ಸುವರ್ಣ ಯುಗದಿಂದ ವರ್ಣ ಯುಗದತ್ತ ಭಾರತದ ಶಿಕ್ಷಣ

Update: 2021-08-04 12:01 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಮತ್ತು ಲಾಕ್‌ಡೌನ್ ಹೆಸರಿನಲ್ಲಿ ಶಾಲೆಗಳು ಮುಂದೆಯೂ ಹೀಗೆಯೇ ಮುಚ್ಚಲ್ಪಟ್ಟರೆ, ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳು 'ಗೋ ಶಾಲೆ'ಗಳಾಗಿ ಪರಿವರ್ತನೆಯಾಗುವುದಲ್ಲಿ ಸಂಶಯವಿಲ್ಲ. ಜಾನುವಾರು ಮಾರಾಟಕ್ಕೆ ಸಂಬಂಧಿಸಿ ಸರಕಾರದ ನೀತಿಯಿಂದಾಗಿ ರೈತರು ಅನುಪಯುಕ್ತ ಜಾನುವಾರುಗಳನ್ನು ಸಾಕಲಾಗದೆ ಬೀದಿಗೆ ಬಿಡುತ್ತಿದ್ದಾರೆ. ಈ ದನಗಳು ಸಹಜವಾಗಿಯೇ ಮುಚ್ಚಿದ ಶಾಲೆಗಳ ಜಗಲಿಗಳನ್ನು ಆಶ್ರಯಿಸಿಕೊಂಡಿವೆ. ಮುಂದೊಂದು ದಿನ, ಈ ಎಲ್ಲ ಶಾಲೆಗಳನ್ನು ನಕಲಿ ಗೋರಕ್ಷಕರು 'ಗೋಶಾಲೆ'ಗಳಿಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರೆ ಸರಕಾರ ಅದಕ್ಕೆ ಸಮ್ಮತಿಸುವುದರ ಬಗ್ಗೆ ಯಾವ ಅನುಮಾನವೂ ಇಲ್ಲ. ಯಾಕೆಂದರೆ, ಶಾಲೆಗಳಿಗಿಂತ, ಗೋಶಾಲೆಗಳೇ ಹೆಚ್ಚು ಮತಗಳನ್ನು ತಂದುಕೊಡುತ್ತವೆ ಎನ್ನುವುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಂಡಿದ್ದಾರೆ. ಲಾಕ್‌ಡೌನ್ ಮುಗಿದು ದೇಶಾದ್ಯಂತ ಚಿತ್ರಮಂದಿರಗಳೂ ಜನರಿಗೆ ಮುಕ್ತವಾಗಿ ತೆರೆದಿವೆ. ಆದರೆ ಇಂದಿಗೂ ಶಾಲೆಗಳು ತೆರೆದಿಲ್ಲ. ಯಾಕೆಂದರೆ ಇವು ತೆರೆಯುವುದು ಈ ದೇಶದ ಪ್ರಭುತ್ವಕ್ಕೆ ಬೇಕಾಗಿಲ್ಲ. ಆದುದರಿಂದಲೇ, ಕೊರೋನ ಮತ್ತು ಲಾಕ್‌ಡೌನ್‌ನ್ನು ನೆಪವಾಗಿ ಬಳಸಿಕೊಂಡು ಶಾಲೆ ಆರಂಭವನ್ನು ರಾಜಕಾರಣಿಗಳು ಮುಂದೆ ಹಾಕುತ್ತಾ ಬರುತ್ತಿದ್ದಾರೆ.

ಭಾರತದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗೆ ನೋಂದಣಿ ಮಾಡಿಕೊಂಡಿರುವ ಸುಮಾರು 250 ಮಿಲಿಯನ್ ಮಕ್ಕಳು ಮಾರ್ಚ್ 2020ರಿಂದ ತಮ್ಮ ತರಗತಿಗೇ ಕಾಲಿರಿಸಿಲ್ಲ. ಕೊರೋನ ಸೋಂಕಿನ ಸಮಸ್ಯೆಯ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಲಾಕ್‌ಡೌನ್ ವಿಧಿಸಿದಂದಿನಿಂದ ಶಾಲೆಗಳು ಬಾಗಿಲು ಮುಚ್ಚಿ ಇದೀಗ 500 ದಿನಗಳೇ ಕಳೆದುಹೋಗಿವೆ. ಪರಿಣಾಮವಾಗಿ, ಒಂದು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಬಹುತೇಕ ಮಕ್ಕಳು ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಭಾರತದಲ್ಲಿ 4ರಲ್ಲಿ 1 ಮಕ್ಕಳು ಮಾತ್ರ ಆನ್‌ಲೈನ್ ಶಿಕ್ಷಣ ವ್ಯವಸ್ಥೆಗೆ ಅಗತ್ಯವಾಗಿರುವ ಡಿಜಿಟಲ್ ಸಾಧನ ಹಾಗೂ ಇಂಟರ್‌ನೆಟ್ ವ್ಯವಸ್ಥೆ ಹೊಂದಿದ್ದಾರೆ ಎಂದು ಶಿಕ್ಷಣ ಇಲಾಖೆಯ 2019-20ರ ಅಂಕಿ ಅಂಶದ ವರದಿ ತಿಳಿಸಿದೆ. ಕೆಲವು ರಾಜ್ಯಗಳು ಟಿವಿಯಲ್ಲಿ ಪಾಠಗಳನ್ನು ಪ್ರಸಾರ ಮಾಡುತ್ತಿವೆ. ಆದರೆ ಪಾಠದತ್ತ ಮಕ್ಕಳ ಗಮನ ಕೇಂದ್ರೀಕರಿಸಲು ಇಂತಹ ಪ್ರಯತ್ನ ಯಶಸ್ವಿಯಾಗದು ಎಂದು ಶಿಕ್ಷಣ ತಜ್ಞರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಜೀಂ ಪ್ರೇಮ್‌ಜಿ ವಿವಿಯ ಸಂಶೋಧಕರು 2021ರಲ್ಲಿ 5 ರಾಜ್ಯಗಳ 1,137 ಸರಕಾರಿ ಶಾಲೆಗಳ 2ರಿಂದ 6ನೇ ತರಗತಿವರೆಗಿನ 16,067 ವಿದ್ಯಾರ್ಥಿಗಳನ್ನು ಸಮೀಕ್ಷೆ ನಡೆಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಮಕ್ಕಳಲ್ಲಿ ಸರಾಸರಿ 92ಶೇ.ದಷ್ಟು ವಿದ್ಯಾರ್ಥಿಗಳು ಕನಿಷ್ಠ 1 ನಿರ್ದಿಷ್ಟ ಭಾಷಾ ಸಾಮರ್ಥ್ಯ ಕಳೆದುಕೊಂಡಿದ್ದರೆ, 82ಶೇ.ದಷ್ಟು ಮಕ್ಕಳು ಕನಿಷ್ಠ 1 ನಿರ್ದಿಷ್ಟ ಗಣಿತ ಸಾಮರ್ಥ್ಯವನ್ನು ಕಳೆದುಕೊಂಡಿದ್ದರು ಎಂಬುದು ಸಮೀಕ್ಷೆಯಲ್ಲಿ ಹೊರ ಬಿದ್ದಿತ್ತು. 2020ರ ಮೇ ತಿಂಗಳಿನಿಂದ ಜೂನ್ ಅವಧಿಯಲ್ಲಿ ಓಕ್ಸ್‌ಫಾಮ್ ಇಂಡಿಯಾ ಎಂಬ ಸ್ವಯಂಸೇವಾ ಸಂಸ್ಥೆ ಒಡಿಶಾ, ಜಾರ್ಖಂಡ್, ಛತ್ತೀಸ್‌ಗಡ ಮತ್ತು ಉತ್ತರಪ್ರದೇಶದ ಸುಮಾರು 500 ಶಿಕ್ಷಕರು ಹಾಗೂ 1,200 ಪೋಷಕರ ಸಮೀಕ್ಷೆ ನಡೆಸಿದ್ದು, ಇವರಲ್ಲಿ 80ಶೇ.ದಷ್ಟು ಪೋಷಕರು ಲಾಕ್‌ಡೌನ್ ಅವಧಿಯಲ್ಲಿ ತಮ್ಮ ಮಕ್ಕಳಿಗೆ ಯಾವುದೇ ರೀತಿಯ ಶಿಕ್ಷಣ ಲಭ್ಯವಾಗಿಲ್ಲ ಎಂದಿದ್ದಾರೆ. 5ರಲ್ಲಿ 4 ಮಕ್ಕಳಿಗೆ 2020-21ರ ಸಾಲಿನ ಪಠ್ಯಪುಸ್ತಕವೇ ಲಭಿಸಿಲ್ಲ. ಸರಕಾರದ ಆದೇಶವಿದ್ದರೂ ಮೂರನೇ ಒಂದರಷ್ಟು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಪ್ರಯೋಜನ ತಲುಪಿಲ್ಲ. ತಮಗೆ ಡಿಜಿಟಲ್ ಮಾಧ್ಯಮದ ಮೂಲಕ ಪಾಠ ಮಾಡಲು ಕಷ್ಟವಾಗುತ್ತಿದೆ ಎಂದು ಬಹುತೇಕ ಶಿಕ್ಷಕರು ಹೇಳಿದ್ದಾರೆ. ಮುಂದೆ ಶಾಲೆ ಆರಂಭವಾದರೂ 30ಶೇ.ದಷ್ಟು ಮಕ್ಕಳು ಮತ್ತೆ ಶಾಲೆಗೆ ಬರುವ ಸಾಧ್ಯತೆಯಿಲ್ಲ ಎಂದೂ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಹರ್ಯಾಣ ಸರಕಾರದ ಅಂಕಿ ಅಂಶ ಪ್ರಕಾರ, ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 12.5 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಹೊರಗುಳಿದಿದ್ದಾರೆ. ಉದ್ಯೋಗ ನಷ್ಟ, ವೇತನ ಕಡಿತ, ಆದಾಯಮಟ್ಟದಲ್ಲಿ ಇಳಿಕೆಯಾಗಿರುವುದರಿಂದ ಖಾಸಗಿ ಶಾಲೆಗಳ ಶುಲ್ಕ ಭರಿಸಲು ಹಲವು ಪೋಷಕರಿಗೆ ಕಷ್ಟವಾಗುತ್ತಿದೆ. ಶುಲ್ಕ ಭರಿಸದ ವಿದ್ಯಾರ್ಥಿಗಳನ್ನು ಆನ್‌ಲೈನ್ ಶಿಕ್ಷಣದಿಂದ ಹೊರಗಿರಿಸಿದ ಆರೋಪಗಳು ದೇಶಾದ್ಯಂತ ಕೇಳಿ ಬರುತ್ತಿವೆೆ. ದುರ್ಬಲ , ಕಡುಬಡವ ಕುಟುಂಬದಲ್ಲಿ ಬಾಲಕಾರ್ಮಿಕತೆ 280ಶೇ. ಹೆಚ್ಚಿರುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ಶಾಲೆಯು ಮಕ್ಕಳ ಸುರಕ್ಷಾ ಸ್ಥಳವಾಗಿದೆ. ಬಾಲ್ಯವಿವಾಹ, ಲೈಂಗಿಕ ಕಿರುಕುಳ ಮುಂತಾದ ಅಪಾಯ ಎದುರಾದರೆ ಅವರು ಈ ಬಗ್ಗೆ ಸ್ನೇಹಿತರಲ್ಲಿ ಅಥವಾ ಶಿಕ್ಷಕರಲ್ಲಿ ಹೇಳುತ್ತಾರೆ. ಶಾಲೆಯಲ್ಲಿ ಸ್ನೇಹಿತರ ಮೂಲಕವೇ ಮಕ್ಕಳ ಹೆಚ್ಚಿನ ದೂರುಗಳು ಸಲ್ಲಿಕೆಯಾಗುತ್ತವೆ. ಕಳೆದ ಎರಡು ವರ್ಷಗಳಲ್ಲಿ, ಈ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸರಕಾರ ವಿಫಲವಾಗಿದೆ. ಕೊರೋನ ಸೋಂಕಿನಿಂದಾಗಿ 2022ರ ವೇಳೆಗೆ ಜಾಗತಿಕವಾಗಿ 9 ಮಿಲಿಯನ್ ಮಕ್ಕಳು ಬಾಲಕಾರ್ಮಿಕರಾಗುವ ಮತ್ತು ಮುಂದಿನ ದಶಕದಲ್ಲಿ 10 ಮಿಲಿಯನ್ ಹೆಣ್ಣುಮಕ್ಕಳು ಬಾಲವಧುಗಳಾಗುವ ಅಪಾಯವಿದೆ ಎಂದು ಯುನಿಸೆಫ್ ಎಚ್ಚರಿಸಿದೆ.

ಮಕ್ಕಳನ್ನು ಶಾಲೆಯಿಂದ ದೂರ ಇರಿಸಿದರೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳು ಬೆಟ್ಟದಷ್ಟಿದ್ದರೂ ಭಾರತ ಸರಕಾರ ಮಾತ್ರ ಶಾಲೆಗಳನ್ನು ಮರು ಆರಂಭಿಸುವ ಬಗ್ಗೆ ಇನ್ನೂ ಆಸಕ್ತಿ ಹೊಂದಿರುವಂತೆ ಕಾಣುವುದಿಲ್ಲ. ದೇಶದಲ್ಲಿ ಕೊರೋನ ಸೋಂಕಿನ ಸಂಭಾವ್ಯ 3ನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗಬಹುದು ಎಂಬ ಊಹೆ ಇದಕ್ಕೆ ಒಂದು ಪ್ರಮುಖ ಕಾರಣ. ಆದರೆ ಈ ಭೀತಿ ಆಧಾರರಹಿತ ಎಂದು ತಜ್ಞರು ಹೇಳುತ್ತಾರೆ.ಶಾಲೆಗಳ ಆರಂಭವನ್ನು ಮತ್ತಷ್ಟು ವಿಳಂಬಿಸುವುದು ಸರಿಯಲ್ಲ. ಶಾಲೆ ಆರಂಭಿಸಲು ವಿಫಲವಾದರೆ ಕಳೆದ 3 ದಶಕಗಳಿಂದ ಮಕ್ಕಳ ಅಪೌಷ್ಟಿಕತೆ ಸಮಸ್ಯೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ ಸಮಸ್ಯೆ ಕಡಿಮೆಗೊಳಿಸಲು ಮಾಡಿದ ಶ್ರಮವೆಲ್ಲಾ ವ್ಯರ್ಥವಾಗಲಿದೆ. ಇದು ಗಂಭೀರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.

ಶಾಲೆ ವಿಳಂಬದ ಹಿಂದೆ ಸರಕಾರದ ಬೇಜವಾಬ್ದಾರಿ ಕಾರಣ ಎಂದು ಮೇಲ್ನೋಟಕ್ಕೆ ಭಾಸವಾಗುತ್ತಿದೆಯಾದರೂ, ಇದೊಂದು ಪೂರ್ವ ನಿಯೋಜಿತ ಸಂಚು ಕೂಡ. ದುರ್ಬಲ ಸಮುದಾಯವನ್ನು ಮತ್ತಷ್ಟು ದುರ್ಬಲವಾಗಿಸುವ ಕುರಿತಂತೆ ಕೇಂದ್ರ ಸರಕಾರ ಹೆಚ್ಚು ಆಸಕ್ತಿಯನ್ನು ಹೊಂದಿದೆ. ಮೀಸಲಾತಿಯ ಕುರಿತಂತೆ ಅದರ ನಿಲುವು, ಮೇಲ್‌ಜಾತಿಗೆ ನೀಡಿದ ಶೇ. 10 ಮೀಸಲಾತಿ, ಬಲಾಢ್ಯ ಜಾತಿಗಳಿಗೆ ನೀಡಿರುವ ಆದ್ಯತೆಗಳೆಲ್ಲ ಸರಕಾರದ ಇನ್ನೊಂದು ಅಜೆಂಡಾವನ್ನು ಹೊರಗೆಡಹುತ್ತದೆ. ಆನ್‌ಲೈನ್ ಶಿಕ್ಷಣದಿಂದಾಗಿ, ಶಿಕ್ಷಣ ವಲಯದಿಂದ ಹೊರಹಾಕಲ್ಪಡುವ ಶೇ. 75ರಷ್ಟು ವಿದ್ಯಾರ್ಥಿಗಳು ದುರ್ಬಲ ಜಾತಿಗಳಿಗೆ ಸೇರಿದವರು. ಆನ್‌ಲೈನ್ ಶಿಕ್ಷಣ ಶ್ರೀಮಂತ, ಮೇಲ್‌ಜಾತಿ ಮತ್ತು ಮೇಲ್‌ಮಧ್ಯಮ ವರ್ಗದ ಸಮಸ್ಯೆಯಾಗಿದ್ದರೆ ಅದು ಗಂಭೀರವಾಗಿ ಚರ್ಚೆಗೊಳಪಡುತ್ತಿತ್ತು. ಆನ್‌ಲೈನ್ ಶಿಕ್ಷಣ ಮೇಲಿನ ಜಾತಿ ಮತ್ತು ವರ್ಗಕ್ಕೆ ದೊಡ್ಡ ಮಟ್ಟದ ಆಘಾತವನ್ನು ಮಾಡಿಲ್ಲ. ಬದಲಿಗೆ, ಕೆಳವರ್ಗದ ಜನರು ಶಿಕ್ಷಣವಂಚಿತರಾಗುತ್ತಿರುವುದನ್ನು ಮೇಲ್‌ಜಾತಿ ಮತ್ತು ಮೇಲ್‌ವರ್ಗ ಸಂಭ್ರಮಿಸುತ್ತಿದೆ.

ಮೇಲ್‌ಜಾತಿ ಮತ್ತು ಮೇಲ್ವರ್ಗ ತಮ್ಮ ಮಕ್ಕಳಿಗೆ ಶಿಕ್ಷಣಕ್ಕಾಗಿ ಕೇವಲ ಆನ್‌ಲೈನ್‌ನನ್ನು ಮಾತ್ರ ಅವಲಂಬಿಸಿಲ್ಲ. ಮೇಲ್ ಜಾತಿ , ಮೇಲ್‌ವರ್ಗದ ಜನರು ಬಹುತೇಕ ಶಿಕ್ಷಿತರೇ ಆಗಿರುವುದರಿಂದ, ಮನೆ ಪಾಠಗಳಿಗೆ ಯಾವ ಸಮಸ್ಯೆಗಳೂ ಉಂಟಾಗುವುದಿಲ್ಲ. ಆದರೆ ಇತ್ತ ಕೆಳಜಾತಿ ಮತ್ತು ಕೆಳವರ್ಗದ ಜನರು ಶಿಕ್ಷಣದಿಂದ ಸಂಪೂರ್ಣ ಹೊರದಬ್ಬಲ್ಪಟ್ಟು, ಭವಿಷ್ಯದಲ್ಲಿ ದೇಶದ ಅತ್ಯುನ್ನತ ಉದ್ಯೋಗ, ಸ್ಥಾನಗಳಿಂದ ದೂರ ಉಳಿಯಬೇಕಾಗುತ್ತದೆ. ಮೀಸಲಾತಿಯಿಂದ ಅಲ್ಪಸ್ಪಲ್ಪ ಬದುಕು ಕಟ್ಟಿಕೊಂಡ ಸಮುದಾಯ ಮತ್ತೆ ಹಿಂದಿನ ಸ್ಥಿತಿಗೆ ಮರಳಬೇಕಾಗುತ್ತದೆ. ಆರ್ಥಿಕವಾಗಿ ಲಾಕ್‌ಡೌನ್ ಹೇಗೆ ಉಳ್ಳವರು ಮತ್ತು ಇಲ್ಲದವರ ನಡುವೆ ಅಂತರವನ್ನು ಹೆಚ್ಚಿಸಿದೆಯೋ, ಶಿಕ್ಷಣ ಕ್ಷೇತ್ರದಲ್ಲಿ ಈ ಅಂತರ ಸರಿಪಡಿಸಲಾಗದಷ್ಟು ವಿಸ್ತರಿಸಿದೆ. ದೇಶವನ್ನು ಮನುಕಾಲದ 'ಸು-ವರ್ಣ ಯುಗ'ಕ್ಕೆ ಕೊಂಡೊಯ್ಯುವುದು ಸದ್ಯದ ಸರಕಾರದ ಆದ್ಯತೆಯಾಗಿರುವುದರಿಂದ, ತಮ್ಮ ಉದ್ದೇಶ ಸಾಧನೆಗೆ ಲಾಕ್‌ಡೌನ್‌ನ್ನು ಅದು ಪರಿಣಾಮಕಾರಿಯಾಗಿ ಬಳಸುತ್ತಿರುವಂತಿದೆ. ಎಲ್ಲಿಯವರೆಗೆ ತಳಸ್ತರದ ಸಮುದಾಯ ಒಕ್ಕೊರಲಿನಲ್ಲಿ ಶಾಲೆ ಆರಂಭಕ್ಕಾಗಿ ಧ್ವನಿಯೆತ್ತುವುದಿಲ್ಲವೋ, ಅಲ್ಲಿಯವರೆಗೆ ಸರಕಾರ ಶಾಲೆಗಳ ಕುರಿತಂತೆ ಗಂಭೀರವಾಗಿ ಚಿಂತಿಸುವುದು ಸಾಧ್ಯವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News