ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಹೋಗಿ ತಾನೇ ಅಪಾಯದಲ್ಲಿ ಸಿಲುಕಿದ ಮಧ್ಯಪ್ರದೇಶ ಸಚಿವ

Update: 2021-08-05 06:12 GMT
Photo: Twitter/@Anurag_Dwary

ಭೋಪಾಲ್: ಪ್ರವಾಹ ಪೀಡಿತ ದಟಿಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಜನರಿಗೆ ಸಹಾಯ ಮಾಡಲೆಂದು ತೆರಳಿದ್ದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರೇ ಪ್ರವಾಹದಲ್ಲಿ ಸಿಲುಕಿದ ಪರಿಣಾಮ ಅಂತಿಮವಾಗಿ ಅವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಎದುರಾದ ಘಟನೆ ನಡೆದಿದೆ.

ದಟಿಯಾ ಜಿಲ್ಲೆಯಲ್ಲಿ ಸಚಿವರು ಸಮೀಕ್ಷೆ ನಡೆಸುತ್ತಿದ್ದ ವೇಳೆ ಮನೆಯೊಂದರ ಛಾವಣಿಯಲ್ಲಿ ಒಂಬತ್ತು ಜನರು ಸಿಲುಕಿರುವುದು ಹಾಗೂ ಸುತ್ತಲೂ ಜಲಾವೃತವಾಗಿದ್ದನ್ನು ಗಮನಿಸಿದ್ದರು. ಮನೆಯ ಟೆರೇಸ್ ಹೊರತುಪಡಿಸಿ ಇಡೀ ಪ್ರದೇಶ ಜಲಾವೃತವಾಗಿತ್ತು. ಮಿಶ್ರಾ ಅವರ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಈ ಪ್ರದೇಶ ಬರುತ್ತಿದೆ. ಟೆರೇಸಿನಲ್ಲಿರುವ  ಜನರನ್ನು ನೋಡಿದ ರಾಜ್ಯ ವಿಪತ್ತು ನಿರ್ವಹಣಾ ತಂಡದ ಬೋಟಿನಲ್ಲಿದ್ದ ಮಿಶ್ರಾ ಇನ್ನೂ ಕೆಲ ಇತರರೊಂದಿಗೆ ಆ ಜನರಿರುವಲ್ಲಿಗೆ ಕಷ್ಟಪಟ್ಟು ತಲುಪಿದ್ದರು. ಇನ್ನೇನು ಆ ಜನರನ್ನು ರಕ್ಷಿಸಬೇಕೆನ್ನುವಷ್ಟರಲ್ಲಿ ಮರವೊಂದು ನೇರವಾಗಿ ಬೋಟಿನ ಮೇಲೆ ಉರುಳಿದ ಪರಿಣಾಮ ಬೋಟಿನ ಇಂಜಿನ್ ಸ್ಟಾರ್ಟ್ ಆಗಿರಲಿಲ್ಲ.

ತಕ್ಷಣ ಸಚಿವರು  ಸಂಬಂಧಿತರಿಗೆ ಮಾಹಿತಿ ನೀಡಿದ ನಂತರ ಅಲ್ಲಿಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಆಗಮಿಸಿತ್ತು. ಮೊದಲು ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಿದ ನಂತರ ಮಿಶ್ರಾ ಅವರನ್ನು ರಕ್ಷಿಸಲಾಯಿತು.

ಸಚಿವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ರಾಜ್ಯದ ವಿಪಕ್ಷ ಕಾಂಗ್ರೆಸ್ ಇದೊಂದು ತಪ್ಪಾಗಿ ಹೋದ ಪ್ರಚಾರ ತಂತ್ರ ಎಂದು ಬಣ್ಣಿಸಿದೆ. "ಸಚಿವರು ಸ್ಪೈಡರ್ ಮ್ಯಾನ್ ರೀತಿಯಲ್ಲಿ ಸಾಹಸ ಕಾರ್ಯ ನಡೆಸಲು ಹೋಗಿ ಅವರಿಗಷ್ಟೇ ಅಲ್ಲದೆ ಅಲ್ಲಿ ಸಿಲುಕಿದ್ದ ಜನರಿಗೆ ಹಾಗೂ ಅವರೊಂದಿಗೆ ಹೋದ ಜನರನ್ನೂ ಅಪಾಯಕ್ಕೊಡ್ಡಿದ್ದರು,'' ಎಂದು ಕಾಂಗ್ರೆಸ್ ನಾಯಕ ಭೂಪೇಂದ್ರ ಗುಪ್ತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News