ಅಥೆನ್ಸ್ ನಲ್ಲಿ ಭೀಕರ ಕಾಡ್ಗಿಚ್ಚು: ನಿಯಂತ್ರಣಕ್ಕೆ ಹರಸಾಹಸ

Update: 2021-08-04 17:27 GMT
photo :PTI

 ಅಥೆನ್ಸ್, ಆ.4: ಗ್ರೀಸ್ ರಾಜಧಾನಿ ಅಥೆನ್ಸ್ ನ ಹೊರವಲಯದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದು ಕಾಡ್ಗಿಚ್ಚು ನಿಯಂತ್ರಣಕ್ಕೆ ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದೆ. ಈ ಮಧ್ಯೆ ಈ ಪ್ರದೇಶದಲ್ಲಿರುವ ಸಾವಿರಾರು ಮಂದಿ ಸುರಕ್ಷಿತ ಸ್ಥಳಕ್ಕೆ ತೆರಳಿರುವುದಾಗಿ ವರದಿಯಾಗಿದೆ.

 ಮನೆಯೊಳಗೇ ಇರುವಂತೆ ಜನತೆಗೆ ಸಲಹೆ ನೀಡಲಾಗಿದೆ. ಸುಮಾರು 500ರಷ್ಟು ಅಗ್ನಿಶಾಮಕ ಯಂತ್ರಗಳು , 9 ಹೆಲಿಕಾಪ್ಟರ್ಗಳು, 5 ವಿಮಾನಗಳು, ಪೊಲೀಸ್ ಹಾಗೂ ಸೇನೆ ಕಾರ್ಯಾಚರಣೆಯಲ್ಲಿದ್ದು ಅಥೆನ್ಸ್ ಹೊರವಲಯದ ವೇರಿಂಪಾಂಪಿ ಮತ್ತು ತಾತೊಯ್ ಅರಣ್ಯಪ್ರದೇಶದಲ್ಲಿ ಕಾಡ್ಗಿಚ್ಚು ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎಂದು ಗ್ರೀಸ್ ನ ಅಗ್ನಿಶಾಮಕ ದಳ ಹೇಳಿದೆ.

ಈ ಪ್ರದೇಶದಲ್ಲಿ ಆರಂಭಿಸಿರುವ ಅಗ್ನಿಶಾಮಕ ದಳದ ತಾತ್ಕಾಲಿಕ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ನಾಗರಿಕ ಭದ್ರತಾ ವಿಭಾಗದ ಮುಖ್ಯಸ್ಥ ನಿಕೋಸ್ ಹರ್ದಾಲಿಯಾಸ್, ಮತ್ತೊಂದು ಪ್ರಯಾಸದ ರಾತ್ರಿ ಮುಗಿದಿದ್ದು ಅಗ್ನಿಶಾಮಕ ದಳದವರು 5 ಕಡೆ ಕಾಡ್ಗಿಚ್ಚನ್ನು ಬಹುತೇಕ ನಿಯಂತ್ರಿಸಲು ಯಶಸ್ವಿಯಾಗಿದ್ದಾರೆ. ಆದರೆ ಮಾಡಬೇಕಾದ ಕೆಲಸ ಇನ್ನೂ ಬಹಳಷ್ಟಿದೆ ಎಂದರು.

ಇನ್ನೂ ಹಲವೆಡೆ ಕಾಡ್ಗಿಚ್ಚು ಉರಿಯುತ್ತಿದೆ. ಕಾಡ್ಗಿಚ್ಚಿನ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಬಿಸಿಗಾಳಿ ಹೆಚ್ಚಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News