ಅಫ್ಘಾನ್: ವಿವೇಚನಾರಹಿತ ದಾಳಿಗಳಿಂದ ನಾಗರಿಕರಿಗೆ ಗರಿಷ್ಠ ಹಾನಿ : ವಿಶ್ವಸಂಸ್ಥೆ ಎಚ್ಚರಿಕೆ

Update: 2021-08-03 16:25 GMT

 ಕಂದಹಾರ್ (ಅಫ್ಘಾನಿಸ್ತಾನ), ಆ. 3: ಅಫ್ಘಾನಿಸ್ತಾನದಲ್ಲಿ ವಿವೇಚನಾರಹಿತ ಗುಂಡು ಹಾರಾಟ ಮತ್ತು ವಾಯು ದಾಳಿಗಳು ನಾಗರಿಕರಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತಿವೆ ಎಂದು ವಿಶ್ವಸಂಸ್ಥೆ ಮಂಗಳವಾರ ಎಚ್ಚರಿಸಿದೆ.

ಹೆಲ್ಮಂಡ್ ಪ್ರಾಂತದ ರಾಜಧಾನಿ ಲಷ್ಕರ್ ಗಾಹ್ ಅನ್ನು ತಾಲಿಬಾನ್ ಉಗ್ರರಿಂದ ವಶಪಡಿಸಿಕೊಳ್ಳಲು ಅಫ್ಘಾನ್ ಸರಕಾರಿ ಪಡೆಗಳು ತೀವ್ರ ಹೋರಾಟದಲ್ಲಿ ತೊಡಗಿರುವಂತೆಯೇ ವಿಶ್ವಸಂಸ್ಥೆ ಈ ಎಚ್ಚರಿಕೆ ನಿಡಿದೆ.

ಲಷ್ಕರ್ ಗಾಹ್ನಲ್ಲಿ ಹಲವು ದಿನಗಳಿಂದ ಭೀಕರ ಯುದ್ಧ ನಡೆಯುತ್ತಿದೆ. ಅಲ್ಲಿನ ಹತ್ತಕ್ಕೂ ಅಧಿಕ ಸ್ಥಳೀಯ ರೇಡಿಯೊ ಮತ್ತು ಟಿವಿ ನಿಲಯಗಳನ್ನು ಉಗ್ರರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಂದು ತಾಲಿಬಾನ್ ಪರ ಚಾನೆಲ್ ಮಾತ್ರ ಈಗ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.

ತಾಲಿಬಾನ್ ಮುತ್ತಿಗೆಗೆ ಒಳಗಾಗಿರುವ ಇನ್ನೊಂದು ನಗರ ಹೆರಾತ್ನಲ್ಲೂ ಭೀಕರ ಯುದ್ಧ ನಡೆದಿದ್ದು, ಸರಕಾರಿ ಪಡೆಗಳು ಉಗ್ರರನ್ನು ಹಿಮ್ಮೆಟ್ಟಿಸಿವೆ. ಉಗ್ರರು ಹಿಮ್ಮೆಟ್ಟುತ್ತಿರುವುದನ್ನು ಕಂಡು ನಗರದ ನೂರಾರು ನಿವಾಸಿಗಳು ತಮ್ಮ ಮನೆಯ ಮೇಲ್ಛಾವಣಿಗಳಲ್ಲಿ ಜಮಾಯಿಸಿ ಹರ್ಷೋದ್ಗಾರಗೈದರು.

‘‘ತಾಲಿಬಾನ್ ನಡೆಸುತ್ತಿರುವ ನೆಲದ ಮೇಲಿನ ದಾಳಿಗಳು ಮತ್ತು ಸರಕಾರಿ ಪಡೆಗಳು ನಡೆಸುತ್ತಿರುವ ವಾಯು ದಾಳಿಗಳಿಂದ ನಾಗರಿಕರು ಗರಿಷ್ಠ ಹಾನಿಯನ್ನು ಅನುಭವಿಸುತ್ತಿದ್ದಾರೆ’’ ಎಂದು ಅಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ಕಚೇರಿ ಮಂಗಳವಾರ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News