ಐತಿಹಾಸಿಕ ಮೂಲಸೌಕರ್ಯ ಕಾಯ್ದೆಗೆ ಅಮೆರಿಕ ಸೆನೆಟ್ ನಲ್ಲಿ ಅಂತಿಮ ರೂಪ

Update: 2021-08-02 16:12 GMT

ವಾಷಿಂಗ್ಟನ್, ಆ.2: 1 ಲಕ್ಷ ಕೋಟಿ ಡಾಲರ್ ಮೊತ್ತದ ಐತಿಹಾಸಿಕ ಮೂಲಸೌಕರ್ಯ ಅಭಿವೃದ್ಧಿ ಮಸೂದೆಗೆ ಅಮೆರಿಕದ ಸೆನೆಟ್ ಸದಸ್ಯರ ತಂಡ ರವಿವಾರ ಅಂತಿಮ ರೂಪು ನೀಡಿದ್ದು ಕೆಲವೇ ದಿನಗಳಲ್ಲಿ ಮಸೂದೆ ಅನುಮೋದನೆಗೊಳ್ಳುವ ನಿರೀಕ್ಷೆಯಿದೆ ಎಂದು ಡೆಮೊಕ್ರಾಟಿಕ್ ಮುಖಂಡ ಚಕ್ ಶುಮರ್ ಹೇಳಿದ್ದಾರೆ.

 ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಿ, ತೆರಿಗೆ ಏರಿಸದೆ ಉದ್ಯೋಗ ಸೃಷ್ಟಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ. ಆಡಳಿತ ಮತ್ತು ವಿಪಕ್ಷ ಸದಸ್ಯರ ಸಹಯೋಗದಲ್ಲಿ ಮಸೂದೆ ರೂಪುಗೊಂಡಿರುವುದು ಸೆನೆಟ್ ಕಾರ್ಯನಿರ್ವಹಿಸಬಲ್ಲದು ಎಂದು ತೋರಿಸಿಕೊಟ್ಟಿದೆ ಎಂದು ಸೆನೆಟ್ ಸದಸ್ಯರ ತಂಡ ಹೇಳಿದೆ. ರಿಪಬ್ಲಿಕನ್ ಸದಸ್ಯರಾದ ರಾಬ್ ಪೋರ್ಟ್ಮನ್, ಸುಸಾನ್ ಕಾಲಿನ್ಸ್, ಮಿಟ್ ರಾಮ್ನಿ, ಲೀಸಾ ಮುರ್ಕೋವ್ಸ್ಕಿ ಮತ್ತು ಬಿಲ್ ಕ್ಯಾಸಿಡಿ, ಡೆಮೊಕ್ರಾಟ್ ಸದಸ್ಯರಾದ ಕ್ರಿಸ್ಟಿನ್ ಸೀನೆಮ್, ಜೋ ಮ್ಯಾಂಚಿನ್, ಮಾರ್ಕ್ ವಾರ್ನರ್, ಜೀನ್ ಶಹೀನ್ ಮತು್ತ ಜಾನ್ ತೆಸ್ಟರ್ ತಂಡದಲ್ಲಿದ್ದರು.

ವಿಸ್ತರಿತ ಅಧಿವೇಶನದಲ್ಲಿ ದ್ವಿಪಕ್ಷೀಯ ತಂಡವು ಮೂಲಸೌಕರ್ಯ ಕಾಯ್ದೆಯ ವಿಷಯಗಳನ್ನು ಅಂತಿಮಗೊಳಿಸಿದೆ. ಇದಕ್ಕೆ ಅಗತ್ಯವಿರುವ ತಿದ್ದುಪಡಿಯನ್ನು ಅನ್ವಯಿಸಿದ ಬಳಿಕ ಕೆಲದಿನಗಳಲ್ಲೇ ಈ ಮಸೂದೆ ಜಾರಿಯಾಗುವ ನಿರೀಕ್ಷೆಯಿದೆ ಎಂದು ಶುಮರ್ ಹೇಳಿದ್ದಾರೆ. ಜೋ ಬೈಡೆನ್ ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖವಾಗಿದ್ದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಕರಡು ಮಸೂದೆ 2,700 ಪುಟಗಳಷ್ಟು ದೀರ್ಘವಿದ್ದು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ 1 ಲಕ್ಷ ಕೋಟಿ ಡಾಲರ್ ಅನುದಾನ ಒದಗಿಸಲಿದೆ. ಈ ಮಸೂದೆಯ ಕರಡುಪಟ್ಟಿ ಅಂತಿಮಗೊಳಿಸುವಲ್ಲಿ ವಿಪಕ್ಷಗಳ ಸದಸ್ಯರು ಭಾಗಿಯಾಗುವಂತೆ ಮಾಡುವಲ್ಲಿಯೂ ಬೈಡೆನ್ ಯಶಸ್ವಿಯಾಗಿದ್ದಾರೆ.
 
ಸಂಸತ್ತಿನಲ್ಲಿ ಈ ಮಸೂದೆಗೆ ಅನುಮೋದನೆ ದೊರೆತು ಕಾಯ್ದೆಯಾಗಿ ಜಾರಿಯಾದರೆ ಅಮೆರಿಕದ ರಸ್ತೆ, ಸೇತುವೆ, ಜಲಮಾರ್ಗನಿರ್ಮಾಣ ಯೋಜನೆಗಳಿಗೆ ಸರಕಾರದ ಹೆಚ್ಚುವರಿ ಅನುದಾನ ಲಭಿಸಲಿದೆ. ಜೊತೆಗೆ ಸ್ವಚ್ಛ ಇಂಧನ ಯೋಜನೆಯ ವಿಸ್ತರಣೆ(ಇಲೆಕ್ಟ್ರಿಕ್ ಬಸ್ ಹಾಗೂ ವಿದ್ಯುತ್ ಸ್ಥಾವರ ಯೋಜನೆ) ಹಾಗೂ ಎಲ್ಲಾ ಅಮೆರಿಕನ್ನರಿಗೆ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೌಲಭ್ಯ ಲಭ್ಯವಾಗಲಿದೆ ಎಂದು ಮೂಲಗಳು ಹೇಳಿವೆ. ಚೀನಾದ ಸರ್ವಾಧಿಕಾರಿ ಮಾದರಿಗೆ ಪರ್ಯಾಯವಾಗಿರುವ ಅಮೆರಿಕ ಮೂಲಸೌಕರ್ಯ ಅಭಿವೃದ್ಧಿ ಕಾಯ್ದೆಯು ನವೀನ ಪರಿಕಲ್ಪನೆಯ ಜತೆಗೆ ಅಮೆರಿಕದ ಮಧ್ಯಮ ವರ್ಗದ ಜನತೆಗೆ ಉದ್ಯೋಗ ಅವಕಾಶ ಮತ್ತು ಸ್ಥಿರ ಆದಾಯದ ಖಾತರಿ ಕಲ್ಪಿಸುವ ಗುರಿ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News