ಪರಿಸ್ಥಿತಿ ಹದಗೆಡಲು ಅಮೆರಿಕದ ದಿಢೀರ್ ಸೇನಾ ವಾಪಸಾತಿ ನಿರ್ಧಾರ ಕಾರಣ: ಅಫ್ಘಾನ್ ಅಧ್ಯಕ್ಷ ಆರೋಪ

Update: 2021-08-02 15:59 GMT
photo : PTI

ಕಾಬೂಲ್ (ಅಫ್ಘಾನಿಸ್ತಾನ), ಆ. 2: ಅಫ್ಘಾನಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ ಇಷ್ಟು ತೀವ್ರ ಗತಿಯಲ್ಲಿ ಹದಗೆಡುತ್ತಿರುವುದಕ್ಕೆ ತನ್ನ ಸೈನಿಕರನ್ನು ವಾಪಸ್ ಕರೆಸಿಕಕೊಳ್ಳಲು ಅಮೆರಿಕ ತೆಗೆದುಕೊಂಡಿರುವ ದಿಢೀರ್ ನಿರ್ಧಾರವೇ ಕಾರಣವಾಗಿದೆ ಎಂದು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಸೋಮವಾರ ಆರೋಪಿಸಿದದಾರೆ. ಆದರೆ, ಪರಿಸ್ಥಿತಿಯನ್ನು ಆರು ತಿಂಗಳಲ್ಲಿ ನಿಯಂತ್ರಣಕ್ಕೆ ತರಲು ತನ್ನ ಸರಕಾರ ಯೋಜನೆಯೊಂದನ್ನು ರೂಪಿಸಿದೆ ಎಂದು ಹೇಳಿದರು.


ಅಫ್ಘಾನಿಸ್ತಾನದಲ್ಲಿರುವ ತನ್ನ ಸೈನಿಕರನ್ನು ಸೆಪ್ಟಂಬರ್ ವೇಳಗೆ ಸಾಂಪೂರ್ಣವಾಗಿ ವಾಪಸ್ ಕರೆಸಿಕೊಳ್ಳಲು ತಾನು ನಿರ್ಧರಿಸಿರುವುದಾಗಿ ಅಮೆರಿಕ ಘೋಷಿಸಿದಂದಿನಿಂದ ತಾಲಿಬಾನ್ ಉಗ್ರರು ಮೂರು ಪ್ರಾಂತೀಯ ರಾಜಧಾನಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಅದೂ ಅಲ್ಲದೆ, ದೇಶಾದ್ಯಂತ ತಮ್ಮ ಆಕ್ರಮಣಗಳನ್ನು ಹೆಚ್ಚಿಸಿದ್ದಾರೆ.

ಅಂತರ್ರಾಷ್ಟ್ರೀಯ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ದಿಢೀರ್ ನಿರ್ಧಾರವೇ ಸದ್ಯದ ಈ ಪರಿಸ್ಥಿತಿಗೆ ಕಾರಣ ಎಂದು ಅಫ್ಘಾನಿಸ್ತಾನದ ಸಂಸತ್ತಿನಲ್ಲಿ ಮಾಡಿದ ಭಾಷಣದ ವೇಳೆ ಅಶ್ರಫ್ ಹೇಳಿದರು.

ಆದರೆ, ಭದ್ರತಾ ಪರಿಸ್ಥಿತಿಯನ್ನು ಆರು ತಿಂಗಳಲ್ಲಿ ನಿಯಂತ್ರಣಕ್ಕೆ ತರುವ ಯೋಜನೆಯನ್ನು ಅಫ್ಘಾನ್ ಸರಕಾರ ಹೊಂದಿದೆ ಹಾಗೂ ಈ ಯೋಜನೆಗೆ ಅಮೆರಿಕ ಸರಕಾರ ಬೆಂಬಲ ನೀಡಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News