೆ ತೆರಳಿ ಪರಿಹಾರದ ಹಣಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೆಕು ಎಂದು ಕೇಳಿದರೆ ಅಧಿಕಾರಿಗಳು ಸಹ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಮಗೆ ಇನ್ನೂ ಆದೇಶ ಬಂದಿಲ್ಲ, ಬಂದ ನಂತರ ಎಲ್ಲಿಗೆ ಅರ್ಜಿ ನೀಡಬೇಕು ಎಂದು ತಿಳಿಸುವುದಾಗಿ ನೊಂದ ಕುಟುಂಬಗಳನ್ನು ಅಲೆಸುತ್ತಿದ್ದಾರೆ. ಮೊದಲೇ ಕುಟುಂಬದ ಆಧಾರ ಸ್ಥಂಭವನ್ನು ಕಳೆದುಕೊಂಡ ದುಖಃ ದಲ್ಲಿರುವ ಕುಟುಂಬಗಳು ಪರಿಹಾರವು ಇಲ್ಲ, ಇತ್ತ ಸರಿಯಾದ ಮಾಹಿತಿಯೂ ಇಲ್ಲದೆ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿವೆ.

ತಾಲೂಕು ಕಚೇರಿಗೆ ಹೋಗಿ ಸಂಬಂಧಪಟ್ಟವರನ್ನು ಕೇಳಿದರೆ. ಎಸ್ಸಿ, ಎಸ್ಟಿಗಳಾದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಹೋಗಿ ಎಂದು ಹೇಳಿದರೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಲವು ನಿರ್ಬಂಧಗಳನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆನ್ನಲಾಗಿದೆ. ಮುಖ್ಯಮಂತ್ರಿಯವರು ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರಲ್ಲ ಎಂದರೆ. ನಮಗೆ ಯಾವುದೇ ಆದೇಶ ಬಂದಿಲ್ಲ. ಬಂದ ನಂತರ ಬನ್ನಿ ಎಂಬ ಉತ್ತರವನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀಡುತ್ತಾರೆ ಎಂದು ಸಂತ್ರಸ್ತ ಕುಟುಂಬವೊಂದು ‘‘ವಾರ್ತಾಭಾರತಿ’’ಗೆ ತಿಳಿಸಿದರು.

ಬಿಜೆಪಿಯವರದು ಬರೀ ಘೋಷಣೆ ಮಾಡುವ ಡುಬಾಕ್ ಸರಕಾರ: ಲಕ್ಷ್ಮಣ್

ಕೊರೋನಾದಿಂದ ಮೃತ ಪಟ್ಟ ಬಿಪಿಎಲ್ ಕುಟುಂಬದವರಿಗೆ ಒಂದು ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬರೀ ಘೋಷಣೆ ಮಾಡಿ ಹೊರಟು ಹೋದರು ಹೊರತೂ ಜಾರಿಗೆ ತರಲಿಲ್ಲ. ಬಿಜೆಪಿಯವರದು ಬರೀ ಡುಬಾಕ್ ಘೋಷಣೆಗಳೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.ಇನ್ನು ಒಂದು ವಾರದಲ್ಲಿ ಇವರು ಘೋಷಿಸಿದ ಪರಿಹಾರ ತಲುಪದೆ ಇದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗಾಯದ ಮೇಲೆ ಬರೆ ಎಳೆದಂತೆ ಮೊದಲೇ ಕೊರೋನದಿಂದ ತತ್ತರಿಸಿರುವ ಕುಟುಂಬಗಳಿಗೆ ಪರಿಹಾರ ಘೋಷಿಸದ ಸರಕಾರ ತಕ್ಷಣವೇ ಜಾರಿ ಮಾಡದೆ ವಿಳಂಬ ಮಾಡಿರುವುದು ದುರಂತ. ಸಂಕಷ್ಟದ ಸಮಯದಲ್ಲಿ ನೊಂದ ಕುಟುಂಬದವರ ಪರ ನಿಲ್ಲಬೇಕಾದುದ್ದು ಸರಕಾರದ ಕೆಲಸ.

ಚೋರನಹಳ್ಳಿ ಶಿವಣ್ಣ , ದಸಂಸ ಮುಖಂಡ

ನಮ್ಮದು ಬಡಕುಟುಂಬ ನಾನು ಫ್ಯಾಕ್ಟರಿಗೆ ಹೋಗುತ್ತಿದ್ದೇನೆ. ಮನೆಯಲ್ಲಿ ನಾನು ನಮ್ಮ ತಾಯಿ ಮತ್ತು ಮದುವೆಯಾಗದ ಅಕ್ಕ ಇದ್ದೇವೆ. ನಮ್ಮ ತಾಯಿ ಕೊರೋನಾಗೆ ತುತ್ತಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಜೂ.2ರಂದು ಮೃತಪಟ್ಟರು. ನಾವು ಬಿಪಿಎಲ್ ಕಾರ್ಡ್ ಹೊಂದಿದ್ದು ಮುಖ್ಯ ಮಂತ್ರಿಯವರ ಪರಿಹಾರ ಹಣ ಪಡೆಯಲು ಕಳೆದ ಒಂದು ತಿಂಗಳಿನಿಂದ ಕಚೇರಿಗಳನ್ನು ಅಲೆಯುತ್ತಿದ್ದೇನೆ. ಆದರೆ ಎಲ್ಲಿ ಪಡೆಯಬೇಕು ಎಂಬುದೇ ತಿಳಿಯುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಕೇಳಿದರೆ ನಮಗೆ ಆದೇಶ ಬಂದಿಲ್ಲ ಎಂದು ಹೇಳುತ್ತಿದ್ದಾರೆ.

 ಕೃಷ್ಣಕುಮಾರ್ ಎನ್.ಕೆ., ನಂಜನಗೂಡು

ಕೋವಿಡ್‌ನಿಂದ ಮೃತ ಪಟ್ಟ ಬಿಪಿಎಲ್ ಕುಟುಂಬದವರಿಗೆ ನೀಡಬೇಕಾದ ಪರಿಹಾರದ ಸರಕಾರದ ಸುತ್ತೋಲೆ ನಮಗೆ ಶನಿವಾರ ತಲುಪಿದ್ದು, ಈಗಾಗಲೆ ಆದೇಶ ಪ್ರತಿಗೆ ಸಹಿ ಮಾಡಿದ್ದೇನೆ. ಸೋಮವಾರ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೂ ರವಾನೆಯಾಗಲಿದೆ.

ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ, ಮೈಸೂರು

ಕೊರೋನದಿಂದ ಮೃತ ಪಟ್ಟ ಕುಟುಂಬದವರಿಗೆ ಪರಿಹಾರ ಘೋಷಣೆ ಮಾಡಿ ತಲುಪಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದ್ದು, ಪರಿಹಾರದ ಹೆಸರಿನಲ್ಲೂ ಬಿಜೆಪಿ ಸರಕಾರ ವಂಚನೆ ಮಾಡುತ್ತಿದೆ.

-ಆರ್.ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ನೇರಳೆ ಸತೀಶ್‌ಕುಮರ್

contributor

Editor - ನೇರಳೆ ಸತೀಶ್‌ಕುಮರ್

contributor

Similar News