ಜ.6ರ ದಾಳಿ ಅಧಿಕಾರಕ್ಕಾಗಿ ಭಯೋತ್ಪಾದಕರು ನಡೆಸಿದ ಹಿಂಸಾತ್ಮಕ ಪ್ರಯತ್ನವಾಗಿತ್ತು: ಜೊ ಬೈಡೆನ್
ಹೊಸದಿಲ್ಲಿ,ಆ.5 : ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಜನವರಿ 6ರಂದು ಅಮೆರಿಕದ ಸಂಸತ್‌ಭನವನ ‘ಕ್ಯಾಪಿಟೊಲ್ ಹಿಲ್’ ಮೇಲೆ ನಡೆಸಿದ ದಾಳಿಯು, ಅಮೆರಿಕದ ಜನತೆಯ ಇಚ್ಛೆಯನ್ನು ಬುಡಮೇಲುಗೊಳಿಸುವ ಉದ್ದೇಶದಿಂದ ‘‘ಭಯೋ ತ್ಪಾದಕರು’’ ನಡೆಸಿದ ದಂಗೆಯಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಹೇಳಿದ್ದಾರೆ.
ಸಂಸತ್‌ಭವನದ ಮೇಲೆ ನಡೆದ ದಾಳಿಯನ್ನು ಎದುರಿಸಿದ ಕ್ಯಾಪಿಟಲ್ ಹಿಲ್ ಹಾಗೂ ವಾಶಿಂಗ್ಟನ್ ಡಿಸಿ ಹಾಗೂ ಮೆಟ್ರೋಪಾಲಿಟನ್ ಪೊಲೀಸರಿಗೆ ಶೌರ್ಯಪ್ರಶಸ್ತಿ ನೀಡುವ ವಿಧೇಯಕಕ್ಕೆ ಸಹಿಹಾಕಿ ಮಾತನಾಡುತ್ತಿದ್ದ ಅವರು ನನ್ನ ಸಹ ಅಮೆರಿಕನ್ನರೇ ಇದೆಲ್ಲಾ ಯಾವುದರ ಕುರಿತಾಗಿದೆ ಎಂಬುದನ್ನು ನೆನಪಿಸಿಕೊಳ್ಳೋಣ ಎಂದು ಬೈಡೆನ್ ಕ್ಯಾಪಿಟೊಲ್ ಹಿಲ್ ಘಟನೆಯನ್ನು ಪ್ರಸ್ತಾಪಿಸುತ್ತಾ ತಿಳಿಸಿದರು.
‘‘ಅಮೆರಿಕದ ಜನತೆಯ ಇಚ್ಛೆಯನ್ನು ಬುಡಮೇಲು ಗೊಳಿಸುವ, ಎಷ್ಟೇ ಬೆಲೆತೆತ್ತಾದರೂ ಅಧಿಕಾರ ವಶಪಡಿಸಿಕೊಳ್ಳುವ ಮತ್ತು ಕ್ರೂರವಾದ ಶಕ್ತಿಯನ್ನು ಬಳಸಿ ಮತಪತ್ರಗಳನ್ನು ಪಲ್ಲಟಗೊಳಿಸುವ ಹಿಂಸಾತ್ಮಕ ಪ್ರಯತ್ತ ಇದಾಗಿತ್ತು. ಇದರ ಉದ್ದೇಶ ನಿರ್ಮಾಣವಲ್ಲ, ನಾಶಪಡಿಸುವುದಾಗಿತ್ತು. ಪ್ರಜಾಪ್ರಭುತ್ವವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಅದು ಇದ್ದಲ್ಲಿ ಎಲ್ಲವೂ ಇದ್ದಂತೆ’’ ಎಂದು ಬೈಡೆನ್ ಮಾರ್ಮಿಕವಾಗಿ ಹೇಳಿದರು.
ಕ್ಯಾಪಿಟಲ್ ಹಿಲ್ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಪೊಲೀಸ್ ಅಧಿಕಾರಿಗಳಿಗೆ ಶೌರ್ಯ ಪುರಸ್ಕಾರ ಪ್ರದಾನ ಮಾಡುವ ವಿಧೇಯಕಕ್ಕೆ ಸಹಿಹಾಕಿದರು. ಶ್ವೇತಭವನದ ರೋಸ್‌ಗಾರ್ಡನ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಬೈಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸಹಿಹಾಕಿದರು.
ಬೈಡೆನ್ ಅವರ ಚುನಾವಣಾ ಗೆಲುವಿನ ಪ್ರಮಾಣೀಕರಣ ಸಮಾರಂಭಕ್ಕೆ ಅಡ್ಡಿಪಡಿಸುವುದಕ್ಕಾಗಿ ಜನವರಿ 6ರಂದು ಟ್ರಂಪ್ ಬೆಂಬಲಿಗರ ಉದ್ರಿಕ್ತ ಗುಂಪೊಂದು ಕ್ಯಾಪಿಯೊಟಲ್ ಹಿಲ್‌ನಲ್ಲಿ ದಾಂಧಳೆ ನಡೆಸಿದಾಗ ನಡೆದ ಘರ್ಷಣೆಯಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು , ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ನಾಲ್ವರು ಪೊಲೀಸ್ ಅಧಿಕಾರಿಗಳು ಹೇಳಿಕೆ ನೀಡಿ,ಕ್ಯಾಪಿಟಲ್ ಹಿಲ್ ದಾಳಿಯು ತಮ್ಮ ಮನಸ್ಸು ಹಾಗೂ ದೇಹದ ಮೇಲೆ ಮಾಸದಂತಹ ಗಾಯಗಳನ್ನುಂಟು ಮಾಡಿವೆ ಎಂದು ಹೇಳಿದ್ದರು.
‘ಕಾಂಗ್ರೆಶನಲ್ ಚಿನ್ನದ ಪದಕ’ಗಳನ್ನು ಪ್ರದಾನ ಮಾಡುವ ಕಾನೂನಿಗೆ ಸಹಿಹಾಕಿದ ಪೆನ್ನನ್ನು ಕ್ಯಾಪಿಟೊಲ್ ಹಿಲ್ ಘರ್ಷಣೆಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿ ವಿಲಿಯಂ ಇವಾನ್ಸ್ ಅವರ ಪುತ್ರಿ ಅಬಿಗೈಲ್ ಇವಾನ್ಸ್ ಅವರ ಪುತ್ರಿಗೆ ಹಸ್ತಾಂತರಿಸಿದರು.