ಅರ್ಚಕನಿಂದ ದಲಿತ ಬಾಲಕಿಯ ಮೇಲೆ ಅತ್ಯಾಚಾರ: ಟ್ವಿಟರ್‌ ನಾದ್ಯಂತ ವ್ಯಾಪಕ ಆಕ್ರೋಶ

Update: 2021-08-04 16:29 GMT

ಹೊಸದಿಲ್ಲಿ : ರಾಜಧಾನಿಯ ಕ್ಯಾಂಟೋನ್ಮೆಂಟ್ ಪ್ರದೇಶದಲ್ಲಿ ಒಂಬತ್ತು ವರ್ಷದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಪ್ರಕರಣದ ವಿರುದ್ಧ ವ್ಯಾಪಕ ಆಕ್ರೋಶ ಮೂಡಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಜನರು  ಆಗ್ರಹಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ದಲಿತ್‍ ಲೈವ್ಸ್ ಮ್ಯಾಟರ್ ಹ್ಯಾಶ್ ಟ್ಯಾಗ್ ಕೂಡ ಟ್ರೆಂಡಿಂಗ್ ಆಗಿದೆ.

ಕ್ಯಾಂಟೋನ್ಮೆಂಟ್ ಪ್ರದೇಶದ ನಂಗಲ್ ಗ್ರಾಮದಲ್ಲಿ ವಾಸಿಸುತ್ತಿದ್ದ ದಲಿತ ಬಾಲಕಿ ಹತ್ತಿರದ ಚಿತಾಗಾರದ ಕೂಲರ್‍ನಿಂದ ನೀರು ತರಲೆಂದು ಹೋಗಿದ್ದ ಸಂದರ್ಭ ಕಾಮಪಿಪಾಸುಗಳ ದಾಹಕ್ಕೆ ಬಲಿಯಾಗಿದ್ದಳು. ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಅವಸವಸರವಾಗಿ ಮಾಡಿದ್ದು ಹಲವರಿಗೆ ಉತ್ತರ ಪ್ರದೇಶದ ಹತ್ರಸ್ ಘಟನೆಯನ್ನು ನೆನಪಿಸಿತ್ತು.

ಸಫಾಯಿ ಕರ್ಮಚಾರಿ ಆಂದೋಲನ್‍ನ ಬೆಝ್ವಾಡ ವಿಲ್ಸನ್ ಅವರು ಟ್ವೀಟ್ ಮಾಡಿ "#ಹತ್ರಸ್ ಭೀಭತ್ಸತೆ ದಿಲ್ಲಿಯಲ್ಲಿ ಪುನರಾವರ್ತಿಸಿದೆ. ದಲಿತ ಬಾಲಕಿಯ ಮೇಲೆ ಸ್ಮಶಾನದಲ್ಲಿ ಅತ್ಯಾಚಾರಗೈದು ಅರ್ಚಕನೊಬ್ಬ ಕುಟುಂಬದ ಸಮ್ಮತಿಯಿಲ್ಲದೆ ಅಂತ್ಯಕ್ರಿಯೆ ನಡೆಸಿದ್ದಾನೆ. ಪೊಲೀಸರು ಎಂದಿನಂತೆ ಇದನ್ನು  ಮುಚ್ಚಿ ಹಾಕಲು ಯತ್ನಿಸಿದ್ದಾರೆ. ನಾವು ಇಂತಹ ಭಯಾನಕ ಅಪರಾಧಗಳಿಗೆ ಮೌನಪ್ರೇಕ್ಷಕರಾಗಿಯೇ ಉಳಿಯಲಿದ್ದೇವೆಯೇ?" ಎಂದು ಪ್ರಶ್ನಿಸಿದ್ದಾರೆ.

ದಿ ದಲಿತ್ ವಾಯ್ಸ್ ಎಂಬ ಟ್ವಿಟ್ಟರ್ ಹ್ಯಾಂಡಲ್ ಇರುವವರೊಬ್ಬರು ಟ್ವೀಟ್ ಮಾಡಿ, "ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು  ನಂತರ ಅಪರಾಧಿಗಳನ್ನು ರಕ್ಷಿಸಲು ಬಲವಂತದಿಂದ ಅಂತ್ಯಕ್ರಿಯೆ ನಡೆಸಲಾಯಿತು, ಸಂತ್ರಸ್ತೆಯ ಕುಟುಂಬ ತನ್ನ ಹೇಳಿಕೆ ಬದಲಾಯಿಸುವಂತೆ ಪೊಲೀಸರು ರಾತ್ರಿಯಿಡೀ ಥಳಿಸಿದ್ದಾರೆ" ಎಂದು ಬರೆದಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ.

ದಿಲ್ಲಿ ಪೊಲೀಸರು ಚಿತಾಗಾರದ ಅರ್ಚಕ, 55 ವರ್ಷದ ರಾಧೇ ಶ್ಯಾಮ್  ಹಾಗೂ ಅಲ್ಲಿನ ಮೂವರು ಉದ್ಯೋಗಿಗಳಾದ ಸಲೀಂ, ಲಕ್ಷ್ಮೀ ನಾರಾಯಣ್ ಮತ್ತು ಕುಲದೀಪ್ ಅವರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News