ಸಿರಿಯಾ ಗ್ರೆನೇಡ್ ದಾಳಿಯ ಆರೋಪಿ ಜರ್ಮನಿಯಲ್ಲಿ ಬಂಧನ

Update: 2021-08-04 15:53 GMT

 ಬರ್ಲಿನ್, ಆ.4: ಸಿರಿಯಾದ ರಾಜಧಾನಿ ದಮಾಸ್ಕಸ್ನಲ್ಲಿ ಜನವಸತಿ ಪ್ರದೇಶದಲ್ಲಿ ಗ್ರೆನೇಡ್ ದಾಳಿ ನಡೆಸಿದ ಆರೋಪಿಯನ್ನು ಯುದ್ಧಾಪರಾಧದ ಆರೋಪದಲ್ಲಿ ಜರ್ಮನ್ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

 2014ರಲ್ಲಿ ಕ್ಷಿಪಣಿ ಮೂಲಕ ನಡೆಸಿದ ಗ್ರೆನೇಡ್ ದಾಳಿಯಲ್ಲಿ ಕನಿಷ್ಟ 7 ಜನ ಮೃತಪಟ್ಟು ಮೂವರು ಗಾಯಗೊಂಡಿದ್ದರು. ಈ ದಾಳಿಯ ಶಂಕಿತ ಆರೋಪಿಯನ್ನು ಬುಧವಾರ ಬರ್ಲಿನ್ನಲ್ಲಿ ಬಂಧಿಸಿದ್ದು, ಜರ್ಮನಿಯ ಗೋಪ್ಯತೆ ನಿಯಮದ ಹಿನ್ನೆಲೆಯಲ್ಲಿ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಾಗದು. ಈತನನ್ನು ಮುವಾಫಕ್ ಅಲ್ ಡಿ ಎಂದಷ್ಟೇ ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೆಲೆಸ್ತೀನ್ ನಿರಾಶ್ರಿತರು ಹೆಚ್ಚಿನ ಸಂಖ್ಯೆಯಲ್ಲಿರುವ ದಮಾಸ್ಕಸ್ನ ಯಾರ್ವೌಕ್ ಜಿಲ್ಲೆಯಲ್ಲಿ ಪಡಿತರ ಅಂಗಡಿ ಎದುರು ಸರತಿ ಸಾಲಿನಲ್ಲಿ ನಿಂತಿದ್ದ ಜನರ ಮೇಲೆ ಕ್ಷಿಪಣಿ ಮೂಲಕ ಗ್ರೆನೇಡ್ ಉಡಾಯಿಸಲಾಗಿತ್ತು. ಈ ದಾಳಿಯ ಶಂಕಿತ ಆರೋಪಿ, ಈಗ ಬಂಧನದಲ್ಲಿರುವ ವ್ಯಕ್ತಿ ‘ಫ್ರೀ ಪೆಲೆಸ್ತೀನ್ ಮೂವ್ಮೆಂಟ್’ನ ಸದಸ್ಯ ಎಂದು ಹೇಳಲಾಗಿದೆ. ಈತನ ವಿರುದ್ಧ ಯುದ್ಧಾಪರಾಧದ ಜೊತೆಗೆ ಕೊಲೆ ಹಾಗೂ ಗಂಭೀರ ದೈಹಿಕ ಗಾಯ ಎಸಗಿದ ಪ್ರಕರಣ ದಾಖಲಿಸಲಾಗುವುದು. ಈತನನ್ನು ವಿಚಾರಣೆ ಪೂರ್ವ ತನಿಖೆಯ ಅವಧಿಯಲ್ಲಿ ಬಂಧನದಲ್ಲಿರಿಸಬೇಕೇ ಎಂಬ ಬಗ್ಗೆ ಅಲ್ಲಿನ ಫೆಡರಲ್ ನ್ಯಾಯಾಲಯ ಆದೇಶ ನೀಡಲಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News