ಲೆಬನಾನ್: ಸ್ಫೋಟ ನಡೆದು ವರ್ಷ ಕಳೆದರೂ ಮಕ್ಕಳು ಆಘಾತದಲ್ಲಿ; ವಿಶ್ವಸಂಸ್ಥೆ

Update: 2021-08-03 16:16 GMT

ಬೈರೂತ್ (ಲೆಬನಾನ್), ಆ. 3: ಲೆಬನಾನ್ ರಾಜಧಾನಿ ಬೈರೂತ್ ನ ಬಂದರಿನಲ್ಲಿ ಬೃಹತ್ ಸ್ಫೋಟ ನಡೆದು ಒಂದು ವರ್ಷದ ಬಳಿಕವೂ, ಲೆಬನಾನ್ ನ ಮಕ್ಕಳು ಈಗಲೂ ಆಘಾತದಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.

‘‘ಲೆಬನಾನ್ನ ಪ್ರತಿ ಮೂರು ಕುಟುಂಬಗಳ ಪೈಕಿ ಒಂದರಲ್ಲಿ ಮಾನಸಿಕ ಆಘಾತದ ಲಕ್ಷಣಗಳನ್ನು ತೋರಿಸುವ ಮಕ್ಕಳಿದ್ದಾರೆ’’ ಎಂದು ವಿಶ್ವಸಂಸ್ಥೆಯ ಮಕ್ಕಳ ಘಟಕ ಯುನಿಸೆಫ್ ತಿಳಿಸಿದೆ. ಲೆಬನಾನ್ ನ 1,200 ಕುಟುಂಬಗಳ ಬಗ್ಗೆ ನಡೆಸಲಾಗಿರುವ ಸಮೀಕ್ಷೆಯಲ್ಲಿ ಈ ವಿಷಯ ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.

‘‘ವಯಸ್ಕರೂ ಆಘಾತದಿಂದ ಬಳಲುತ್ತಿದ್ದಾರೆ. ಪ್ರತಿ ಎರಡು ಕುಟುಂಬಗಳ ಪೈಕಿ ಒಂದರಲ್ಲಿ ಇಂಥ ಮಾನಸಿಕ ಆಘಾತದಿಂದ ಬಳಲುತ್ತಿರುವ ವಯಸ್ಕರು ಇದ್ದಾರೆ’’ ಎಂದು ಸ್ಫೋಟದ ಮೊದಲ ವಾರ್ಷಿಕ ದಿನದ ಮುನ್ನಾ ದಿನದಂದು ಪ್ರಕಟಗೊಂಡ ವರದಿಯೊಂದರಲ್ಲಿ ಯುನಿಸೆಫ್ ತಿಳಿಸಿದೆ.

2020 ಆಗಸ್ಟ್ 4ರಂದು ಬೈರೂತ್ ಬಂದರಿನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 6,500 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದಿಂದಾಗಿ ರಾಜಧಾನಿ ಬೈರೂತ್ ನ ಹೆಚ್ಚಿನ ಭಾಗಗಳಿಗೆ ಹಾನಿ ಸಂಭವಿಸಿದೆ.

‘‘ದುರಂತ ಘಟನೆಗಳು ನಡೆದ ಒಂದು ವರ್ಷದ ಬಳಿಕವೂ ಮಕ್ಕಳು ಆಘಾತದಿಂದಲೇ ಬದುಕುತ್ತಿದ್ದಾರೆ’’ ಎಂದು ಲೆಬನಾನ್ ನಲ್ಲಿರುವ ಯುನಿಸೆಫ್ ಪ್ರತಿನಿಧಿ ಯೂಕೀ ಮೊಕೊವೊ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News